IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಆರ್ಸಿಬಿ (RCB), ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಹೊಸ ಕೋಚ್ಗಳನ್ನು ನೇಮಿಸಿಕೊಂಡಿದೆ. ಇದೀಗ ಸನ್ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಕೂಡ ಕೋಚ್ ಸ್ಥಾನದಿಂದ ಬ್ರಿಯಾನ್ ಲಾರಾ ಅವರನ್ನು ಕೆಳಗಿಳಿಸಿದೆ. ಅಲ್ಲದೆ ಹೊಸ ಕೋಚ್ ಆಗಿ ನ್ಯೂಝಿಲೆಂಡ್ನ ಡೇನಿಯಲ್ ವೆಟ್ಟೋರಿ (Daniel Vettori )ಅವರನ್ನು ನೇಮಿಸಿದೆ.
ಈ ಹಿಂದೆ ಆರ್ಸಿಬಿ ತಂಡದ ನಾಯಕರಾಗಿ, ಆ ಬಳಿಕ ಕೋಚ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ವೆಟ್ಟೋರಿ ಇದೀಗ ಸನ್ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಕೈ ಜೋಡಿಸಿದ್ದಾರೆ. ನ್ಯೂಝಿಲೆಂಡ್ ತಂಡದ ಮಾಜಿ ಎಡಗೈ ಸ್ಪಿನ್ನರ್ ವೆಟ್ಟೋರಿ ಪ್ರಸ್ತುತ ಹಂಡ್ರೆಡ್ ನಡೆಯುತ್ತಿರುವ ಹಂಡ್ರೆಡ್ ಲೀಗ್ನಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡದ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಸ್ಥಾನದಲ್ಲಿದ್ದಾರೆ. ಇದೀಗ ವರ್ಷಗಳ ಬಳಿಕ ಮತ್ತೆ ಐಪಿಎಲ್ಗೆ ಹಿಂತಿರುಗುತ್ತಿರುವುದು ವಿಶೇಷ.
ಐಪಿಎಲ್ನಲ್ಲಿ ಆರ್ಸಿಬಿ ಪರ 34 ಪಂದ್ಯಗಳನ್ನಾಡಿರುವ ವೆಟ್ಟೋರಿ ಒಟ್ಟು 38 ವಿಕೆಟ್ ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ 2011 ರಲ್ಲಿ ವೆಟ್ಟೋರಿ ನಾಯಕತ್ವದಲ್ಲಿ ಆರ್ಸಿಬಿ ಫೈನಲ್ ಪ್ರವೇಶಿಸಿತ್ತು ಎಂಬುದು ವಿಶೇಷ. ಇದಾದ ಬಳಿಕ 2015 ರಿಂದ 2018 ರವರೆಗೆ ಆರ್ಸಿಬಿ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಇವರ ತರಬೇತಿಯಲ್ಲಿ ಆರ್ಸಿಬಿ 2015 ರಲ್ಲಿ ಪ್ಲೇಆಫ್ ಹಾಗೂ 2016 ರಲ್ಲಿ ಫೈನಲ್ಗೆ ಪ್ರವೇಶಿಸಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಸನ್ರೈಸರ್ಸ್ ಹೈದರಾಬಾದ್ ತಂಡವು ಡೇನಿಯಲ್ ವೆಟ್ಟೋರಿಯನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿದೆ.
ಕಳೆದ ಎರಡು ಸೀಸನ್ಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಐಪಿಎಲ್ 2023 ರಲ್ಲಿ ಬ್ರಿಯಾನ್ ಲಾರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಆದರೆ ಲಾರಾ ಮುಂದಾಳತ್ವದಲ್ಲಿ ಎಸ್ಆರ್ಹೆಚ್ ಮತ್ತಷ್ಟು ಮುಗ್ಗರಿಸಿತ್ತು.
ಇದನ್ನೂ ಓದಿ: IPL 2024: ಐಪಿಎಲ್ನಲ್ಲಿ ಮಹತ್ವದ ಬದಲಾವಣೆ..!
ಕಳೆದ ಸೀಸನ್ನಲ್ಲಿ 14 ಪಂದ್ಯಗಳನ್ನಾಡಿದ್ದ ಎಸ್ಆರ್ಹೆಚ್ ತಂಡವು ಕೇವಲ 4 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಅಷ್ಟೇ ಅಲ್ಲದೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದೇ ಕಾರಣದಿಂದಾಗಿ ಇದೀಗ ಮುಖ್ಯ ಕೋಚ್ ಆಗಿದ್ದ ಬ್ರಿಯಾನ್ ಲಾರಾ ಅವರ ತಲೆದಂಡವಾಗಿದೆ. ಅಲ್ಲದೆ ಆರ್ಸಿಬಿ ತಂಡವನ್ನು ಫೈನಲ್ಗೆ ತಲುಪಿಸಿದ್ದ ನಾಯಕ/ಕೋಚ್ ಡೇನಿಯಲ್ ವೆಟ್ಟೋರಿಯನ್ನು ಹೊಸ ಹೆಡ್ ಕೋಚ್ ಆಗಿ ನೇಮಿಸಲಾಗಿದೆ.
Published On - 3:27 pm, Mon, 7 August 23