Champions trophy 2025: ಏಕಾಂಗಿಯಾದ ಪಾಕಿಸ್ತಾನ; ಭಾರತದ ಪರ ನಿಂತ ಎಲ್ಲಾ ಕ್ರಿಕೆಟ್ ಮಂಡಳಿಗಳು..!
Champions trophy 2025: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಭಾರತದ ನಡುವಿನ ವಿವಾದ ಇನ್ನೂ ಬಗೆಹರಿದಿಲ್ಲ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಭಾರತ ನಿರ್ಧರಿಸಿದೆ. ಇತ್ತ ಪಾಕಿಸ್ತಾನ ಹೈಬ್ರಿಡ್ ಮಾದರಿಯನ್ನು ವಿರೋಧಿಸುತ್ತಿದೆ. ಇದರಿಂದಾಗಿ ಇಂದು ನಡೆದ ಐಸಿಸಿ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ಆದರೆ ಇಂದು ನಡೆದ ಸಭೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಕ್ರಿಕೆಟ್ ಮಂಡಳಿಗಳು ಭಾರತದ ಪರ ನಿಂತಿದ್ದು, ಹೈಬ್ರಿಡ್ ಮಾದರಿಯನ್ನು ಒಪ್ಪಿವೆ ಎಂದು ವರದಿಯಾಗಿದೆ.
ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ ಸಂಬಂಧಿಸಿದಂತೆ ಎದ್ದಿರುವ ಗೊಂದಲಗಳಿಗೆ ಇದುವರೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಒಂದೆಡೆ ಭಾರತ ಸರ್ಕಾರ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಿದೆ. ಇನ್ನೊಂದೆಡೆ ಪಾಕಿಸ್ತಾನ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐಸಿಸಿ ಇಂದು ಎಲ್ಲಾ ಕ್ರಿಕೆಟ್ ಮಂಡಳಿಗಳ ಜೊತೆಗೆ ವರ್ಚುವಲ್ ಸಭೆ ನಡೆಸಿತ್ತು. ಆದರೂ ಈ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ನಾಳೆಗೆ ಈ ಸಭೆಯನ್ನು ಮುಂದೂಡಲಾಗಿದೆ. ಆದಾಗ್ಯೂ ಇಂದು ನಡೆದ ಸಭೆಯಲ್ಲಿ ಭಾಗಶಃ ಕ್ರಿಕೆಟ್ ಮಂಡಳಿಗಳು ಭಾರತದ ಪರ ನಿಂತಿದ್ದು, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸಲು ಸಮ್ಮತಿ ಸೂಚಿಸಿವೆ ಎಂದು ವರದಿಯಾಗಿದೆ.
7 ಕ್ರಿಕೆಟ್ ಮಂಡಳಿಗಳು ಬಿಸಿಸಿಐ ಪರ
ಇಂದು ಐಸಿಸಿ ನಡೆಸಿದ ವರ್ಚುವಲ್ ಸಭೆ 15 ರಿಂದ 20 ನಿಮಿಷಗಳ ಕಾಲ ನಡೆಯಿತು. ಈ ವೇಳೆ ಪ್ರಮುಖ ಮೂರು ಆಯ್ಕೆಗಳ ಬಗ್ಗೆ ಚರ್ಚಿಸಲಾಯಿತ್ತಾದರೂ, ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಐಸಿಸಿ ನಾಳೆಗೆ ಸಭೆಯನ್ನು ಮುಂದೂಡಿದೆ. ಆದರೆ ಇಂದು ನಡೆದ ಸಭೆಯಲ್ಲಿ ಭಾರತದ ಪ್ರಸ್ತಾವನೆಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ 7 ಮಂಡಳಿಗಳು ಒಪ್ಪಿಗೆ ಸೂಚಿಸಿವೆ ಎಂದು ರೆವ್ ಸ್ಪೋರ್ಟ್ಸ್ ವರದಿ ಮಾಡಿದೆ. ಈ ವರದಿಯ ಪ್ರಕಾರ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ನಮ್ಮ ಸಮ್ಮತಿ ಇದೆ ಎಂದು 7 ಕ್ರಿಕೆಟ್ ಮಂಡಳಿಗಳು ಐಸಿಸಿಗೆ ತಿಳಿಸಿವೆ ಎಂದು ವರದಿಯಾಗಿದೆ.
ಆದರೆ ಪಾಕಿಸ್ತಾನ ಮಾತ್ರ ಹೈಬ್ರಿಡ್ ಮಾದರಿಯನ್ನು ಒಪ್ಪಲು ಸಿದ್ದವಿಲ್ಲ. ಹೀಗಾಗಿ ಪಾಕಿಸ್ತಾನ ಮಾತ್ರ ಏಕಾಂಗಿಯಾಗಿ ನಿಂತು ಹೈಬ್ರಿಡ್ ಮಾದರಿಗೆ ವಿರೋಧ ವ್ಯಕ್ತಪಡಿಸಿದೆ. ವರದಿಯ ಪ್ರಕಾರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಎಲ್ಲಾ ಕ್ರಿಕೆಟ್ ಮಂಡಳಿಗಳು ಭಾರತದ ಜೊತೆಯಲ್ಲಿದ್ದು, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಡಲು ಸಿದ್ಧವಾಗಿವೆ.
ಪಾಕ್ ಮಂಡಳಿಗೆ ತುಂಬಲಾರದ ನಷ್ಟ
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಹೈಬ್ರಿಡ್ ಮಾದರಿಗೆ ವಿರೋಧ ವ್ಯಕ್ತಪಡಿಸಿರುವ ಕಾರಣ, ಇದೀಗ ಪಾಕಿಸ್ತಾನ ಆತಿಥ್ಯ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಕೊನೆಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನಿಲುವನ್ನು ಸಡಿಲಿಸದಿದ್ದರೆ, ಅದರಿಂದ ಆತಿಥ್ಯದ ಹಕ್ಕನ್ನು ಕಸಿದುಕೊಂಡು ಬೇರೆ ಮಂಡಳಿಗೆ ನೀಡುವ ಸಾಧ್ಯತೆಗಳಿವೆ. ಈಗಾಗಲೇ ಭಾರತ ಕೂಡ ಆತಿಥ್ಯವಹಿಸಲು ಸಿದ್ದ ಎಂದು ಹೇಳಿಕೆ ನೀಡಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಪಾಕಿಸ್ತಾನದ ಕೈತಪ್ಪಿದರೆ, ಅದಕ್ಕೆ ಸಾವಿರಾರು ಕೋಟಿ ನಷ್ಟವುಂಟಾಗಲಿದೆ. ಹೀಗಾಗಿ ಪಾಕಿಸ್ತಾನ ಮುಂದಿನ 24 ಗಂಟೆಗಳಲ್ಲಿ ಯಾವ ತೀರ್ಮಾನಕ್ಕೆ ಬರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 pm, Fri, 29 November 24