CPL 2024: ಬರೋಬ್ಬರಿ 266 ರನ್​ಗಳು: ಸಿಪಿಎಲ್​ನಲ್ಲಿ ದಾಖಲೆ ಬರೆದ ಅಮೆಝಾನ್ ವಾರಿಯರ್ಸ್

|

Updated on: Sep 05, 2024 | 8:59 AM

St Kitts and Nevis Patriots vs Guyana Amazon Warriors: ಕೆರಿಬಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಕಲೆಹಾಕಿದ ಎರಡನೇ ತಂಡವೆಂಬ ದಾಖಲೆಯನ್ನು ಗಯಾನಾ ಅಮೆಝಾನ್ ವಾರಿಯರ್ಸ್ ತಮ್ಮದಾಗಿಸಿಕೊಂಡಿದೆ. ಈ ದಾಖಲೆಯೊಂದಿಗೆ ಸಿಪಿಎಲ್​ನ 7ನೇ ಪಂದ್ಯದಲ್ಲಿ ಅಮೆಝಾನ್ ವಾರಿಯರ್ಸ್ ತಂಡವು 40 ರನ್​ಗಳ ಭರ್ಜರಿ ಜಯ ಸಾಧಿಸಿದೆ.

CPL 2024: ಬರೋಬ್ಬರಿ 266 ರನ್​ಗಳು: ಸಿಪಿಎಲ್​ನಲ್ಲಿ ದಾಖಲೆ ಬರೆದ ಅಮೆಝಾನ್ ವಾರಿಯರ್ಸ್
Shimron Hetmyer
Follow us on

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 7ನೇ ಪಂದ್ಯವು ರನ್​ಗಳ ಸುರಿಮಳೆಗೆ ಸಾಕ್ಷಿಯಾಗಿದೆ. ಸೇಂಟ್ ಕಿಟ್ಸ್​ನ ವಾರ್ನರ್ ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಗಯಾನಾ ಅಮೆಝಾನ್ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಬ್ಯಾಟಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್ ಆರಂಭಿಸಿದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ ಹಾಗೂ ಕೆವಿನ್ ಸಿಂಕ್ಲೆರ್ ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ಕೇವಲ 17 ರನ್​ಗಳಿಸಿ ಸಿಂಕ್ಲೆರ್ ಔಟಾದರು. ಇದರ ಬೆನ್ನಲ್ಲೇ ಶಾಯ್ ಹೋಪ್ (12) ಕೂಡ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಜೊತೆಯಾದ ಗುರ್ಬಾಝ್ ಹಾಗೂ ಶಿಮ್ರಾನ್ ಹೆಟ್ಮೆಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಬೌಲರ್​ಗಳನ್ನು ಚೆಂಡಾಡಿದ ಈ ಜೋಡಿಯು ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.

ಕೇವಲ 37 ಎಸೆತಗಳನ್ನು ಎದುರಿಸಿದ ಗುರ್ಬಾಝ್ 6 ಸಿಕ್ಸ್ ಹಾಗಊ 4 ಫೋರ್​ಗಳೊಂದಿಗೆ 69 ರನ್ ಬಾರಿಸಿ ಅನ್ರಿಕ್ ನೋಕಿಯಾಗೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮತ್ತೊಂದೆಡೆ ಬಿರುಗಾಳಿ ಬ್ಯಾಟಿಂಗ್ ಮುಂದುವರೆಸಿದ ಹೆಟ್ಮೆಯರ್ 11 ಸಿಕ್ಸರ್​ಗಳೊಂದಿಗೆ ಕೇವಲ 39 ಎಸೆತಗಳಲ್ಲಿ 91 ರನ್ ಚಚ್ಚಿದರು.

ಇನ್ನು ಅಂತಿಮ ಹಂತದಲ್ಲಿ ಕಣಕ್ಕಿಳಿದ ಕಿಮೋ ಪೌಲ್ 14 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 38 ರನ್ ಬಾರಿಸಿದರು. ಈ ಮೂಲಕ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 266 ರನ್​ ಕಲೆಹಾಕಿತು.

ದಾಖಲೆಯ ಮೊತ್ತ:

ಗಯಾನಾ ಅಮೆಝಾನ್ ವಾರಿಯರ್ಸ್ ಪೇರಿಸಿರುವ 266 ರನ್​ಗಳು ಕೆರಿಬಿಯನ್ ಪ್ರೀಮಿಯರ್ ಲೀಗ್​ನ 2ನೇ ಗರಿಷ್ಠ ಮೊತ್ತ ಎಂಬುದು ವಿಶೇಷ. 2019 ರಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡವು ಜಮೈಕಾ ತಲ್ಲವಾಸ್ ವಿರುದ್ಧ 267 ರನ್​ ಬಾರಿಸಿರುವುದು ದಾಖಲೆಯ ಮೊತ್ತವಾಗಿದೆ. ಈ ದಾಖಲೆಯ ಸಮೀಪಕ್ಕೆ ಬಂದ ಗಯಾನಾ ಅಮೆಝಾನ್ ವಾರಿಯರ್ಸ್ ಕೇವಲ ಒಂದು ರನ್​ನಿಂದ ಹಿಂದೆ ಉಳಿದು ಗರಿಷ್ಠ ಸ್ಕೋರ್​ಗಳ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದೆ.

ಉತ್ತಮ ಹೋರಾಟ:

267 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪರ ನಾಯಕ ಆ್ಯಂಡ್ರೆ ಫ್ಲೆಚರ್ 33 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 81 ರನ್ ಬಾರಿಸಿದ್ದರು. ಇನ್ನು ಕೈಲ್ ಮೇಯರ್ಸ್ 28, ಶೆರ್ಫೇನ್ ರುದರ್​ಫೋರ್ಡ್ 12 ಎಸೆತಗಳಲ್ಲಿ 34 ರನ್ ಚಚ್ಚಿದರು.

ಇದಾಗ್ಯೂ ಕೆಳ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯದ ಪರಿಣಾಮ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 18 ಓವರ್​ಗಳಲ್ಲಿ 226 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 40 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪ್ಲೇಯಿಂಗ್ 11: ಎವಿನ್ ಲೂಯಿಸ್ , ಆಂಡ್ರೆ ಫ್ಲೆಚರ್ (ನಾಯಕ) , ಕೈಲ್ ಮೇಯರ್ಸ್ , ಜೋಶ್ ಕ್ಲಾರ್ಕ್ಸನ್ , ಶೆರ್ಫೇನ್ ರುದರ್​ಫೋರ್ಡ್ , ಮೈಕೈಲ್ ಲೂಯಿಸ್ , ಓಡಿಯನ್ ಸ್ಮಿತ್ , ರಯಾನ್ ಜಾನ್ , ವೀರಸಾಮಿ ಪೆರುಮಾಳ್, ಮೊಹಮ್ಮದ್ ಮೊಹ್ಸಿನ್ , ಆನ್ರಿಕ್ ನೋಕಿಯಾ.

ಇದನ್ನೂ ಓದಿ: ಪವರ್​ಪ್ಲೇನಲ್ಲೇ ಶತಕ… ಆಸ್ಟ್ರೇಲಿಯನ್ನರ ಅಬ್ಬರಕ್ಕೆ ಹೊಸ ವಿಶ್ವ ದಾಖಲೆ ನಿರ್ಮಾಣ

ಗಯಾನಾ ಅಮೆಝಾನ್ ವಾರಿಯರ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ , ಗುಡಾಕೇಶ್ ಮೋಟಿ , ಶಾಯ್ ಹೋಪ್ , ಶಿಮ್ರಾನ್ ಹೆಟ್ಮೆಯರ್ , ಆಝಂ ಖಾನ , ಕೀಮೋ ಪೌಲ್ , ಡ್ವೈನ್ ಪ್ರಿಟೋರಿಯಸ್ , ರೇಮನ್ ರೀಫರ್ , ಕೆವಿನ್ ಸಿಂಕ್ಲೇರ್ , ಇಮ್ರಾನ್ ತಾಹಿರ್ (ನಾಯಕ) , ಜೂನಿಯರ್ ಸಿಂಕ್ಲೇರ್.