
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಿಂದಾಗಿ (Bengaluru stadium stampede) 11 ಅಮಾಯಕರು ಪ್ರಾಣ ಬಿಟ್ಟಿದ್ದರು. ಸಾವನ್ನಪ್ಪಿದವರಿಗೆ ಸರ್ಕಾರದಿಂದ, ಆರ್ಸಿಬಿ (RCB) ಹಾಗೂ ಕೆಎಸ್ಸಿಎ ಇಂದ ಪರಿಹಾರ ಘೋಷಿಸಲಾಗಿದೆಯಾದರೂ, ಈ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಜೋರಾಗಿದೆ. ಇದಕ್ಕೆ ಪೂರಕವಾಗಿ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದೀಗ ಇದೆಲ್ಲದರ ನಡುವೆ ಭಾರತ ಕ್ರಿಕೆಟ್ನ ಬಿಗ್ ಬಾಸ್ ಬಿಸಿಸಿಐ (BCCI), ಈ ರೀತಿಯ ಘಟನೆಗಳು ಮತ್ತೆ ಜರುಗದಂತೆ ತಡೆಯಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಭವಿಷ್ಯದಲ್ಲಿ ಇಂತಹ ಯಾವುದೇ ಅವಘಡಗಳು ನಡೆಯದಂತೆ ತಪ್ಪಿಸಲು ಬಿಸಿಸಿಐ ಹೊಸ ನೀತಿಯನ್ನು ರೂಪಿಸುವುದಾಗಿ ಘೋಷಿಸಿದೆ. ಇದಕ್ಕಾಗಿ, ಮಂಡಳಿಯು ಹೊಸ ಸಮಿತಿಯನ್ನು ರಚಿಸಿದ್ದು, ಸಂಭ್ರಮಾಚರಣೆಯ ಮೆರವಣಿಗೆಯ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ. ಶನಿವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಹೊಸ ಮಾರ್ಗಸೂಚಿಯನ್ನು ರೂಪಿಸುವ ಜವಾಬ್ದಾರಿಯನ್ನು 3 ಸದಸ್ಯರ ಸಮಿತಿಗೆ ವಹಿಸಲಾಗಿದೆ.
ಶನಿವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ, ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದ್ದು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಪ್ರಮುಖ ನಿರ್ಧಾರವೆಂದರೆ ಬೆಂಗಳೂರು ಕಾಲ್ತುಳಿತಕ್ಕೆ ಸಂಬಂಧಿಸಿದೆ. ಸಭೆಯ ನಂತರ, ಬಿಸಿಸಿಐ ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮೊದಲನೆಯದಾಗಿ ಬೆಂಗಳೂರು ಕಾಲ್ತುಳಿತ ಮತ್ತು ಅಹಮದಾಬಾದ್ ವಿಮಾನ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದೆ. ಇದರೊಂದಿಗೆ, ಬೆಂಗಳೂರು ಕಾಲ್ತುಳಿತದಂತಃ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ನೋಡಿಕೊಳ್ಳಲು ಮಂಡಳಿಯು ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ.
ಆರ್ಸಿಬಿ ಗೆಲುವಿನ ಸೆಲೆಬ್ರೇಷನ್ ವೇಳೆ ಕಾಲ್ತುಳಿತ; ಕೊನೆಗೂ ಮೌನ ಮುರಿದ ದ್ರಾವಿಡ್
ಬಿಸಿಸಿಐ ತನ್ನ ಹೇಳಿಕೆಯಲ್ಲಿ, 3 ಸದಸ್ಯರ ಸಮಿತಿಯು ವಿವರವಾದ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತದೆ, ಇದನ್ನು ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳ ಸಮಯದಲ್ಲಿ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದೆ. ಈ ಸಮಿತಿಯು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ನೇತೃತ್ವದಲ್ಲಿರಲಿದ್ದು, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಖಜಾಂಚಿ ಪ್ರಭತೇಜ್ ಸಿಂಗ್ ಕೂಡ ಇದರ ಭಾಗವಾಗಿರುತ್ತಾರೆ. ಈ ಸಮಿತಿಯು 15 ದಿನಗಳಲ್ಲಿ ತನ್ನ ವರದಿ ಮತ್ತು ಮಾರ್ಗಸೂಚಿಗಳನ್ನು ಮಂಡಳಿಗೆ ಸಲ್ಲಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ