IPL 2025: ತನ್ನದೇ ಆಟಗಾರನಿಗೆ ನಿದ್ರೆ ತರಿಸಿದ ಸಿಎಸ್ಕೆಯ ಟೆಸ್ಟ್ ಬ್ಯಾಟಿಂಗ್; ಫೋಟೋ ವೈರಲ್
Chennai Super Kings IPL 2025 Slump: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2025ರಲ್ಲಿ ನಿರೀಕ್ಷೆಯಂತೆ ಆಡುತ್ತಿಲ್ಲ. ಮೊದಲ ಪಂದ್ಯದ ಗೆಲುವಿನ ನಂತರ, ತಂಡವು ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ಮತ್ತು ಆಟಗಾರನೊಬ್ಬ ನಿದ್ರಿಸುತ್ತಿರುವ ಫೋಟೋ ವೈರಲ್ ಆಗಿರುವುದು ತಂಡದ ಸ್ಥಿತಿಯನ್ನು ತೋರಿಸುತ್ತದೆ. ಇದು ಅಭಿಮಾನಿಗಳಿಗೆ ಬಹುದೊಡ್ಡ ನಿರಾಶೆಯನ್ನುಂಟು ಮಾಡಿದೆ.

ಐಪಿಎಲ್ 2025 (IPL 2025) ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ದುಸ್ವಪ್ನವಾಗಿ ಕಾಡುತ್ತಿದೆ. ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ತಂಡವನ್ನು ಮಣಿಸಿ ಗೆಲುವಿನ ಶುಭಾರಂಭ ಮಾಡಿದ್ದ ಚೆನ್ನೈ ತಂಡಕ್ಕೆ ಆ ಬಳಿಕ ಗೆಲುವೆಂಬುದು ಮರಿಚಿಕೆಯಾಗಿದೆ. ಈ ಸೀಸನ್‌ನಲ್ಲಿ ಆಡಿರುವ 4 ಪಂದ್ಯಗಳಲ್ಲಿ ತಂಡವು ಸತತ ಮೂರು ಪಂದ್ಯಗಳಲ್ಲಿ ಸೋತಿದೆ. ಅದರಲ್ಲೂ ಚೆನ್ನೈ ತನ್ನ 4ನೇ ಪಂದ್ಯದಲ್ಲಿ ನೀಡಿದ ಪ್ರದರ್ಶನ ಅಭಿಮಾನಿಗಳಿಗೆ ಭಾರಿ ನಿರಾಶೆಯನ್ನುಂಟು ಮಾಡಿದೆ. ಚೆನ್ನೈ ತಂಡವು ತನ್ನ ತವರು ಮೈದಾನವಾದ ಚೆಪಾಕ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ 25 ರನ್‌ಗಳಿಂದ ಸೋಲನುಭವಿಸಿದೆ. ಆದಾಗ್ಯೂ ಈ ಪಂದ್ಯದಲ್ಲಿ ಚೆನ್ನೈ ತಂಡ ಬ್ಯಾಟಿಂಗ್ ಮಾಡಿದ ರೀತಿ ಅಭಿಮಾನಿಗಳನ್ನು ತೀವ್ರ ನಿರಾಶೆಗೊಳಿಸಿತು. ಅಭಿಮಾನಿಗಳಿಗೆ ಮಾತ್ರವಲ್ಲ, ತಂಡದ ಆಟಗಾರರಿಗೂ ಬೋರ್ ಹೊಡಿಸಿತು. ಅದಕ್ಕೆ ಸಾಕ್ಷಿಯೆಂಬಂತೆ ತಂಡದ ಸಹ ಆಟಗಾರನೊಬ್ಬ ಪಂದ್ಯದ ಸಮಯದಲ್ಲಿ ಡಗೌಟ್‌ನಲ್ಲಿ ಕುಳಿತು ನಿದ್ರೆಗೆ ಜಾರಿದ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Vansh Bedi is all CSK fans while watching them bat 🙂 https://t.co/LkWgjd5nVP pic.twitter.com/no9q1n4KtV
— Sai Vamshi💛 (@me_Nobitha) April 5, 2025
ಚೆನ್ನೈ ಕಳಪೆ ಬ್ಯಾಟಿಂಗ್
ಏಪ್ರಿಲ್ 5 ರ ಶನಿವಾರ ಚೆನ್ನೈನ ಐತಿಹಾಸಿಕ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಆತಿಥೇಯ ತಂಡದ ಬ್ಯಾಟಿಂಗ್ ಸಂಪೂರ್ಣವಾಗಿ ನೀರಸವಾಗಿತ್ತು. ದೆಹಲಿ ನೀಡಿದ 184 ರನ್‌ಗಳ ಗುರಿಗೆ ಉತ್ತರವಾಗಿ, ತಂಡವು ಕೆಟ್ಟ ಆರಂಭವನ್ನು ಹೊಂದಿದಲ್ಲದೆ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲ್ಲೇ ಸಾಗಿತು. ಡೆಲ್ಲಿ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ತಂಡದ ಒಬ್ಬನೇ ಒಬ್ಬ ಆಟಗಾರ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲಿಲ್ಲ. ತಂಡ ಕೇವಲ 5 ವಿಕೆಟ್ ಕಳೆದುಕೊಂಡಿತ್ತಾದರೂ ಗೆಲುವಿನ ಸಮೀಪಕ್ಕೂ ಹೋಗಲು ಸಾಧ್ಯವಾಗಲಿಲ್ಲ.
IPL 2025: ಆರ್ಸಿಬಿ ಬಳಿಕ ಚೆನ್ನೈ ಭದ್ರಕೋಟೆಯನ್ನು ಭೇದಿಸಿದ ಡೆಲ್ಲಿ ಕ್ಯಾಪಿಟಲ್ಸ್
ನಿದ್ರೆಗೆ ಜಾರಿದ ಸಹ ಆಟಗಾರ
ದೆಹಲಿ ಬೌಲರ್ಗಳ ಕರಾರುವಕ್ಕಾದ ದಾಳಿಯ ಮುಂದೆ ಚೆನ್ನೈ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ರನ್ಗಳಿಸಲು ಪರದಾಡಬೇಕಾಯಿತು. ಚೆನ್ನೈ ಆಟಗಾರರ ಈ ಸ್ಥಿತಿ ನೋಡಿದ ಚೆನ್ನೈ ಅಭಿಮಾನಿಗಳು ನಿರಾಶೆಗೊಂಡರು. ಅಭಿಮಾನಿಗಳ ಹೊರತಾಗಿ ಚೆನ್ನೈ ತಂಡದ ಯುವ ಆಟಗಾರ ವಂಶ್ ಬೇಡಿ ಕೂಡ ತಂಡದ ಆಮೆಗತಿಯ ಬ್ಯಾಟಿಂಗ್ ನೋಡಿ ನೋಡಿ ಸಾಕಾಗಿ ಆಟದ ಮಧ್ಯದಲ್ಲಿ ನಿದ್ರೆಗೆ ಜಾರಿದರು. ಸಿಎಸ್ಕೆ ಬ್ಯಾಟಿಂಗ್ ಮಾಡುವ ವೇಳೆ ಡಗೌಟ್‌ನಲ್ಲಿ ರವೀಂದ್ರ ಜಡೇಜಾ ಪಕ್ಕದಲ್ಲಿ ಕುಳಿತಿದ್ದ ವಂಶ್ ಬೇಡಿ ಗಾಡವಾಗಿ ನಿದ್ರೆಗೆ ಜಾರಿದ್ದಾರೆ. ಇದೀಗ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 pm, Sat, 5 April 25