ವೃತ್ತಿಜೀವನ ಆರಂಭವಾದ ಮೈದಾನದಲ್ಲೇ ಭುವನೇಶ್ವರ್​ಗೆ ಪುನರ್​ಜನ್ಮ..!

ಬೆಂಗಳೂರಿನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಕೊನೆಯ ಟಿ20 ಪಂದ್ಯ ಮಳೆಯಿಂದ ವಿಳಂಬವಾಗಿ ಆರಂಭವಾಯಿತು. ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ದುಕೊಂಡರೆ, ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಪ್ರಮುಖವಾಗಿ, ಭುವನೇಶ್ವರ್ ಕುಮಾರ್ ನಾಲ್ಕು ವರ್ಷಗಳ ನಂತರ ಟೀಂ ಇಂಡಿಯಾಗೆ ಮರಳಿದ್ದು, ಬೆಂಗಳೂರು ಅವರ ವೃತ್ತಿಜೀವನಕ್ಕೆ ಮತ್ತೊಂದು ಮೈಲುಗಲ್ಲು. ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ವೃತ್ತಿಜೀವನ ಆರಂಭವಾದ ಮೈದಾನದಲ್ಲೇ ಭುವನೇಶ್ವರ್​ಗೆ ಪುನರ್​ಜನ್ಮ..!
ಭುವನೇಶ್ವರ್ ಕುಮಾರ್

Updated on: Oct 17, 2026 | 9:34 PM

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಕೊನೆಯ ಹಾಗೂ ಅಂತಿಮ ಟಿ20 ಪಂದ್ಯ ಕೊನೆಗೂ ಆರಂಭವಾಗಿದೆ. ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಪಂದ್ಯವನ್ನು ನಿಗದಿತ ಸಮಯಕ್ಕೆ ಆರಂಭಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಮಳೆ ಕೊಂಚ ವಿರಾಮ ಪಡೆದಿದ್ದರಿಂದ ಪಂದ್ಯದ ಟಾಸ್ ರಾತ್ರಿ 9 ಗಂಟೆಗೆ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಇತ್ತ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇನ್ನು ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಬರೋಬ್ಬರಿ 4 ವರ್ಷಗಳ ನಂತರ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಶಿವಂ ದುಬೆ ಕೂಡ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ.

4 ವರ್ಷಗಳ ಬಳಿಕ ಸ್ಥಾನ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 727 ದಿನಗಳ ಬಳಿಕ ಅಂತರರಾಷ್ಟ್ರೀಯ ಟಿ20 ಪಂದ್ಯವೊಂದು ನಡೆಯುತ್ತಿದೆ. ಹೀಗಾಗಿ ಅಭಿಮಾನಿಗಳು ತೀವ್ರ ಕುತೂಹಲದಿಂದ ಈ ಪಂದ್ಯಕ್ಕಾಗಿ ಕಾಯುತ್ತಿದ್ದರು. ಆದರೆ ಮಳೆಯಿಂದಾಗಿ ಪಂದ್ಯ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಆದಾಗ್ಯೂ ಮಳೆ ನಿಂತ ಕೂಡಲೇ ಪಂದ್ಯವನ್ನು ಆರಂಭಿಸಲಾಗಿದೆ. ಈ ಪಂದ್ಯದೊಂದಿಗೆ ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಬರೋಬ್ಬರಿ 4 ವರ್ಷಗಳ ಬಳಿಕ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ವೃತ್ತಿ ಜೀವನ ಆರಂಭ

ಇಲ್ಲಿ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಭುವನೇಶ್ವರ್ ಕುಮಾರ್ ಯಾವ ಮೈದಾನದಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಆರಂಭಿಸಿದ್ದರೋ ಅದೇ ಮೈದಾನದಲ್ಲಿ ಅವರ ವೃತ್ತಿಜೀವನಕ್ಕೆ ಪುನರ್​​ಜನ್ಮ ಸಿಕ್ಕಿದೆ. ವಾಸ್ತವವಾಗಿ ಭುವನೇಶ್ವರ್ ಕುಮಾರ್ 14 ವರ್ಷಗಳ ಹಿಂದೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಗರ ಬೆಂಗಳೂರು. ಡಿಸೆಂಬರ್ 2012 ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಭುವಿ 4 ಓವರ್‌ಗಳಲ್ಲಿ ಕೇವಲ 9 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದರು.

ಇದೀಗ ಬೆಂಗಳೂರಿನಲ್ಲಿ ಮತ್ತೊಮ್ಮೆ ತಮ್ಮ ಅಂತ ವೃತ್ತಿಜೀವನವನ್ನು ಪುನರಾರಂಭಿಸುತ್ತಿರುವ ಭುವನೇಶ್ವರ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಮೇಲೆ ಹೇಳಿದಂತೆ 2022 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಬಳಿಕ ಭುವನೇಶ್ವರ್ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆದರೀಗ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: ಭಾರತ- ವಿಂಡೀಸ್ 5ನೇ ಟಿ20 ಪಂದ್ಯ ರದ್ದಾದರೆ ಯಾರಿಗೆ ಸರಣಿ ವಿಜೇತ ಪಟ್ಟ?

ಆರ್​ಸಿಬಿಯ ತವರು ಮೈದಾನ

ಭುವನೇಶ್ವರ್ ಟೀಂ ಇಂಡಿಯಾದಲ್ಲಿ ಆಡದೆ ಇರಬಹುದು. ಆದರೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಭುವಿಗೆ ಈ ಮೈದಾನ ಅತ್ಯಂತ ಚಿರಪರಿಚಿತವಾಗಿದೆ. ಏಕೆಂದರೆ ಚಿನ್ನಸ್ವಾಮಿ ಮೈದಾನ ಆರ್​ಸಿಬಿಯ ತವರು ಮೈದಾನವಾಗಿದೆ. ಈ ಮೈದಾನದಲ್ಲಿ ಭುವಿ ಸಾಕಷ್ಟು ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ ಭುವಿಯ ಬೌಲಿಂಗ್ ಮುಂದಾಳತ್ವದಲ್ಲಿ ಆರ್​ಸಿಬಿ ಸತತ ಎರಡು ಬಾರಿ ಚಾಂಪಿಯನ್‌ ಆಗಿದೆ. ಹೀಗಾಗಿ ಭುವಿ ಈ ಪಂದ್ಯದಲ್ಲೂ ತಮ್ಮ ಅಮೋಘ ಪ್ರದರ್ಶನ ನೀಡಿ ತಂಡವನ್ನು ಸರಣಿ ಜಯದತ್ತ ಮುನ್ನಡೆಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:29 pm, Sat, 17 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us