ರೋಹಿತ್ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಕಾಂಗ್ರೆಸ್ ನಾಯಕಿ ಶಮಾ ಕೊಹ್ಲಿ ಬಗ್ಗೆ ಹೇಳಿದ್ದೇನು?
Champions Trophy 2025: ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ರೋಹಿತ್ ಅವರ ತೂಕ ಮತ್ತು ನಾಯಕತ್ವವನ್ನು ಪ್ರಶ್ನಿಸಿದ್ದ ಶಮಾ, ಈ ವಿವಾದ ಜೋರಾದ ಬಳಿಕ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದರು. ಇದೀಗ ಅವರು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ನೀಡಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ ದಪ್ಪಗಿದ್ದಾರೆ, ಅವರು ತೂಕ ಇಳಿಸಿಕೊಳ್ಳಬೇಕು. ಅವರು ಖಂಡಿತವಾಗಿಯೂ ಭಾರತ ಕಂಡ ಅತ್ಯಂತ ಅಸಮರ್ಥ ನಾಯಕ ಎಂದಿದ್ದ ಶಮಾ ಅವರ ಹೇಳಿಕೆ ವಿವಾದ ಹುಟ್ಟುಹಾಕಿತ್ತು. ಆ ಬಳಿಕ ಅವರು ತಮ್ಮ ಪೋಸ್ಟ್ ಅನ್ನು ತೆಗೆದುಹಾಕಿದ್ದರು. ಇದೀಗ ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ಗೇರಿದ ಬಳಿಕ ಮಾತನಾಡಿರುವ ಶಮಾ ಮೊಹಮ್ಮದ್, ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಶಮಾ ಮೊಹಮ್ಮದ್, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಗೆದ್ದಿರುವುದು ನನಗೆ ತುಂಬಾ ಸಂತೋಷವಾಗಿದೆ. 84 ರನ್ ಗಳಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಯನ್ನು ನಾನು ಅಭಿನಂದಿಸುತ್ತೇನೆ… ನಾನು ತುಂಬಾ ಉತ್ಸುಕಳಾಗಿದ್ದು ಫೈನಲ್‌ಗಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.