ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ
India vs Pakistan: ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಮುಖ್ಯ ಕಾರಣ ಬಿಸಿಸಿಐ. ಅಂದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಏಷ್ಯಾಕಪ್ನ ಎಲ್ಲಾ ಪಂದ್ಯಗಳು ಪಾಕ್ನಲ್ಲಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ತಿಳಿಸಿತ್ತು. ಹೀಗಾಗಿ ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲಿ ಏಷ್ಯಾಕಪ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಸೋಮವಾರ (ಸೆಪ್ಟೆಂಬರ್ 4) ಪಾಕಿಸ್ತಾನಕ್ಕೆ ತೆರಳಿದ್ದಾರೆ. ಏಷ್ಯಾಕಪ್ ಟೂರ್ನಿ ನಿಮಿತ್ತ ಪಾಕ್ ಕ್ರಿಕೆಟ್ ಮಂಡಳಿ ನೀಡಿದ ವಿಶೇಷ ಆಹ್ವಾನದ ಮೇರೆಗೆ ಬಿಸಿಸಿಐ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಾಕ್ಗೆ ಭೇಟಿ ನೀಡಿದ್ದಾರೆ. ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರೋಜರ್ ಬಿನ್ನಿ ಹಾಗೂ ರಾಜೀವ್ ಶುಕ್ಲಾ ಅವರು ಆ ಬಳಿಕ ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸಿದರು. ಅತ್ತ ಬಿಸಿಸಿಐ ಅಧ್ಯಕ್ಷ-ಉಪಾಧ್ಯಕ್ಷರನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆಡಳಿತ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್ ಸ್ವಾಗತಿಸಿದರು.
ಈ ಪ್ರಯಾಣಕ್ಕೂ ಮುನ್ನ ಮಾತನಾಡಿದ ರಾಜೀವ್ ಶುಕ್ಲಾ, ಎರಡು ದಿನಗಳ ಪಾಕ್ ಭೇಟಿಯು ಕೇವಲ ಕ್ರಿಕೆಟ್ ಉದ್ದೇಶಕ್ಕಾಗಿ ಮಾತ್ರ. ಇಲ್ಲಿ ಯಾವುದೇ ರಾಜಕೀಯ ಉದ್ದೇಶಗಳಿಲ್ಲ ಎಂದು ತಿಳಿಸಿದ್ದಾರೆ.
2006 ರ ನಂತರ ನಾನು ಮೊದಲ ಬಾರಿಗೆ ಪಾಕಿಸ್ತಾನಕ್ಕೆ ತೆರಳುತ್ತಿದ್ದೇನೆ ಎಂದಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ನಾವು ಪಂದ್ಯಗಳನ್ನು ನೋಡಲು ಕೊಲಂಬೊಗೆ ಹೋಗಿದ್ದೆವು. ಅದೇ ರೀತಿಯಲ್ಲಿ ಇದೀಗ ಪಾಕ್ಗೂ ಭೇಟಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
15 ವರ್ಷಗಳ ಬಳಿಕ ಭೇಟಿ:
2008 ರಲ್ಲಿ ಭಾರತದ ಮೇಲೆ ನಡೆದ ಪಾಕ್ ಉಗ್ರರ ದಾಳಿ ಬಳಿಕ ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಇದಾದ ಬಳಿಕ ಟೀಮ್ ಇಂಡಿಯಾ ಪಾಕಿಸ್ತಾನದಲ್ಲಿ ಯಾವುದೇ ಸರಣಿ ಆಡಿಲ್ಲ. ಅಷ್ಟೇ ಅಲ್ಲದೆ 2008 ರ ಬಳಿಕ ಬಿಸಿಸಿಐನ ಯಾವುದೇ ಅಧಿಕಾರಿ ಕೂಡ ಪಾಕ್ಗೆ ಭೇಟಿ ನೀಡಿರಲಿಲ್ಲ. ಇದೀಗ 15 ವರ್ಷಗಳ ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಧ್ಯಾಕ್ಷ ರಾಜೀವ್ ಶುಕ್ಲಾ ಪಾಕ್ಗೆ ಭೇಟಿ ನೀಡಿರುವುದು ವಿಶೇಷ.
ಅಫ್ಘಾನಿಸ್ತಾನ್-ಶ್ರೀಲಂಕಾ ಪಂದ್ಯಕ್ಕೆ ವಿಶೇಷ ಅತಿಥಿ:
ಸೆಪ್ಟೆಂಬರ್ 5 ರಂದು ಲಾಹೋರ್ನಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಧ್ಯಾಕ್ಷ ರಾಜೀವ್ ಶುಕ್ಲಾ ಮುಖ್ಯ ಅತಿಥಿಗಳಾಗಿ ಗಢಾಫಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
15 ವರ್ಷಗಳ ಬಳಿಕ ಏಷ್ಯಾಕಪ್:
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ 15 ವರ್ಷಗಳ ಬಳಿಕ ಏಷ್ಯಾಕಪ್ ಅನ್ನು ಆಯೋಜಿಸುತ್ತಿದೆ. ಇದೇ ವೇಳೆ ಎಲ್ಲಾ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳಿಗೆ ವಿಶೇಷ ಆಹ್ವಾನವನ್ನು ನೀಡಲಾಗಿದೆ. ಈ ಹಿಂದೆ ಆಗಸ್ಟ್ 30 ರಂದು ಮುಲ್ತಾನ್ನಲ್ಲಿ ನಡೆದ ಉದ್ಘಾಟನಾ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.
ಆದರೆ ಕಾರಣರಾಂತರಗಳಿಂದ ರೋಜರ್ ಬಿನ್ನಿ ಹಾಗೂ ರಾಜೀವ್ ಶುಕ್ಲಾ ಪಾಕ್ಗೆ ಪ್ರಯಾಣಿಸಿರಲಿಲ್ಲ. ಇದೀಗ ವಾಘಾ ಗಡಿಯ ಮೂಲಕ ಬಿಸಿಸಿಐ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಾಕ್ಗೆ ಭೇಟಿ ನೀಡಿದ್ದು, ಈ ಮೂಲಕ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನೀಡಿದ ಆಹ್ವಾನವನ್ನು ಗೌರವಿಸಿದ್ದಾರೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಹೊಸ ನಿರೀಕ್ಷೆ ಹುಟ್ಟುಹಾಕಿದ ಬಿಸಿಸಿಐ:
ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಮುಖ್ಯ ಕಾರಣ ಬಿಸಿಸಿಐ. ಅಂದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಏಷ್ಯಾಕಪ್ನ ಎಲ್ಲಾ ಪಂದ್ಯಗಳು ಪಾಕ್ನಲ್ಲಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ತಿಳಿಸಿತ್ತು. ಹೀಗಾಗಿ ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲಿ ಏಷ್ಯಾಕಪ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.
ಇದಾಗ್ಯೂ ಬಿಸಿಸಿಐ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ವಿಶೇಷ. ಹೀಗಾಗಿ ಉಭಯ ತಂಡಗಳ ನಡುವಣ ದ್ವಿಪಕ್ಷೀಯ ಸರಣಿಯ ಚರ್ಚೆಗಳು ಮತ್ತೆ ಮುನ್ನಲೆಗೆ ಬರಲಿದೆ.
ಭಾರತ-ಪಾಕ್ ಕೊನೆಯ ಸರಣಿ:
2008 ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಭಾರತ ತಂಡವು ಪಾಕಿಸ್ತಾನದಲ್ಲಿ ಸರಣಿ ಆಡಿಲ್ಲ. ಇದಾಗ್ಯೂ ಪಾಕಿಸ್ತಾನ್ ತಂಡವು 2012-13 ರವರೆಗೆ ಭಾರತದಲ್ಲಿ ಸರಣಿ ಆಡಿದೆ. ಆ ಬಳಿಕ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಇತ್ತ ಏಷ್ಯಾಕಪ್ ಹಾಗೂ ಐಸಿಸಿ ಟೂರ್ನಿಗಳಲ್ಲಿ ಮಾತ್ತ ಭಾರತ-ಪಾಕ್ ಮುಖಾಮುಖಿಯಾಗುತ್ತಿದೆ. ಇದೀಗ ಬಿಸಿಸಿಐ ಅಧ್ಯಕ್ಷರು ಹಾಗೂ ಪಿಸಿಬಿ ಅಧ್ಯಕ್ಷರ ಭೇಟಿಯು ದ್ವಿಪಕ್ಷೀಯ ಸರಣಿ ಆಯೋಜನೆಯ ನಿರೀಕ್ಷೆಯನ್ನು ಹೆಚ್ಚಿಸಿದೆ.
Published On - 6:27 pm, Mon, 4 September 23