ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್, ಮಾಜಿ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೀಂ ಇಂಡಿಯಾದ ದಂತಕಥೆಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ ಅವರು ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೊಡ್ಡ ತಂಡಗಳ ವಿರುದ್ಧ ತಮ್ಮ ಅತ್ಯುತ್ತಮ ಬೌಲಿಂಗ್‌ನಿಂದ ಪ್ರಪಂಚದ ಬೆಸ್ಟ್ ಸ್ಪಿನ್ನರ್ಗಳಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಕ್ರಿಕೆಟ್ ಬದುಕಿಗೆ ಕುಂಬ್ಳೆ ವಿದಾಯ ಹೇಳಿ ಎಷ್ಟೋ ವರ್ಷಗಳಾದರೂ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೊಂದು ಈಗ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸಾಂಡರ್ ಎಲ್ಲಿಸ್ ಕೇಳಿರುವ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಕುಂಬ್ಳೆ ಅವರು ನೀಡಿರುವ ಉತ್ತರಗಳು ಸಖತ್ ಮಜಬೂತಾಗಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನಿಲ್ ಕುಂಬ್ಳೆ ಹಾಗೂ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸಾಂಡರ್ ಎಲ್ಲಿಸ್ ಮುಖಾಮುಖಿ ಭೇಟಿಯಾಗಿದ್ದಾರೆ. ಈ ವೇಳೆ ಬ್ರಿಟಿಷ್ ಹೈ ಕಮಿಷನರ್ ಕೇಳಿದ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಕುಂಬ್ಳೆ ನೀಡಿದ ಉತ್ತರಗಳ ವಿವರ ಇಲ್ಲಿದೆ.
ಬ್ರಿಟಿಷ್ ಹೈ ಕಮಿಷನರ್: ಯುಕೆಯಲ್ಲಿ ನಿಮ್ಮ ನೆಚ್ಚಿನ ಸ್ಥಳ ಯಾವುದು?
ಕುಂಬ್ಳೆ: ಲಂಡನ್
ಬ್ರಿಟಿಷ್ ಹೈ ಕಮಿಷನರ್: ನಿಮಗೆ ಲಂಡನ್ ಯಾವ ಸೀಸನ್ನಲ್ಲಿ ಇಷ್ಟ? ಬೇಸಿಗೆ ಅಥವಾ ಚಳಿಗಾಲ?
ಕುಂಬ್ಳೆ: ಲಂಡನ್ನಲ್ಲಿ ಬೇಸಿಗೆ ಕಾಲ ಅಂತನೇ ಯಾವುದಾದ್ರೂ ಇದ್ಯಾ? ಹೌದು ನನಗೆ ಬೇಸಿಗೆನೇ ಇಷ್ಟ. ಅದರಲ್ಲೂ 1995 ರಲ್ಲಿ ನಾರ್ಥಾಂಪ್ಟನ್ನಲ್ಲಿ ಬೇಸಿಗೆಯಲ್ಲಿ ಆಡಿದ ಅನುಭವ ಚೆನ್ನಾಗಿತ್ತು ಎಂದಿದ್ದಾರೆ.
ಬ್ರಿಟಿಷ್ ಹೈ ಕಮಿಷನರ್: ನೀವಲ್ಲಿ ನೂರನೇ ವಿಕೆಟ್ ಪಡೆದಿದ್ರಿ ಎಂದಿದ್ದಾರೆ.
ಬ್ರಿಟಿಷ್ ಹೈ ಕಮಿಷನರ್: ಯುಕೆಯಲ್ಲಿ ನಿಮ್ಮ ಫೇವರೆಟ್ ಫುಡ್?
ಕುಂಬ್ಳೆ: ನಾನೊಬ್ಬ ಸಸ್ಯಹಾರಿ ಹಾಗಾಗಿ ವೆಜಿಟೇರಿಯನ್ ಫುಡ್ ಹೆಚ್ಚಾಗಿ ಇಷ್ಟಪಡ್ತೀನಿ. ಅದರಲ್ಲೂ ಇಂಡಿಯನ್ ವೆಜಿಟೇರಿಯನ್ ಫುಡ್ ಹೆಚ್ಚು ಇಷ್ಟ. ಅಲ್ಲದೆ ಲಂಡನ್ನಲ್ಲಿ ನನ್ನ ಗೆಳೆಯನ ಹೋಟೆಲ್ ಇದ್ದು ಅಲ್ಲಿ ಆತ ಮಾಡುವ ಕೇರಳ ಹಾಗೂ ದಕ್ಷಿಣ ಭಾರತದ ಶೈಲಿಯ ಫುಡ್ ಇಷ್ಟ ಎಂದಿದ್ದಾರೆ.
ಬ್ರಿಟಿಷ್ ಹೈ ಕಮಿಷನರ್: ಯುಕೆಯಲ್ಲಿ ನಿಮಗೆ ಯಾವುದಾದರೂ ಮರೆಯಲಾಗದ ಘಟನೆ ಎಂದರೆ?
ಕುಂಬ್ಳೆ: ಹೌದು.. ನಾನು ಯುಕೆಯ ಮ್ಯಾಂಚೆಸ್ಟರ್ನಲ್ಲಿ ಚೊಚ್ಚಲ ಟೆಸ್ಟ್ ಆಡಿದ್ದೆ. ಅದರ ಜೊತೆಗೆ ನನ್ನ ಮೊದಲ ಟೆಸ್ಟ್ ಶತಕವನ್ನು ಓವಲ್ನಲ್ಲಿ ಸಿಡಿಸಿದ್ದೆ. ಜೊತೆಗೆ ಲಾರ್ಡ್ಸ್ನಲ್ಲಿ ಆಡುವುದೇ ಚೆಂದ ಎಂದಿದ್ದಾರೆ.
ಬ್ರಿಟಿಷ್ ಹೈ ಕಮಿಷನರ್: ನಿಮಗೆ ಹೆಚ್ಚು ಖುಷಿ ಕೊಟ್ಟ ಅಥವಾ ತೃಪ್ತಿ ನೀಡಿದ ವಿಕೆಟ್ ಯಾವುದು?
ಕುಂಬ್ಳೆ: ನನ್ನ ಟೆಸ್ಟ್ ವೃತ್ತಿ ಬದುಕಿನ ಮೊದಲ ವಿಕೆಟ್ ಅಲನ್ ಲ್ಯಾಂಬ್ ಅವರ ವಿಕೆಟ್ ತುಂಬಾ ಖುಷಿ ನೀಡಿತ್ತು ಎಂದಿದ್ದಾರೆ.
ಕುಂಬ್ಳೆ ಬಗ್ಗೆ ಒಂದಿಷ್ಟು
ಅನಿಲ್ ಕುಂಬ್ಳೆ ಭಾರತ ತಂಡದ ಪರ 132 ಟೆಸ್ಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 619 ಮತ್ತು 337 ವಿಕೆಟ್ ಕಬಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 900ಕ್ಕೂ ಅಧಿಕ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎಂಬ ಹೆಗ್ಗಳಿಕೆ ಅವರದಾಗಿದೆ. ಕುಂಬ್ಳೆ ಫೆ. 7, 1999 ರಂದು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 26.3 ಓವರ್ ಬೌಲಿಂಗ್ ಮಾಡಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅಲ್ಲದೆ ಭಾರತ 212 ರನ್ಗಳ ಬೃಹತ್ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಭ್ಯರ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್ ನಲ್ಲಿ ಉತ್ತಮ ಪ್ರತಿಭೆ ಜತೆಗೆ ವಿದ್ಯೆಯ ಬಲ ಇರುವವರು ತೀರಾ ಕಡಿಮೆ. ಆದರೆ, ಕುಂಬ್ಳೆ ಅವರು ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದುಕೊಂಡಿದ್ದಾರೆ. ಛಾಯಾಗ್ರಹಣ, ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನಿಲ್ ಕುಂಬ್ಳೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನು ನಡೆಸುವ ಜವಾಬ್ದಾರಿ, ಐಸಿಸಿ ಕ್ರಿಕೆಟ್ ಕಮಿಟಿ ಕ್ರಿಕೆಟ್ ಸಮಿತಿಯ ಚೇರ್ಮನ್ ಆಗಿ ಸಮರ್ಥರಾಗಿ ಕಾರ್ಯನಿರ್ವಹಿಸಿದ್ದರು.
ಆಸ್ಟ್ರೇಲಿಯಾದ ಶೇನ್ ವಾರ್ನ್ ಬಿಟ್ಟರೆ 2000 ಟೆಸ್ಟ್ ರನ್ ಹಾಗೂ 500 ಪ್ಲಸ್ ವಿಕೆಟ್ ಹೊಂದಿರುವ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. 132 ಪಂದ್ಯಗಳಿಂದ 619 ವಿಕೆಟ್ ಕಿತ್ತಿದ್ದಾರೆ.ಅತಿ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪೈಕಿ ಮೂರನೆಯವರು.