ಟೀಮ್ ಇಂಡಿಯಾದ ಮಾಜಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಿಂದ ಹೊರಬರಲು ಹೊರಾಡುತ್ತಿದ್ದಾರೆ. ಅವರ ಇತ್ತೀಚಿನ ಫಾರ್ಮ್ ಬಗ್ಗೆ ಕೂಡ ನಾನಾ ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ. ಇದರ ನಡುವೆ ಫಾರ್ಮ್ನಲ್ಲಿ ಇಲ್ಲದವರನ್ನು ಕೈಬಿಟ್ಟು, ಇತರೆ ಆಟಗಾರರಿಗೆ ಚಾನ್ಸ್ ನೀಡಬೇಕೆಂಬ ಸಲಹೆಗಳು ಕೂಡ ಕೇಳಿ ಬರುತ್ತಿದೆ. ಇಂತಹ ಸಲಹೆ, ಟೀಕೆ ಎಲ್ಲವೂ ಬಂದು ನಿಲ್ಲುತ್ತಿರುವುದು ವಿರಾಟ್ ಕೊಹ್ಲಿಯ ವಿರುದ್ದ ಎಂಬುದು ವಿಶೇಷ. ಅಂದರೆ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾದಿಂದ ಕೈಬಿಡಬೇಕೆಂದು ಕೂಗುಗಳು ಜೋರಾಗಿ ನಡೆಯುತ್ತಿದೆ. ಇದಾಗ್ಯೂ ಬಿಸಿಸಿಐ ಅವರಿಗೆ ವಿಶ್ರಾಂತಿ ನೀಡುತ್ತಿದೆ ಹೊರತು ತಂಡದಿಂದ ಇದುವರೆಗೆ ಕೈಬಿಟ್ಟಿಲ್ಲ ಎಂಬುದು ವಿಶೇಷ. ಇದಕ್ಕೇನು ಕಾರಣ ಎಂಬುದನ್ನು ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪನೇಸರ್, ಕೊಹ್ಲಿಯನ್ನು ಹೊರಹಾಕುವುದು ಸುಲಭವಲ್ಲ. ಇದಕ್ಕೆ ಬಿಸಿಸಿಐಗೂ ತುಂಬಾ ಧೈರ್ಯ ಬೇಕು. ಈ ಎದೆಗಾರಿಕೆ ಬಿಸಿಸಿಐಗೆ ಇಲ್ಲ. ಹೀಗಾಗಿಯೇ ಕೊಹ್ಲಿ ಸ್ಥಾನ ಸೇಫ್ ಆಗಿದೆ ಎಂದು ಮಾಂಟಿ ಪನೇಸರ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೊಹ್ಲಿಯನ್ನು ಬಿಸಿಸಿಐ ಕೈ ಬಿಡಲು ಹಿಂದೇಟು ಹಾಕಲು ಮುಖ್ಯ ಕಾರಣ ಅವರ ಬ್ರಾಂಡ್ ವಾಲ್ಯೂ. ಒಂದು ವೇಳೆ ಕೊಹ್ಲಿಯನ್ನು ತಂಡದಿಂದ ಹೊರಗಿಟ್ಟರೆ ಅದು ಬಿಸಿಸಿಐ ಮೇಲೆ ಪರಿಣಾಮ ಬೀರಲಿದೆ ಎಂದು ಪನೇಸರ್ ಹೇಳಿದ್ದಾರೆ.
ಕೊಹ್ಲಿಯನ್ನು ತಂಡದಿಂದ ಕೈಬಿಡುವುದು ಕಷ್ಟ. ಏಕೆಂದರೆ ಅವರು ವಿಶ್ವದ ಅತಿ ಹೆಚ್ಚು ಬ್ರಾಂಡ್ ವಾಲ್ಯೂ ಹೊಂದಿರುವ ಕ್ರಿಕೆಟಿಗ ಅವರು. ಸಚಿನ್ ತೆಂಡೂಲ್ಕರ್ ನಂತರ ಅವರು ಆ ಸ್ಥಾನವನ್ನು ತುಂಬಿದ್ದಾರೆ. ಹಾಗಾಗಿ ಆರ್ಥಿಕವಾಗಿ ಪ್ರತಿಯೊಬ್ಬರೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಥವಾ ಮೈದಾನದಲ್ಲಿ ಅವರನ್ನು ನೋಡಲು ಬಯಸುತ್ತಾರೆ. ಅಭಿಮಾನಿಗಳು ಅವರನ್ನು ತುಂಬಾ ಪ್ರೀತಿಸುತ್ತಾರೆ. ನಾವೆಲ್ಲರೂ ವಿರಾಟ್ ಮತ್ತು ಅವರ ನಾಯಕತ್ವವನ್ನು ಪ್ರೀತಿಸುತ್ತೇವೆ. ಅವರಿಗಿರುವ ಫ್ಯಾನ್ ಫಾಲೋಯಿಂಗ್ ಕೂಡ ಇಲ್ಲಿ ಮುಖ್ಯವಾಗುತ್ತದೆ. ಏಕೆಂದರೆ ಕೊಹ್ಲಿಯಂತಹ ಆಟಗಾರರು ಇರುವುದರಿಂದ ಬಿಸಿಸಿಐ ಹೆಚ್ಚಿನ ಪ್ರಾಯೋಜಕತ್ವವನ್ನು ಪಡೆಯುತ್ತಿದೆ. ಹೀಗಾಗಿ ಆರ್ಥಿಕತೆಯ ದೃಷ್ಟಿಯಿಂದ ಕೂಡ ಕೊಹ್ಲಿ ತಂಡದಲ್ಲಿ ಇರಬೇಕಾಗುತ್ತದೆ. ಇಂತಹದೊಂದು ಒತ್ತಡ ಬಿಸಿಸಿಐ ಮೇಲಿದೆ ಎಂದು ಮಾಂಟಿ ಪನೇಸರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ ಆಡುವಾಗ, ಕ್ರೀಡಾಂಗಣವು ಪ್ರಾಯೋಜಕರಿಂದ ತುಂಬಿರುತ್ತದೆ. ವಿರಾಟ್ ಕೊಹ್ಲಿ ಅವರ ಆಟದಿಂದ ಇತರ ಮಂಡಳಿಗಳು ಸಾಕಷ್ಟು ಪ್ರಯೋಜನ ಪಡೆಯುತ್ತವೆ. ಆದರೆ ಇದೀಗ ಭಾರತ ತಂಡಕ್ಕೆ ನಿಜವಾಗಿಯೂ ಕೊಹ್ಲಿಯ ಅವಶ್ಯಕತೆ ಇದೆಯಾ? ಎಂಬುದನ್ನು BCCI ಆಯ್ಕೆದಾರರೊಂದಿಗೆ ಕುಳಿತು ಚರ್ಚಿಸಬೇಕಾಗಿದೆ. ಏಕೆಂದರೆ T20 ವಿಶ್ವಕಪ್ ಅಥವಾ ಏಕದಿನ ವಿಶ್ವಕಪ್‌ನಂತಹ ದೊಡ್ಡ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವದ ದೃಷ್ಟಿಕೋನದಿಂದ, ಅವರು ಬಹುಶಃ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಹೀಗಾಗಿ ತಂಡದಲ್ಲಿ ಕೊಹ್ಲಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣದಿಂದಾಗಿ ನಾನು ವಿರಾಟ್ ಕೊಹ್ಲಿಯನ್ನು ಕೈಬಿಡುವ ಧೈರ್ಯ ಬಿಸಿಸಿಐಗೆ ಇಲ್ಲ ಎಂದಿರುವುದಾಗಿ ಪನೇಸರ್ ಸ್ಪಷ್ಟಪಡಿಸಿದರು.
ಇಲ್ಲಿ ಒಬ್ಬ ಆಟಗಾರನ ಬ್ರಾಂಡ್ ವ್ಯಾಲ್ಯೂ ಕೂಡ ಮುಖ್ಯವಾಗುತ್ತದೆ. ಏಕೆಂದರೆ ಕ್ರಿಸ್ಟಿಯಾನೋ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್‌ಗಾಗಿ ಆಡಿದಾಗ, ಎಲ್ಲರೂ ಫುಟ್‌ಬಾಲ್ ವೀಕ್ಷಿಸುತ್ತಾರೆ. ಟೈಗರ್ ವುಡ್ಸ್ ಯಾವುದೇ ಪಂದ್ಯಾವಳಿಯಲ್ಲಿ ಪಾಲ್ಗೊಂಡಾಗ, ನಾವೆಲ್ಲರೂ ಅವರ ಆಟವನ್ನು ವೀಕ್ಷಿಸಲು ಬಯಸುತ್ತೇವೆ. ಅವರು ಗೆಲ್ಲುತ್ತಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ವಿರಾಟ್ ಕೊಹ್ಲಿ ಕೂಡ ಅಷ್ಟೇ. ಅವರು ಅಪಾರವಾದ ಫಾಲೋವರ್ಸ್ ಮತ್ತು ಮೌಲ್ಯವನ್ನು ಹೊಂದಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲು ಸಾಧ್ಯವಿಲ್ಲ. ಒಂದು ವೇಳೆ ತಂಡದಿಂದ ಕೈಬಿಟ್ಟರೆ ಬಿಸಿಸಿಐ ದೊಡ್ಡ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಳ್ಳುತ್ತಾರೆ ಎಂದು ಮಾಂಟಿ ಪನೇಸರ್ ಅಭಿಪ್ರಾಯಪಟ್ಟರು.
Published On - 12:10 pm, Sat, 16 July 22