ಕ್ರಿಕೆಟ್ ಅಂಗಳದಲ್ಲಿ ಇತ್ತೀಚೆಗೆ ಸಖತ್ ಸುದ್ದಿಯಾದ ಬೆಟ್ಟಿಂಗ್ ಆ್ಯಪ್ಗಳಲ್ಲಿ ಡ್ರೀಮ್-11 ಕೂಡ ಒಂದು. ಏಕೆಂದರೆ ಕ್ರಿಕೆಟ್ ಪ್ರೇಮಿಗಳು ಪಂದ್ಯವನ್ನೂ ವೀಕ್ಷಿಸುತ್ತಾ ಡೀಮ್ ಇಲೆವೆನ್ನಲ್ಲಿ ತಂಡವನ್ನು ರಚಿಸಿ, ಲಕ್ಷಾಧಿಪತಿಗಳಾಗುತ್ತಿದ್ದಾರೆ. ಈ ಅದೃಷ್ಟವಂತ ಕೆಲವು ಕ್ರಿಕೆಟ್ ಪ್ರೇಮಿಗಳಲ್ಲಿ ಬಿಹಾರದ ಸರನ್ ಜಿಲ್ಲೆಯ ನಿವಾಸಿ ರಮೇಶ್ ಕುಮಾರ್ ಕೂಡ ಒಬ್ಬರು. ಏಕೆಂದರೆ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಮೂಲಕ ರಮೇಶ್ ಕುಮಾರ್ ಇದೀಗ ಕೋಟ್ಯಾಧಿಪತಿಯಾಗಿದ್ದಾರೆ. ಹೌದು, ಡ್ರೀಮ್-11 ನಲ್ಲಿ ಐಪಿಎಲ್ ತಂಡವನ್ನು ಆಯ್ಕೆ ಮಾಡುವ ಮೂಲಕ ಕಾರು ಚಾಲಕ ರಮೇಶ್ 2 ಕೋಟಿ ಗೆದ್ದಿದ್ದಾರೆ.
ರಮೇಶ್ ಆಯ್ಕೆ ಮಾಡಿದ ಐಪಿಎಲ್ ತಂಡ ದೇಶದಲ್ಲೇ ನಂಬರ್ ಒನ್ ಆಗಿದ್ದು ಈ ಮೂಲಕ 2 ಕೋಟಿ ಬಹುಮಾನ ಗಳಿಸಿದ್ದಾರೆ. ಬಿಹಾರದ ಸರನ್ ಜಿಲ್ಲೆಯ ಅಮ್ನೌರ್ ಬ್ಲಾಕ್‌ನ ರಸುಲ್‌ಪುರ ಗ್ರಾಮದ ನಿವಾಸಿಯಾಗಿರುವ ರಮೇಶ್ ಕುಮಾರ್ ವೃತ್ತಿಯಲ್ಲಿ ಕಾರು ಚಾಲಕ. ಪಶ್ಚಿಮ ಬಂಗಾಳದಲ್ಲಿ ಕಾರು ಓಡಿಸಿ ಗಳಿಸುವ ಹಣದಿಂದ ಅವರ ಮನೆಯವರ ಕಾರುಬಾರು ನಡೆಯುತ್ತದೆ. ಆದರೆ ಐಪಿಎಲ್ ಪಂದ್ಯವೊಂದರ ಬಳಿಕ ರಾತ್ರೋರಾತ್ರಿ ರಮೇಶ್ ಕುಮಾರ್ ಕೋಟ್ಯಾಧಿಪತಿಯಾಗಿದ್ದಾರೆ.
ರಮೇಶ್ ಕುಮಾರ್ ಅವರು ಕೆಲ ವರ್ಷಗಳಿಂದ ಡ್ರೀಮ್-11 ನಲ್ಲಿ ತಂಡಗಳನ್ನು ರಚಿಸುತ್ತಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ಅವರು ರೂಪಿಸಿದ ತಂಡಕ್ಕೆ ಜಾಕ್ ಪಾಟ್ ಹೊಡೆದಿದೆ. ಈ ತಂಡದಲ್ಲಿ ಕಗಿಸೊ ರಬಾಡ ಅವರನ್ನು ನಾಯಕರಾಗಿ ಮತ್ತು ಶಿಖರ್ ಧವನ್ ಅವರನ್ನು ಉಪನಾಯಕರನ್ನಾಗಿ ಮಾಡಿದ್ದರು. ಅದೃಷ್ಟ ಎಂಬಂತೆ ಆ ಪಂದ್ಯದಲ್ಲಿ ರಬಾಡ 3 ವಿಕೆಟ್ ಪಡೆದು ಮಿಂಚಿದರೆ, ಶಿಖರ್ ಧವನ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಪಂದ್ಯದ ಮುಕ್ತಾಯದ ಬಳಿಕ ರಮೇಶ್ ರಚಿಸಿದ ತಂಡವು ಹೆಚ್ಚಿನ ಅಂಕಗಳನ್ನು ಗಳಿಸಿತು. ಅಲ್ಲದೆ ಅವರ ಐಪಿಎಲ್ ತಂಡವು ದೇಶದಲ್ಲಿ ನಂಬರ್ ಒನ್ ಆಗಿತ್ತು. ಇದಾದ ನಂತರ ರಮೇಶ್ ಅವರಿಗೆ 2 ಕೋಟಿ ಗೆದ್ದಿರುವ ಸಂದೇಶ ಬಂದಿದೆ. ಇದರಿಂದ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಇದಾದ ಬಳಿಕ ಜಿಎಸ್‌ಟಿ ಕಡಿತಗೊಳಿಸಿ ಅವರ ಖಾತೆಗೆ 1 ಕೋಟಿ 40 ಲಕ್ಷ ರೂ. ಲಭಿಸಿದೆ.
ವಿಶೇಷ ಎಂದರೆ ರಮೇಶ್ ಕುಮಾರ್ ಈ ಪಂದ್ಯಕ್ಕಾಗಿ ಕೇಲವ 59 ರೂ. ರಿಚಾರ್ಜ್ ಮಾಡಿದ್ದರು. ಅಂದರೆ 59 ರೂ ಬಂಡವಾಳ ಹಾಕಿ 2 ಕೋಟಿ ರೂ. ಗೆದ್ದಿದ್ದರು. ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ರಮೇಶ್ ಕುಮಾರ್ ಅವರು, ದೇವರು ನನ್ನ ಕಷ್ಟ ನೋಡಿ ಅದೃಷ್ಟದ ಬಾಗಿಲು ತೆರೆದಿದ್ದಾರೆ. ಎಲ್ಲವೂ ದೇವರ ದಯೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Disclaimer: ಟಿವಿ9 ಕನ್ನಡ ಯಾವುದೇ ರೀತಿಯ ಜೂಜು ಅಥವಾ ಬೆಟ್ಟಿಂಗ್ ಅನ್ನು ಉತ್ತೇಜಿಸುವುದಿಲ್ಲ ಮತ್ತು ಪ್ರೋತ್ಸಾಹಿಸುವುದಿಲ್ಲ. ಹೀಗಾಗಿ ಇಂತಹ ಆ್ಯಪ್ಗಳ ಬಳಕೆ ನಿಮ್ಮ ವಿವೇಚನೆ ಬಿಟ್ಟಿದ್ದು ಎಂದು ಎಚ್ಚರಿಸುತ್ತಿದ್ದೇವೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.