
ವಿಶ್ವ ಕ್ರಿಕೆಟ್ನ ಅಕ್ಷರಶಃ ಆಳುತ್ತಿರುವ ಮಂಡಳಿಯೆಂದರೆ ಅದು ಬಿಸಿಸಿಐ (BCCI) ಎಂದರೆ ತಪ್ಪಾಗಲಾರದು. ತನ್ನ ಹಣ ಬಲ ಮತ್ತು ಜಾಣ್ಮೆಯಿಂದ ಕ್ರಿಕೆಟ್ ಲೋಕದ ದೊಡ್ಡಣ್ಣ ಎನಿಸಿಕೊಂಡಿರುವ ಬಿಸಿಸಿಐ, ಕ್ರಿಕೆಟ್ ಮೇಲೆ ತನ್ನ ಹಿಡಿತವನ್ನು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಬಿಗಿಗೊಳಿಸುತ್ತಿದೆ. ಕ್ರಿಕೆಟ್ನಲ್ಲಿ ಬಿಸಿಸಿಐಗೆ ಇಷ್ಟೊಂದು ಮನ್ನಣೆ ಸಿಗಲು ಪ್ರಮುಖ ಕಾರಣ ಕಾಜಾಣ. ವರ್ಷದಿಂದ ವರ್ಷಕ್ಕೆ ತನ್ನ ಆದಾಯದಲ್ಲಿ ಭಾರಿ ಹೆಚ್ಚಳವನ್ನು ಕಾಣುತ್ತಿರುವ ಬಿಸಿಸಿಐಗೆ 2023-24 ರ ಆರ್ಥಿಕ ವರ್ಷದಲ್ಲಿ ಸರಿಸುಮಾರು ಹತ್ತು ಸಾವಿರ ಕೋಟಿ ಆದಾಯ ಹರಿದುಬಂದಿದೆ. ಇದರಲ್ಲಿ ಐಪಿಎಲ್ನದ್ದೇ (IPL) ಸಿಂಹಪಾಲಿದ್ದು, ಈ ಮಿಲಿಯನ್ ಡಾಲರ್ ಟೂರ್ನಿ ಒಂದರಿಂದಲೇ ಬಿಸಿಸಿಐ, 5761 ಕೋಟಿ ಆದಾಯ ಗಳಿಸಿದೆ. ಅಂದರೆ ಒಂದು ಆರ್ಥಿಕ ವರ್ಷದಲ್ಲಿ ಬಿಸಿಸಿಐ ಗಳಿಸಿರುವ ಆದಾಯದಲ್ಲಿ ಐಪಿಎಲ್ನದ್ದೇ 59 ಪ್ರತಿಶತದಷ್ಟು ಕೊಡುಗೆ ಇದೆ.
ದಿ ಹಿಂದೂ ಬಿಸಿನೆಸ್ ಲೈನ್ ವರದಿಯ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ ಬಿಸಿಸಿಐ 9741.7 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ಐಪಿಎಲ್ ಒಂದರಿಂದಲೇ 5761 ಕೋಟಿ ರೂ. ಸಂಪಾಧನೆಯಾಗಿದೆ. ವರದಿಯ ಪ್ರಕಾರ, ಅಂತರರಾಷ್ಟ್ರೀಯ ಪಂದ್ಯಾವಳಿಗಳ ಪ್ರಸಾರ ಹಕ್ಕುಗಳು ಸೇರಿದಂತೆ ಐಪಿಎಲ್ ಅಲ್ಲದ ಮಾಧ್ಯಮ ಹಕ್ಕುಗಳ ಮಾರಾಟದಿಂದ ಬಿಸಿಸಿಐ 361 ಕೋಟಿ ರೂ. ಗಳಿಸಿದೆ.
ಇಷ್ಟೇ ಅಲ್ಲ, ಕಳೆದ ಹಣಕಾಸು ವರ್ಷದಲ್ಲಿ ಮಂಡಳಿಯು ಬಡ್ಡಿಯಿಂದಲೇ 987 ಕೋಟಿ ರೂ. ಆದಾಯ ಗಳಿಸಿದೆ. ಈ ಅವಧಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ ಪಂದ್ಯಾವಳಿಗಳ ಆದಾಯದ ಪಾಲು) ವಿತರಣೆಯಿಂದ 1,042 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ಐಪಿಎಲ್ ಜೊತೆಗೆ, ಆದಾಯವನ್ನು ಹೆಚ್ಚಿಸಲು ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಅಥವಾ ಸಿಕೆ ನಾಯುಡು ಟ್ರೋಫಿಯಂತಹ ದೊಡ್ಡ ಪಂದ್ಯಾವಳಿಗಳನ್ನು ಆಯೋಜಿಸುವುದರಿಂದಲೂ ಬಿಸಿಸಿಐಗೆ ಆದಾಯ ಹರಿದಬರುತ್ತಿದೆ.
IND vs ENG: ಬುಮ್ರಾ ವಿಚಾರವನ್ನು ಬಹಿರಂಗಪಡಿಸಿದ್ಯಾಕೆ? ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ
ಐಪಿಎಲ್ ಯಶಸ್ಸಿನ ನಂತರ ಬಿಸಿಸಿಐ, ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಸಹ ಪ್ರಾರಂಭಿಸಿತು. ಇದುವರೆಗೆ ಮೂರು ಆವೃತ್ತಿಗಳನ್ನು ಕಂಡಿರುವ ಈ ಲೀಗ್ನಿಂದ 2023-24 ರ ಆರ್ಥಿಕ ವರ್ಷದಲ್ಲಿ 378 ಕೋಟಿ ರೂ. ಆದಾಯ ಬಂದಿದೆ. ಇದಲ್ಲದೆ, ಭಾರತ ತಂಡವು ಇತರ ದೇಶಗಳಲ್ಲಿ ಕ್ರಿಕೆಟ್ ಆಡಲು ಹೋದಾಗಲೂ ಮಂಡಳಿಗೆ ಆದಾಯ ಹರಿದುಬರುತ್ತದೆ. ಅದರಂತೆ ಆರ್ಥಿಕ ವರ್ಷದಲ್ಲಿ ಪುರುಷರ ಕ್ರಿಕೆಟ್ ತಂಡದ ಪ್ರವಾಸದಿಂದ ಮಂಡಳಿಗೆ 361 ಕೋಟಿ ರೂ. ಸಂಪಾಧನೆಯಾಗಿದೆ. ಇದು ಮಾತ್ರವಲ್ಲದೆ, 2023-24 ರಲ್ಲಿ ಬಿಸಿಸಿಐ ಇತರ ಮೂಲಗಳಿಂದ 400 ಕೋಟಿ ರೂ. ಗಳಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Fri, 18 July 25