CPL 2024: ಕೊನೆಯ ಎಸೆತದಲ್ಲಿ ಸಿಕ್ಸ್​... ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಅಮೆಝಾನ್ ವಾರಿಯರ್ಸ್

CPL 2024: ಕೊನೆಯ ಎಸೆತದಲ್ಲಿ ಸಿಕ್ಸ್​… ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಅಮೆಝಾನ್ ವಾರಿಯರ್ಸ್

ಝಾಹಿರ್ ಯೂಸುಫ್
|

Updated on: Aug 31, 2024 | 2:20 PM

Antigua and Barbuda Falcons vs Guyana Amazon Warriors: ಸಿಪಿಎಲ್​ 2024ರ 2ನೇ ಪಂದ್ಯದಲ್ಲಿ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ವಿರುದ್ಧ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 3 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಅದು ಸಹ ಕೊನೆಯ ಓವರ್​ನಲ್ಲಿ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ.

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 2ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡದ ಪರ ಎಡಗೈ ದಾಂಡಿಗ ಫಖರ್ ಝಮಾನ್ 40 ರನ್ ಬಾರಿಸಿದರೆ, ಕೋಫಿ ಜೇಮ್ಸ್ 37 ರನ್​ಗಳ ಕೊಡುಗೆ ನೀಡಿದರು. ಇನ್ನು ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ಇಮಾದ್ ವಾಸಿಂ 21 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 40 ರನ್ ಚಚ್ಚಿದ್ದರು. ಈ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತು.

167 ರನ್​ಗಳ ಗುರಿ ಬೆನ್ನತ್ತಿದ ಗಯಾನಾ ಅಮೆಝಾನ್ ವಾರಿಯರ್ಸ್ ಪರ ಶಾಯ್ ಹೋಪ್ 41 ರನ್ ಬಾರಿಸಿದರೆ, ರೊಮಾರಿಯೊ ಶೆಫರ್ಡ್ 32 ರನ್​ ಚಚ್ಚಿದರು. ಇದಾಗ್ಯೂ ಅಮೆಝಾನ್ ವಾರಿಯರ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 16 ರನ್​ಗಳ ಅವಶ್ಯಕತೆಯಿತ್ತು. 20ನೇ ಓವರ್​ ಎಸೆದ ಮೊಹಮ್ಮದ್ ಅಮೀರ್ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ.

ಪರಿಣಾಮ ಕೊನೆಯ 5 ಎಸೆತಗಳಲ್ಲಿ 16 ರನ್​ಗಳ ಅಗತ್ಯತೆ. ಈ ಹಂತದಲ್ಲಿ ಡ್ವೈನ್ ಪ್ರಿಟೋರಿಯಸ್ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದರು. 4ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಕೊನೆಯ 2 ಎಸೆತಗಳಲ್ಲಿ 8 ರನ್​ಗಳು ಬೇಕಿತ್ತು. 20ನೇ ಓವರ್​ನ 5ನೇ ಎಸೆತದಲ್ಲಿ ಡ್ವೈನ್ ಪ್ರಿಟೋರಿಯಸ್ ಮತ್ತೊಂದು ಫೋರ್ ಬಾರಿಸಿದರು. ಅಂತಿಮ ಎಸೆತದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಕ್ಕೆ ಗೆಲ್ಲಲು 4 ರನ್​ಗಳ ಅವಶ್ಯಕತೆಯಿತ್ತು. ಅಮೀರ್ ಎಸೆದ ಕೊನೆಯ ಎಸೆತದಲ್ಲಿ ಲಾಂಗ್ ಆಫ್​ನತ್ತ ಆಕರ್ಷಕ ಸಿಕ್ಸ್ ಸಿಡಿಸುವ ಮೂಲಕ ಡ್ವೈನ್ ಪ್ರಿಟೋರಿಯಸ್ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.