ಡುಮ್ಮ ಎಂದು ಜರೀದಿದ್ದ ರೋಹಿತ್ಗೆ ಇಂದು ಸಲ್ಯೂಟ್ ಹೊಡೆದ ಕಾಂಗ್ರೆಸ್ ನಾಯಕಿ ಶಮಾ! ಹೇಳಿದ್ದೇನು?
Champions Trophy 2025: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಅಂತರದಿಂದ ಜಯಗಳಿಸಿದೆ. ರೋಹಿತ್ ಶರ್ಮಾ ಅವರ 76 ರನ್‌ಗಳ ಅಮೋಘ ಇನಿಂಗ್ಸ್ ಈ ಗೆಲುವಿಗೆ ಪ್ರಮುಖ ಕಾರಣವಾಗಿತ್ತು. ತಂಡದ ಗೆಲುವಿನ ಬಳಿಕ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಅವರು ರೋಹಿತ್ ಶರ್ಮಾಗೆ ಸಲ್ಯೂಟ್ ಹೊಡೆದಿದ್ದಾರೆ.

140 ಕೋಟಿ ಭಾರತೀಯ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗೇಳುತ್ತಿದ್ದಾರೆ. ಇದಕ್ಕೆ ಕಾರಣ ದೂರದ ದುಬೈನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ (Team India) ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ಪ್ರಶಸ್ತಿ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಕಿವೀಸ್ ತಂಡ ನೀಡಿದ 252 ರನ್‌ಗಳ ಗುರಿಯನ್ನು ಟೀಂ ಇಂಡಿಯಾ 6 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. ತಂಡದ ಈ ಗೆಲುವಿನಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಸಿಡಿಸಿದ 76 ರನ್ಗಳು ಪ್ರಮುಖ ಪಾತ್ರವಹಿಸಿದವು. ನಾಯಕನ ಈ ಗೆಲುವಿನ ಇನ್ನಿಂಗ್ಸ್ಗೆ ಇಡೀ ಕ್ರಿಕೆಟ್ ಲೋಕವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಇದರ ಜೊತೆಗೆ ಕೆಲವೇ ದಿನಗಳ ಹಿಂದೆ ರೋಹಿತ್ರನ್ನು ಡುಮ್ಮ, ಕ್ರಿಕೆಟ್ ಆಡಲು ಲಾಯಕ್ ಇಲ್ಲ ಎಂದು ಜರಿದಿದ್ದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್, ಇದೀಗ ಹಿಟ್ಮ್ಯಾನ್ಗೆ ಸಲ್ಯೂಟ್ ಹೊಡೆದಿದ್ದಾರೆ.
ರೋಹಿತ್ ಶರ್ಮಾಗೆ ಸೆಲ್ಯೂಟ್
ಅತ್ತ ದುಬೈನಲ್ಲಿ ಟೀಂ ಇಂಡಿಯಾ ವಿಜಯ ಪತಾಕೆ ಹಾರಿಸಿದರೆ. ಇತ್ತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ಟೀಂ ಇಂಡಿಯಾವನ್ನು ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಅಭಿನಂದಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಭಿನಂದನೆಯ ಪೋಸ್ಟ್ ಮಾಡಿರುವ ಶಮಾ, ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾಗೆ ಅಭಿನಂದನೆಗಳು. ಹಾಗೆಯೇ 76 ರನ್ ಗಳಿಸುವ ಮೂಲಕ ಗೆಲುವಿಗೆ ಬಲವಾದ ಅಡಿಪಾಯ ಹಾಕಿದ ನಾಯಕ ರೋಹಿತ್ ಶರ್ಮಾಗೆ ಸೆಲ್ಯೂಟ್. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರ ಅಮೋಘ ಪ್ರದರ್ಶನವು ಭಾರತಕ್ಕೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು ಎಂದು ಬರೆದುಕೊಂಡಿದ್ದಾರೆ.
Congratulations to #TeamIndia for their stupendous performance in winning the #ChampionsTrophy2025! 🇮🇳🏆
Hats off to Captain @ImRo45 who led from the front with a brilliant 76, setting the tone for victory. @ShreyasIyer15 and @klrahul played crucial knocks, steering India to…
— Dr. Shama Mohamed (@drshamamohd) March 9, 2025
ಭಾರತ ಕಂಡ ಅತ್ಯಂತ ಅಸಮರ್ಥ ನಾಯಕ
ವಾಸ್ತವವಾಗಿ ಕೆಲವು ದಿನಗಳ ಹಿಂದೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್, ‘ರೋಹಿತ್ ಶರ್ಮಾ ದಪ್ಪಗಿದ್ದಾರೆ, ಅವರು ತೂಕ ಇಳಿಸಿಕೊಳ್ಳಬೇಕು. ಅವರು ಖಂಡಿತವಾಗಿಯೂ ಭಾರತ ಕಂಡ ಅತ್ಯಂತ ಅಸಮರ್ಥ ನಾಯಕ ಎಂದು ಬರೆದು ಪೋಸ್ಟ್ವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ಶಮಾ ಅವರ ಈ ಹೇಳಿಕೆ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ವಿವಾದ ಕಾವು ಹೆಚ್ಚಾದ ಬಳಿಕ ಅವರು ತಮ್ಮ ಪೋಸ್ಟ್ ಅನ್ನು ತೆಗೆದುಹಾಕಿದ್ದರು.
ಇದನ್ನೂ ಓದಿ: IND vs NZ: ಕನ್ನಡಿಗನ ಕೈಸೇರಿದ ಗೋಲ್ಡನ್ ಬ್ಯಾಟ್, ಪಂದ್ಯಾವಳಿಯ ಆಟಗಾರ ಕಿರೀಟ
ಪಂದ್ಯ ಹೀಗಿತ್ತು
2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ನ್ಯೂಜಿಲೆಂಡ್ ಮತ್ತು ಟೀಂ ಇಂಡಿಯಾ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಆರು ವಿಕೆಟ್ ಕಳೆದುಕೊಂಡು ಆರು ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು. ಪಂದ್ಯದಲ್ಲಿ 83 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಏಳು ಬೌಂಡರಿಗಳ ನೆರವಿನಿಂದ 76 ರನ್ ಗಳಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ