ಕ್ರಿಕೆಟ್ ವಿಶ್ವದ 2ನೇ ಶ್ರೀಮಂತ ಕ್ರೀಡೆ ಎಂಬುದರಲ್ಲಿ ಡೌಟೇ ಇಲ್ಲ. ಅದರಲ್ಲೂ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿ ಇಂಡಿಯನ್ ಪ್ರೀಮಿಯರ್ ಲೀಗ್ ಗುರುತಿಸಿಕೊಂಡಿದೆ. ಇದರ ಜೊತೆ ಬಿಗ್ ಬ್ಯಾಷ್ ಲೀಗ್, ಹಂಡ್ರೆಡ್ ಲೀಗ್, ಪಿಎಸ್ಎಲ್, ಬಿಪಿಎಲ್…ಹೀಗೆ ಲೀಗ್ಗಳ ಸಂಖ್ಯೆಗೆ ಹೆಚ್ಚುತ್ತಾ ಹೋಗುತ್ತಿದೆ. ಆದರೆ ಇದೀಗ ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ಕ್ರಿಕೆಟರ್ಸ್ ಅಸೋಸಿಯೇಷನ್ (ಎಫ್‌ಐಸಿಎ) ಬಿಡುಗಡೆ ಮಾಡಿರುವ ವರದಿಯೊಂದು ಅಚ್ಚರಿಗೆ ಕಾರಣವಾಗಿದೆ. ಎಫ್‌ಐಸಿಎ ವರದಿ ಪ್ರಕಾರ, ಮುಂಬರುವ ದಿನಗಳಲ್ಲಿ ಕ್ರಿಕೆಟ್ನಲ್ಲಿ ಭಾರೀ ಬದಲಾವಣೆಯಾಗಲಿದೆ. ಏಕೆಂದರೆ ಈ ಸಂಸ್ಥೆ ನಡೆಸಿದ ಸಮೀಕ್ಷೆಯೊಂದರಲ್ಲಿ ಅಂತಹದೊಂದು ಫಲಿತಾಂಶ ಹೊರಬಿದ್ದಿದೆ.
ಈ ಸಮೀಕ್ಷೆಯಂತೆ ವಿಶ್ವದಾದ್ಯಂತ ಅನೇಕ ಕ್ರಿಕೆಟಿಗರು ಲೀಗ್‌ಗಳಲ್ಲಿ ಆಡಲು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಬರಲು ಸಿದ್ಧರಾಗಿದ್ದಾರೆ. ಅಂದರೆ ದೇಶಕ್ಕಿಂತ ಲೀಗ್ ಕ್ರಿಕೆಟ್ನತ್ತ ಹೆಚ್ಚಿನ ಒಲವು ಹೊಂದಿದ್ದಾರೆ. 11 ದೇಶಗಳ ಕ್ರಿಕೆಟಿಗರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಶೇ. 49 ರಷ್ಟು ಆಟಗಾರರು ಲೀಗ್‌ಗಳಲ್ಲಿ ಹೆಚ್ಚಿನ ಸಂಭಾವನೆ ಸಿಕ್ಕರೆ, ಅಂತರರಾಷ್ಟ್ರೀಯ ಕ್ರಿಕೆಟ್ ತ್ಯಜಿಸುವುದಾಗಿ ತಿಳಿಸಿದ್ದಾರೆ. ಅಂದರೆ ಬಹುತೇಕ ಆಟಗಾರರು ದೇಶಕ್ಕಿಂತ ಲೀಗ್‌ಗಳಲ್ಲಿ ಆಡಿ ದುಡ್ಡು ಮಾಡಬೇಕೆಂದು ಬಯಸಿದ್ದಾರೆ.
ಇದನ್ನು ಪುಷ್ಠೀಕರಿಸುವಂತೆ ಈಗಾಗಲೇ ಅನೇಕ ಸ್ಟಾರ್ ಕ್ರಿಕೆಟಿಗರು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಹಲವು ಲೀಗ್‌ಗಳಲ್ಲಿ ಆಡಲು ನಿರ್ಧರಿಸಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ವೆಸ್ಟ್ ಇಂಡೀಸ್ ತಂಡ ಮುಂದಿದೆ. ವಿಂಡೀಸ್ ಕ್ರಿಕೆಟ್ನ ಬಹುತೇಕ ಆಟಗಾರರು ಲೀಗ್ ಕ್ರಿಕೆಟ್ನತ್ತ ಹೆಚ್ಚಿನ ಒಲವು ಹೊಂದಿದ್ದಾರೆ. T20 ದಂತಕಥೆಗಳಾದ ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ವಿಶ್ವದಾದ್ಯಂತ ಲೀಗ್‌ಗಳಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಆದರೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಹೀಗೆ ಹಲವು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯುತ್ತಿರುವುದು ಕೆರಿಬಿಯನ್ ಕ್ರಿಕೆಟ್‌ಗೆ ಆತಂಕ ಮೂಡಿಸಿದೆ.
ಇತ್ತೀಚೆಗೆ ಲೀಗ್ ಕ್ರಿಕೆಟ್ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲು ನ್ಯೂಜಿಲೆಂಡ್ ವೇಗಿ ಅಂತಾರಾಷ್ಟ್ರೀಯ ಒಪ್ಪಂದ ಕೊನೆಗೊಳಿಸಿದ್ದರು. ಹಾಗೆಯೇ ಮತ್ತೋರ್ವ ಕಿವೀಸ್ ಆಟಗಾರ ಮಾರ್ಟಿನ್ ಗಪ್ಟಿಲ್ ಕೂಡ ರಾಷ್ಟ್ರೀಯ ತಂಡದ ಒಪ್ಪಂದದಿಂದ ಹೊರಬಂದಿದ್ದರು. ಇನ್ನು ಅನೇಕ ಆಟಗಾರರು ರಾಷ್ಟ್ರೀಯ ತಂಡದಿಂದ ಹೊರಗುಳಿದು ಲೀಗ್ ಕ್ರಿಕೆಟ್ಗಳ ವೇಳೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲವೂ ಈ ಬದಲಾವಣೆಯ ಭಾಗ ಎಂದೇ ಹೇಳಬಹುದು.
ಇದನ್ನೂ ಓದಿ: IPL 2023 ಹರಾಜಿಗೂ ಮುನ್ನವೇ RCB ತಂಡಕ್ಕೆ ಬಿಗ್ ಶಾಕ್..!
ಮತ್ತೊಂದೆಡೆ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಲೀಗ್ಗಳು ಕೂಡ ಸೇರ್ಪಡೆಯಾಗುತ್ತಿದೆ. ಈ ಲೀಗ್‌ಗಳಲ್ಲಿ ವಿಶ್ವದ ಶ್ರೀಮಂತ ತಂಡಗಳ ಮಾಲೀಕರಾದ ಐಪಿಎಲ್ ಫ್ರಾಂಚೈಸಿಗಳು ಬಂಡವಾಳ ಹೂಡುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ 2023 ರಲ್ಲಿ ಐಪಿಎಲ್ ಫ್ರಾಂಚೈಸಿಗಳು ಮಾಲೀಕತ್ವ ಹೊಂದಿರುವ ಯುಎಇ ಟಿ20 ಲೀಗ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ ಲೋಕಾರ್ಪಣೆಯಾಗುತ್ತಿದೆ. ಇದರಿಂದ ವರ್ಷ ಪೂರ್ತಿ ಕ್ರಿಕೆಟ್ ಲೀಗ್ಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿಯೇ ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ಕ್ರಿಕೆಟರ್ಸ್ ಅಸೋಸಿಯೇಷನ್ (ಎಫ್‌ಐಸಿಎ) ಬಿಡುಗಡೆ ಮಾಡಿರುವ ವರದಿಯು ಅಂತಾರಾಷ್ಟ್ರೀಯ ಕ್ರಿಕೆಟ್ನ ಭವಿಷ್ಯದ ಕುರಿತು ಚಿಂತಿಸುವಂತೆ ಮಾಡಿದೆ.
ಸಮೀಕ್ಷೆಯಲ್ಲಿ ಭಾರತೀಯ ಆಟಗಾರರಿಲ್ಲ:
ಈ ಸಮೀಕ್ಷೆಯಲ್ಲಿ ಭಾರತೀಯ ಕ್ರಿಕೆಟಿಗರನ್ನು ಪರಿಗಣಿಸಿಲ್ಲ. ಏಕೆಂದರೆ ಭಾರತೀಯ ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್ ಹೊರತುಪಡಿಸಿ ಬೇರೆ ಯಾವುದೇ ಟಿ20 ಲೀಗ್‌ನಲ್ಲಿ ಆಡುವಂತಿಲ್ಲ. ಹಾಗಾಗಿಯೇ ಈ ಸಮೀಕ್ಷೆಯಲ್ಲಿ ಭಾರತೀಯ ಕ್ರಿಕೆಟಿಗರನ್ನು ಸೇರಿಸಲಾಗಿಲ್ಲ ಎಂದು ಎಫ್‌ಐಸಿಎ ತಿಳಿಸಿದೆ. ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಬೆಳವಣಿಗೆಯು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನ ಭವಿಷ್ಯಕ್ಕೆ ಸವಾಲಾಗಿ ಪರಿಣಮಿಸಿರುವುದು ಸುಳ್ಳಲ್ಲ.