W,W,W,W,W..; ಸತತ ಐದು ಎಸೆತಗಳಲ್ಲಿ 5 ವಿಕೆಟ್ ಉರುಳಿಸಿ ವಿಶ್ವ ದಾಖಲೆ ಬರೆದ ಐರಿಶ್ ವೇಗಿ
Curtis Campher's Historic 5 Wickets in 5 Balls: ಐರ್ಲೆಂಡ್‌ನ ಕರ್ಟಿಸ್ ಕ್ಯಾಂಪರ್ ಅವರು ಇಂಟರ್-ಪ್ರಾಂತೀಯ ಟಿ20 ಪಂದ್ಯಾವಳಿಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಒಂದೇ ಓವರ್‌ನಲ್ಲಿ ಡಬಲ್ ಹ್ಯಾಟ್ರಿಕ್ ಮತ್ತು ಸತತ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದು ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಅವರು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ.

ಯಾವುದೇ ಕ್ರಿಕೆಟ್ ಸ್ವರೂಪದಲ್ಲಿ ಹ್ಯಾಟ್ರಿಕ್ ಪಡೆಯುವುದು ಸುಲಭದ ಕೆಲಸವಲ್ಲ. ಹಾಗೆಯೇ ಪ್ರತಿಯೊಬ್ಬ ಬೌಲರ್‌ಗೂ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆಯುವುದು ಒಂದು ಕನಸಾಗಿರುತ್ತದೆ. ಆದರೆ ಕೆಲವೇ ಕೆಲವು ಬೌಲರ್‌ಗಳು ಈ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ಇದೀಗ ಅಂತಹದ್ದೇ, ಅದಕ್ಕೂ ಮೀರಿದ ಸಾಧನೆಯೊಂದನ್ನು ಐರ್ಲೆಂಡ್‌ನ ಬೌಲರ್ ಮಾಡಿದ್ದಾನೆ. ಪ್ರಸ್ತುತ ಐರ್ಲೆಂಡ್‌ನ ದೇಶೀಯ ಟಿ20 ಟೂರ್ನಮೆಂಟ್ ಇಂಟರ್-ಪ್ರಾಂತೀಯ ಟಿ20 ಪಂದ್ಯಾವಳಿಯಲ್ಲಿ ಬೌಲರ್ ಕರ್ಟಿಸ್ ಕ್ಯಾಂಪರ್ (Curtis Campher) ಸತತ 5 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಒಂದೇ ಟಿ20 ಪಂದ್ಯದಲ್ಲಿ ‘ಡಬಲ್ ಹ್ಯಾಟ್ರಿಕ್’ ಮತ್ತು ಸತತ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೇಲೆ ಹೇಳಿದಂತೆ ದೇಶೀಯ ಟಿ20 ಟೂರ್ನಮೆಂಟ್ ಇಂಟರ್-ಪ್ರಾಂತೀಯ ಟಿ20 ಟ್ರೋಫಿಯನ್ನು ಐರ್ಲೆಂಡ್‌ನಲ್ಲಿ ಆಡಲಾಗುತ್ತಿದೆ. ಈ ಪಂದ್ಯಾವಳಿಯಲ್ಲಿ, ಐರ್ಲೆಂಡ್ ಕ್ರಿಕೆಟ್ ತಂಡದ ಹಿರಿಯ ಆಲ್‌ರೌಂಡರ್ ಕರ್ಟಿಸ್ ಕ್ಯಾಂಪರ್, ಮನ್‌ಸ್ಟರ್ ರೆಡ್ಸ್ ಪರ ಆಡುತ್ತಿದ್ದು, ತಮ್ಮ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ಜುಲೈ 10, ಗುರುವಾರ ರೆಡ್ಸ್ ಮತ್ತು ನಾರ್ತ್-ವೆಸ್ಟ್ ವಾರಿಯರ್ಸ್ ನಡುವೆ ನಡೆದ ಈ ಪಂದ್ಯದಲ್ಲಿ, ಕ್ಯಾಂಪರ್ ತಂಡವು ಮೊದಲು ಬ್ಯಾಟ್ ಮಾಡಿ 7 ವಿಕೆಟ್‌ಗಳಿಗೆ 188 ರನ್ ಗಳಿಸಿತು. ತಂಡದ ನಾಯಕರಾಗಿದ್ದ ಕರ್ಟಿಸ್ ಕ್ಯಾಂಪರ್ ಕೇವಲ 24 ಎಸೆತಗಳಲ್ಲಿ ಅತ್ಯಧಿಕ 44 ರನ್ ಕಲೆಹಾಕಿದರು.
ಸತತ ಐದು ಎಸೆತಗಳಲ್ಲಿ 5 ವಿಕೆಟ್
ಈ ಗುರಿ ಬೆನ್ನಟ್ಟಿದ ನಾರ್ತ್-ವೆಸ್ಟ್ ತಂಡ ಕಳಪೆ ಆರಂಭ ಪಡೆಯಿತು. ಹೀಗಾಗಿ ತಂಡವು 11 ಓವರ್‌ಗಳಲ್ಲಿ 78 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ತಂಡದ ಸೋಲು ಖಚಿತವೆನಿಸಿದರೂ ಮುಂದಿನ ಕೆಲವು ಎಸೆತಗಳಲ್ಲಿ ಪಂದ್ಯ ಕೊನೆಗೊಳ್ಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಈ ವೇಳೆ ದಾಳಿಗಿಳಿದ ಮನ್‌ಸ್ಟರ್ ರೆಡ್ಸ್ ನಾಯಕ ಕ್ಯಾಂಪರ್ ತಮ್ಮ ಮೊದಲ ಓವರ್‌ನಲ್ಲಿ 8 ರನ್‌ಗಳನ್ನು ನೀಡಿದರು. ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಿಟ್ಟುಕೊಟ್ಟರು. ಆದರೆ ಅದರ ನಂತರ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ 2 ವಿಕೆಟ್‌ಗಳನ್ನು ಪಡೆದರು.
ನಂತರ ತಮ್ಮ ಮುಂದಿನ ಓವರ್‌ನಲ್ಲಿ ಅವರಿಗೆ ಹ್ಯಾಟ್ರಿಕ್ ಪಡೆಯುವ ಅವಕಾಶ ಸಿಕ್ಕಿತು. ಹೊಸ ಓವರ್‌ನ ಮೊದಲ ಎಸೆತದಲ್ಲೇ ತಮ್ಮ ಅಂತರರಾಷ್ಟ್ರೀಯ ತಂಡದ ಸಹ ಆಟಗಾರ ಆಂಡಿ ಮೆಕ್‌ಬ್ರೈನ್ ಅವರ ವಿಕೆಟ್ ಪಡೆಯುವ ಮೂಲಕ ಅವರು ತಮ್ಮ ಹ್ಯಾಟ್ರಿಕ್ ಅನ್ನು ಸಹ ಪೂರ್ಣಗೊಳಿಸಿದರು. ಆ ಬಳಿಕವೂ ವಿಕೆಟ್ ಬೇಟೆ ಮುಂದುವರೆಸಿದ ಅವರು ಮುಂದಿನ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು. ಈ ರೀತಿಯಾಗಿ, ಕ್ಯಾಂಪರ್ ಪಂದ್ಯದಲ್ಲಿ ತಮ್ಮ ಡಬಲ್ ಹ್ಯಾಟ್ರಿಕ್ ಅನ್ನು ಪೂರ್ಣಗೊಳಿಸಿದರು. ಕ್ರಿಕೆಟ್‌ನಲ್ಲಿ, ಸತತ 4 ಎಸೆತಗಳಲ್ಲಿ 4 ವಿಕೆಟ್‌ಗಳನ್ನು ಪಡೆದಿರುವುದನ್ನು ಡಬಲ್ ಹ್ಯಾಟ್ರಿಕ್ ಎಂದು ಕರೆಯಲಾಗುತ್ತದೆ. ಕ್ಯಾಂಪರ್ ಈ ಸಾಧನೆಯನ್ನು ಈ ಹಿಂದೆಯೂ ಮಾಡಿದ್ದರು. ಜೋಶ್ ವಿಲ್ಸನ್ ರೂಪದಲ್ಲಿ ಕೊನೆಯ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡುವ ಮೂಲಕ, ಕ್ಯಾಂಪರ್ ಸತತ 5 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಪಡೆದರು.
ಈಗಾಗಲೇ ಡಬಲ್ ಹ್ಯಾಟ್ರಿಕ್ ಪಡೆದಿದ್ದ ಕ್ಯಾಂಪರ್
ವೃತ್ತಿಪರ ಕ್ರಿಕೆಟ್ ಇತಿಹಾಸದಲ್ಲಿ ಬೌಲರ್ ಒಬ್ಬರು ಸತತ 5 ಎಸೆತಗಳಲ್ಲಿ 5 ವಿಕೆಟ್ ಪಡೆದಿರುವುದು ಇದೇ ಮೊದಲು. ಈ ರೀತಿಯಾಗಿ, ಕ್ಯಾಂಪರ್ ವಿಶ್ವ ಕ್ರಿಕೆಟ್‌ನಲ್ಲಿ ಶಾಶ್ವತವಾಗಿ ದೊಡ್ಡ ದಾಖಲೆಯನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ಅವರ ಪ್ರದರ್ಶನದಿಂದಾಗಿ, ನಾರ್ತ್-ವೆಸ್ಟ್ ಕೇವಲ 88 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು 100 ರನ್‌ಗಳಿಂದ ಕಳೆದುಕೊಂಡಿತು. ಅಂದಹಾಗೆ, ಕ್ಯಾಂಪರ್ ಡಬಲ್ ಹ್ಯಾಟ್ರಿಕ್ ಪಡೆದಿರುವುದು ಇದೇ ಮೊದಲಲ್ಲ. ಸುಮಾರು 4 ವರ್ಷಗಳ ಹಿಂದೆ 2021 ರ ಟಿ20 ವಿಶ್ವಕಪ್‌ನಲ್ಲಿ ಕ್ಯಾಂಪರ್, ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಸತತವಾಗಿ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಡಬಲ್ ಹ್ಯಾಟ್ರಿಕ್ ಪೂರ್ಣಗೊಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Thu, 10 July 25
