
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮೇಜರ್ ಸರ್ಜರಿಯಾಗಲಿದೆಯಾ? ಈ ಪ್ರಶ್ನೆಗೆ ಸದ್ಯದ ಉತ್ತರ ಹೌದು. ಆದರೆ ಈ ಬಾರಿ ಸರ್ಜರಿಯಾಗಲಿರುವುದು ಸಿಬ್ಬಂದಿ ವರ್ಗದಲ್ಲಿ ಎಂಬುದಷ್ಟೇ ವ್ಯತ್ಯಾಸ. ಅಂದರೆ ಗೌತಮ್ ಗಂಭೀರ್ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಬಿಸಿಸಿಐ ಸಂತುಷ್ಟರಾಗಿಲ್ಲ. ಹೀಗಾಗಿ ಏಷ್ಯಾಕಪ್ಗೂ ಮುನ್ನ ಇಬ್ಬರ ತಲೆದಂಡವಾಗಲಿದೆ ಎಂದು ವರದಿಯಾಗಿದೆ.
ಬಿಸಿಸಿಐ, ಟೀಮ್ ಇಂಡಿಯಾದ ಸಹಾಯಕ ಕೋಚ್ ರಿಯಾನ್ ಟೆನ್ ದೋಸ್ಹಾಟೆ ಅವರನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಇವರೊಂದಿಗೆ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ಗೂ ಕೂಡ ಟೇಟ್ ಪಾಸ್ ನೀಡಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.
ಕಳೆದ ವರ್ಷ ಜುಲೈನಲ್ಲಿ ಗೌತಮ್ ಗಂಭೀರ್ ಅವರನ್ನು ಭಾರತದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಈ ವೇಳೆ ಅವರ ಕೋರಿಕೆಯಂತೆ ರಿಯಾನ್ ಟೆನ್ ದೋಸ್ಹಾಟೆ ಅವರನ್ನು ಸಹಾಯಕ ಕೋಚ್, ಮೊರ್ನೆ ಮೊರ್ಕೆಲ್ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು. ಹಾಗೆಯೇ ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಕಾಣಿಸಿಕೊಂಡಿದ್ದರು.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ತನ್ನ ಸಹಪಾಠಿಗಳನ್ನೇ ಸಿಬ್ಬಂದಿ ವರ್ಗದಲ್ಲಿ ನೇಮಿಸಿಕೊಂಡಿದ್ದ ಗೌತಮ್ ಗಂಭೀರ್ಗೆ ಕೆಲ ತಿಂಗಳುಗಳ ಹಿಂದೆಯಷ್ಟೇ ಬಿಸಿಸಿಐ ಆಘಾತ ನೀಡಿದ್ದರು. ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಅಭಿಷೇಕ್ ನಾಯರ್ ಅವರನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬೆನ್ನಲ್ಲೇ ಹುದ್ದೆಯಿಂದ ವಜಾಗೊಳಿಸಲಾಗಿತ್ತು.
ಇದೀಗ ರಿಯಾನ್ ಟೆನ್ ದೋಸ್ಹಾಟೆ ಹಾಗೂ ಮೊರ್ನೆ ಮೊರ್ಕೆಲ್ಗೂ ಗೇಟ್ ಪಾಸ್ ನೀಡುವ ಬಗ್ಗೆ ಬಿಸಿಸಿಐ ಚಿಂತಿಸಿದೆ. ಈ ಇಬ್ಬರ ಕಾರ್ಯ ವೈಖರಿ ಬಗ್ಗೆ ಬಿಸಿಸಿಐ ಪ್ರಭಾವಿತವಾಗಿಲ್ಲ ಎಂದು ವರದಿಯಾಗಿದ್ದು, ಇದೇ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಇಬ್ಬರನ್ನು ಟೀಮ್ ಇಂಡಿಯಾ ಹುದ್ದೆಗಳಿಂದ ಕೆಳಗಿಳಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ಹೊಸ ಬೌಲಿಂಗ್ ಕೋಚ್ನೊಂದಿಗೆ ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ.
ಗೌತಮ್ ಗಂಭೀರ್ ಕೋಚ್ ಆದ ಬಳಿಕ ಟೀಮ್ ಇಂಡಿಯಾ ಸೀಮಿತ ಓವರ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟೆಸ್ಟ್ ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನ ಮುಂದುವರೆಸಿದೆ. ಅದರಲ್ಲೂ ಮೊರ್ನೆ ಮೊರ್ಕೆಲ್ ಬೌಲಿಂಗ್ ಕೋಚ್ ಆದ ಬಳಿಕ ಭಾರತ ತಂಡದ ಬೌಲರ್ಗಳು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿಯೇ ಅವರನ್ನು ಕೆಳಗಿಳಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಜಯ ಜಯ ಜಯ ಜಯ ಜಯಯೇ… ಆಸ್ಟ್ರೇಲಿಯಾ ದಾಖಲೆಯ ಜಯಭೇರಿ
ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ರಿಯಾನ್ ಟೆನ್ ದೋಸ್ಹಾಟೆ ಹಾಗೂ ಮೊರ್ನೆ ಮೊರ್ಕೆಲ್ ಟೀಮ್ ಇಂಡಿಯಾದಿಂದ ಬೇರ್ಪಡುವ ಸಾಧ್ಯತೆಯಿದ್ದು, ಏಷ್ಯಾಕಪ್ಗೂ ಮುನ್ನ ಭಾರತ ತಂಡಕ್ಕೆ ಹೊಸ ಬೌಲಿಂಗ್ ಕೋಚ್ ಹಾಗೂ ಸಹಾಯಕ ಕೋಚ್ ನೇಮಕವಾಗಲಿದ್ದಾರೆ ಎಂದು ವರದಿಯಾಗಿದೆ.