IPL 2022: CSK ತಂಡದ ಸತತ ಸೋಲಿಗೆ ಕಾರಣವೇನು?
Chennai super kings: ಸಾಮಾನ್ಯವಾಗಿ, ಈ ನಾಲ್ಕು ತಂಡಗಳ ಪೈಕಿ ಮೂರರ ವಿರುದ್ಧ ಸಿಎಸ್‌ಕೆ ಮೇಲುಗೈ ಸಾಧಿಸುತ್ತಾ ಬಂದಿದೆ. ಆದರೆ ಈ ಬಾರಿ ಹಳೆಯ ದಾಖಲೆಯೂ ಕೆಲಸ ಮಾಡಲಿಲ್ಲ. ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಕಾರಣವೇನು?
ಚೆನ್ನೈ ಸೂಪರ್ ಕಿಂಗ್ಸ್…ಐಪಿಎಲ್‌ನಲ್ಲಿ ಈ ತಂಡ ಕಳೆದ 14 ಸೀಸನ್‌ಗಳಿಂದ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಅಲ್ಲದೆ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಪಟ್ಟವನ್ನೂ ಕೂಡ ಅಲಂಕರಿಸಿದೆ. ಅಷ್ಟೇ ಯಾಕೆ ಐದು ಬಾರಿ ರನ್ನರ್ ಅಪ್ ಕೂಡ ಆಗಿದೆ. 2020ರ ಐಪಿಎಲ್ ಹೊರತುಪಡಿಸಿ ಪ್ರತಿ ಬಾರಿ ಪ್ಲೇಆಫ್‌ಗೆ ಪ್ರವೇಶಿಸಿದ ತಂಡವಾಗಿ ಸಿಎಸ್‌ಕೆ ಐಪಿಎಲ್‌ನಲ್ಲಿ ಪಾರುಪತ್ಯ ಮೆರೆದಿದೆ. ಆದರೆ ಈಗ ಎಲ್ಲವೂ ಬದಲಾದಂತೆ ಭಾಸವಾಗುತ್ತಿದೆ. ಏಕೆಂದರೆ ಆಡಿರುವ ನಾಲ್ಕು ಪಂದ್ಯಗಳನ್ನು ಸೋತು ಸಿಎಸ್‌ಕೆ ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಐಪಿಎಲ್ 2022 ( ಐಪಿಎಲ್ 2022 ) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಎಲ್ಲಾ ರೀತಿಯಲ್ಲೂ ಮಂದಗತಿಯಲ್ಲಿದೆ. ಏಕೆಂದರೆ ಯಾವುದೇ ಪಂದ್ಯದಲ್ಲೂ ಗೆಲುವಿನ ಸನಿಹಕ್ಕೆ ಕೂಡ ಬಂದಿಲ್ಲ. ಈ ಸೀಸನ್ ನಲ್ಲಿ ಚೆನ್ನೈಗೆ ಇಂಥ ಸ್ಥಿತಿ ಬರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಪಂದ್ಯಾವಳಿ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ತೊರೆದಿದ್ದರು. ಅಲ್ಲದೆ ರವೀಂದ್ರ ಜಡೇಜಾ ನೂತನ ನಾಯಕರಾಗಿದ್ದರಿಂದ ನಿರೀಕ್ಷೆಗಳು ಕೂಡ ಹೆಚ್ಚಾಗಿತ್ತು. ಆದರೆ ಜಡೇಜಾ ಅಧಿಕಾರಾವಧಿಯು ಸೋಲಿನೊಂದಿಗೆ ಪ್ರಾರಂಭವಾಗಿ ಇದೀಗ ಸತತ 4 ಸೋಲಿಗೆ ಬಂದು ನಿಂತಿದೆ.
ಈ ನಾಲ್ಕು ಪಂದ್ಯಗಳಲ್ಲಿ ಸೋತ ನಂತರ ಅಭಿಮಾನಿಗಳಲ್ಲೂ ನಿರಾಸೆ ಮೂಡಿದೆ. 2020 ರ ಐಪಿಎಲ್‌ನಲ್ಲಿ CSK ತಂಡವು ಮೊದಲ ಬಾರಿಗೆ IPL ಪ್ಲೇಆಫ್ ತಲುಪಲು ವಿಫಲವಾಯಿತು. ಇದೀಗ ಈ ಕೆಟ್ಟ ಪ್ರದರ್ಶನ ಪ್ರದರ್ಶನ ಮರುಕಳಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ ತಂಡದ ಪ್ರದರ್ಶನವನ್ನು ನೋಡಿದರೆ, ಬೌಲಿಂಗ್‌ನಲ್ಲಿ ಅತ್ಯಂತ ದುರ್ಬಲವಾಗಿದೆ. ಬ್ಯಾಟಿಂಗ್ ನಲ್ಲೂ ನಿರೀಕ್ಷಿತ ರನ್ ಗಳಿಕೆ ಆಗುತ್ತಿಲ್ಲ. ದೀಪಕ್ ಚಹಾರ್ ಅವರ ಅಲಭ್ಯತೆಯು ತಂಡವನ್ನು ಬಾಧಿಸಿದೆ. ಚೆನ್ನೈ ತಂಡವನ್ನು ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೋಲಿಸಿವೆ. ಸಾಮಾನ್ಯವಾಗಿ, ಈ ನಾಲ್ಕು ತಂಡಗಳ ಪೈಕಿ ಮೂರರ ವಿರುದ್ಧ ಸಿಎಸ್‌ಕೆ ಮೇಲುಗೈ ಸಾಧಿಸುತ್ತಾ ಬಂದಿದೆ. ಆದರೆ ಈ ಬಾರಿ ಹಳೆಯ ದಾಖಲೆಯೂ ಕೆಲಸ ಮಾಡಲಿಲ್ಲ. ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಕಾರಣವೇನು?
ದೀಪಕ್ ಚಹಾರ್ ಅಲಭ್ಯತೆ: ದೀಪಕ್ ಚಹಾರ್ ಗಾಯವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ. ಈ ಬೌಲರ್ ಇಲ್ಲದೆ, ಸಿಎಸ್‌ಕೆ ಬೌಲಿಂಗ್‌ನಲ್ಲಿ ಯಾವುದೇ ಮೊಣಚಿಲ್ಲ. ಪವರ್‌ಪ್ಲೇಯಲ್ಲಿ ವಿಕೆಟ್‌ಗಳನ್ನು ಪಡೆಯುತ್ತಿಲ್ಲ ಮತ್ತು ರನ್‌ಗಳನ್ನು ನಿಯಂತ್ರಿಸುತ್ತಿಲ್ಲ. ಚಹರ್‌ಗಾಗಿ ಸಿಎಸ್‌ಕೆ 14 ಕೋಟಿ ರೂ. ನೀಡಿ ಈ ಬಾರಿ ಖರೀದಿಸಿದ ಕಾರಣ ಅವರ ಪ್ರದರ್ಶನ. ಇದೀಗ ದೀಪಕ್ ಚಹಾರ್ ಅನುಪಸ್ಥಿತಿಯಲ್ಲಿ, CSK ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ ಅವರಂತಹ ಬೌಲರ್‌ಗಳನ್ನು ಪ್ರಯತ್ನಿಸಿದೆ, ಆದರೆ ಯಶಸ್ವಿಯಾಗಲಿಲ್ಲ. ದೀಪಕ್ ಚಹಾರ್ 2018 ರ ನಂತರ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಪವರ್‌ಪ್ಲೇ ಬೌಲರ್. ಅಂತಹ ಪರಿಸ್ಥಿತಿಯಲ್ಲಿ, ಅವರ ಕೊರತೆಯನ್ನು ಪೂರೈಸುವುದು ಕಷ್ಟಕರವೆಂದು ತೋರುತ್ತದೆ. ಆದರೆ ಉಳಿದ ಬೌಲರ್‌ಗಳು ಪ್ರಭಾವ ಬೀರಲು ಸಾಧ್ಯವಾಗದಿರುವುದು ಸಿಎಸ್‌ಕೆ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
ಆರಂಭಿಕರಲ್ಲಿ ವೈಫಲ್ಯ: ಐಪಿಎಲ್ 2021 ರಲ್ಲಿ CSK ಪ್ರಶಸ್ತಿಯನ್ನು ಗೆದ್ದಾಗ, ತಂಡದ ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ಇಬ್ಬರೂ ಅದ್ಭುತ ರನ್ ಗಳಿಸಿದ್ದರು. ಕಳೆದ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಇಬ್ಬರೂ ಮೊದಲ ಎರಡು ಸ್ಥಾನಗಳಲ್ಲಿದ್ದರು. ಆದರೆ ಈ ಬಾರಿ ಕಥೆ ಬದಲಾಗಿದೆ. ಡು ಪ್ಲೆಸಿಸ್ ತಂಡದ ಭಾಗವಾಗಿಲ್ಲ. ಗಾಯಕ್ವಾಡ್ ಬ್ಯಾಟಿಂಗ್ ಮರೆತಂತೆ ಬ್ಯಾಟ್ ಬೀಸುತ್ತಿದ್ದಾರೆ. ಮತ್ತೋರ್ವ ಆರಂಭಿಕ ರಾಬಿನ್ ಉತ್ತಪ್ಪ ಒಂದು ಇನ್ನಿಂಗ್ಸ್‌ನಲ್ಲಿ ರನ್ ಗಳಿಸಿದ್ದಾರೆ. ಆದರೆ ಉಳಿದ ಎರಡು ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. ಆರಂಭಿಕ ಹಂತದಲ್ಲಿ ರನ್‌ಗಳ ಕೊರತೆಯಿಂದಾಗಿ ತಂಡ ಹಿನ್ನಡೆ ಅನುಭವಿಸುತ್ತಿದೆ.
ದುರ್ಬಲ ಸ್ಪಿನ್ ಬೌಲಿಂಗ್: ಒಂದು ಕಾಲದಲ್ಲಿ ಸ್ಪಿನ್ ಬೌಲಿಂಗ್ ಸಿಎಸ್‌ಕೆಯ ಶಕ್ತಿಯಾಗಿತ್ತು. ಆದರೆ ಈ ಸೀಸನ್ನಲ್ಲಿ ಹಾಗೆ ಹೇಳುವುದು ಕಷ್ಟ. ಸಿಎಸ್‌ಕೆ ತಂಡವು ಈ ಬಾರಿ ರವೀಂದ್ರ ಜಡೇಜಾ, ಮಹಿಷ್ ತೀಕ್ಷಣ ಮತ್ತು ಪ್ರಶಾಂತ್ ಸೋಲಂಕಿ..ಹೀಗೆ ಕೇವಲ ಮೂರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳನ್ನು ಹೊಂದಿದೆ. ಇವರಲ್ಲಿಯೂ ಟಿ20 ಮಾದರಿಯಲ್ಲಿ ಬೌಲರ್ ಆಗಿ ಜಡೇಜಾ ಅವರ ದಾಖಲೆ ಉತ್ತಮವಾಗಿಲ್ಲ. ಕಳೆದ ಕೆಲವು ಸೀಸನ್‌ಗಳಿಂದ ಅವರು ತಂಡದ ಎಲ್ಲಾ ಪಂದ್ಯಗಳಲ್ಲಿ ಬೌಲಿಂಗ್ ಮಾಡುತ್ತಿಲ್ಲ. ಮೊಯಿನ್ ಅಲಿಯ ಕಥೆಯೂ ಇದೇ ಆಗಿದೆ. ಅವರನ್ನು ಅರೆಕಾಲಿಕ ಸ್ಪಿನ್ನರ್ ಎಂದೂ ಕರೆಯಬಹುದು. ಹೀಗಾಗಿ ಸಿಎಸ್‌ಕೆ ಶಕ್ತಿಯಾಗಿದ್ದ ಸ್ಪಿನ್ ಬೌಲರ್‌ಗಳು ಈ ಬಾರಿ ತಂಡದಲ್ಲಿಲ್ಲ. ಇದ್ದವರಿಂದ ನಿರೀಕ್ಷಿತ ಪ್ರದರ್ಶನ ಕೂಡ ಮೂಡಿಬರುತ್ತಿಲ್ಲ.
ನಿಧಾನಗತಿಯ ಮಧ್ಯಮ ಕ್ರಮಾಂಕ: ಸಿಎಸ್‌ಕೆ ಮಧ್ಯಮ ಕ್ರಮಾಂಕವು ಈ ಬಾರಿ ಕೈಕೊಟ್ಟಿದೆ. ಮೊಯಿನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ವೇಗವಾಗಿ ರನ್ ಗಳಿಸಲು ವಿಫಲರಾಗಿದ್ದಾರೆ. ರಾಯುಡು ಮತ್ತು ಧೋನಿ ಈಗ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಪಂದ್ಯದ ಅಭ್ಯಾಸದ ಕೊರತೆಯಿದೆ. ಇನ್ನು ಮೊಯಿನ್ ಅಲಿ ತ್ವರಿತವಾಗಿ ರನ್ ಗಳಿಸಿದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. ಇನ್ನು ನಾಯಕತ್ವ ಸಿಗುತ್ತಿದ್ದಂತೆ ರವೀಂದ್ರ ಜಡೇಜಾ ಬ್ಯಾಟಿಂಗ್ನಲ್ಲಿ ವೈಫಲ್ಯ ಹೊಂದಿದ್ದಾರೆ. ಅಂದರೆ ಆರಂಭಿಕ ದೌರ್ಬಲ್ಯವನ್ನು ಮರೆ ಮಾಚುವಂತೆ ಮಧ್ಯಮ ಕ್ರಮಾಂಕದಲ್ಲಿ ಯಾರು ಕೂಡ ಆಡುತ್ತಿಲ್ಲ. ಇದು ಕೂಡ ಸಿಎಸ್‌ಕೆ ಸತತ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಬರೆದ ಕಿಂಗ್ ಕೊಹ್ಲಿ