ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಶೀಘ್ರ ನಿವೃತ್ತಿ ಭೀತಿ: ಡ್ಯಾರೆನ್ ಸ್ಯಾಮಿ ಕಳವಳ
ರೋಹಿತ್ ಶರ್ಮಾ ಅವರ ಟೆಸ್ಟ್ ನಿವೃತ್ತಿಯೊಂದಿಗೆ ಶುರುವಾದ ವಿದಾಯದ ಪರ್ವ ಮುಂದುವರೆದಿದೆ. ಅತ್ತ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಮಾತ್ರ ನಿವೃತ್ತಿ ಘೋಷಿಸಿದರೆ, ಇತ್ತ ಹೆನ್ರಿಕ್ ಕ್ಲಾಸೆನ್ ಹಾಗೂ ನಿಕೋಲಸ್ ಪೂರನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.

ಮೇ ಮತ್ತು ಜೂನ್ ತಿಂಗಳ ನಡುವೆ 6 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇವರಲ್ಲಿ 29 ವರ್ಷದ ನಿಕೋಲಸ್ ಪೂರನ್ ಹಾಗೂ 33 ವರ್ಷದ ಹೆನ್ರಿಕ್ ಕ್ಲಾಸೆನ್ ಕೂಡ ಸೇರಿದ್ದಾರೆ. ಅತ್ಯುತ್ತಮ ಫಾರ್ಮ್ನಲ್ಲಿರುವ ಈ ಆಟಗಾರರು ದಿಢೀರ್ ನಿವೃತ್ತಿ ಘೋಷಿಸಿದ್ದು ಅಚ್ಚರಿಗೆ ಕಾರಣವಾಗಿತ್ತು. ಅದರಲ್ಲೂ ವೆಸ್ಟ್ ಇಂಡೀಸ್ ಟಿ20 ತಂಡದ ಖಾಯಂ ಸದಸ್ಯರಾಗಿದ್ದ ಪೂರನ್ ನಿವೃತ್ತಿ ಬಗ್ಗೆ ವಿಂಡೀಸ್ ತಂಡದ ಕೋಚ್ ಡ್ಯಾರೆನ್ ಸ್ಯಾಮಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಯಾಮಿ ಆಘಾತಕಾರಿ ಹೇಳಿಕೆ:
ಪೂರನ್ ವೆಸ್ಟ್ ಇಂಡೀಸ್ ಪರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್. ಆದರೆ ಅವರು ಎಂದಿಗೂ ಟೆಸ್ಟ್ ಕ್ರಿಕೆಟ್ ಆಡಿಲ್ಲ. ಇನ್ನು ಏಕದಿನ ಕ್ರಿಕೆಟ್ನಲ್ಲಿ ಕಾಣಿಸಿಕೊಂಡು ಎರಡು ವರ್ಷಗಳು ಕಳೆದಿವೆ. ಇದಾಗ್ಯೂ ಅವರು ಟಿ20 ತಂಡದ ಖಾಯಂ ಸದಸ್ಯರಾಗಿದ್ದರು. ಆದರೆ ಟಿ20 ವಿಶ್ವಕಪ್ ಆರಂಭಕ್ಕೆ ತಿಂಗಳುಗಳು ಮಾತ್ರ ಉಳಿದಿರುವಾಗ ಅವರು ನಿವೃತ್ತಿ ಘೋಷಿಸಿರುವುದು ಅಚ್ಚರಿ.
ಇದಕ್ಕೆ ಮುಖ್ಯ ಕಾರಣ ಫ್ರಾಂಚೈಸಿ ಕ್ರಿಕೆಟ್. ಫ್ರಾಂಚೈಸಿ ಲೀಗ್ ಮೂಲಕ ಅತಿ ಹೆಚ್ಚು ಆದಾಯ ಗಳಿಸುವ ಆಟಗಾರರಲ್ಲಿ ಪೂರನ್ ಕೂಡ ಒಬ್ಬರು. ಅಂತಹ ಪರಿಸ್ಥಿತಿಯಲ್ಲಿ, ಮುಂಬರುವ ದಿನಗಳಲ್ಲಿ, ಹೆಚ್ಚಿನ ಆಟಗಾರರು ಇದೇ ಮಾರ್ಗವನ್ನು ಅನುಸರಿಸಬಹುದು. ಅಂದರೆ ಚಿಕ್ಕ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ತೊರೆಯಬಹುದು ಎಂದು ಡ್ಯಾರೆನ್ ಸ್ಯಾಮಿ ಭವಿಷ್ಯ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಯಾಮಿ, ನಿಕೋಲಸ್ ಪೂರನ್ ಬೇಗನೆ ನಿವೃತ್ತಿ ಘೋಷಿಸಲಿದ್ದಾರೆ ಎಂಬುದು ನನಗೆ ಗೊತ್ತಿತ್ತು. ಅವರಂತಹ ಪ್ರತಿಭೆಯನ್ನು ತಂಡದಲ್ಲಿ ಇಟ್ಟುಕೊಳ್ಳುವುದು ನನ್ನ ಉದ್ದೇಶ. ಆದರೆ ನಾನು ಯಾರ ವೃತ್ತಿಜೀವನವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ನಾನು ಅವರಿಗೆ ಶುಭ ಹಾರೈಸಿದೆ, ಅವರು ತಂಡಕ್ಕೆ ಶುಭ ಹಾರೈಸಿದ್ದಾರೆ.
ಈಗ ನಿಕೋಲಸ್ ಪೂರನ್ ಇಲ್ಲದೆ ನಮ್ಮ ತಂಡದ ಕಾರ್ಯತಂತ್ರವನ್ನು ಮುಂದುವರೆಸಬೇಕಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ಕೂಡ ಬರುತ್ತಿದೆ. ಅವರಿಲ್ಲದೆ ನಮಗೆ ಯೋಜನೆ ರೂಪಿಸಲು ಹೆಚ್ಚಿನ ಸಮಯ ಸಿಗುವಂತೆ ಮಾಡಲು, ಅವರ ನಿರ್ಧಾರವನ್ನು ಮೊದಲೇ ತಿಳಿಸಿದ್ದಾರೆ. ಹೀಗಾಗಿ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಸ್ಯಾಮಿ ಹೇಳಿದ್ದಾರೆ.
ಶೀಘ್ರ ನಿವೃತ್ತಿ ಭೀತಿ:
ಟಿ20 ಕ್ರಿಕೆಟ್‌ನ ಹೆಚ್ಚುತ್ತಿರುವ ಪ್ರವೃತ್ತಿ ಮತ್ತು ಫ್ರಾಂಚೈಸಿ ಲೀಗ್‌ಗಳ ಆಕರ್ಷಣೆಯಿಂದಾಗಿ ಹೆಚ್ಚಿನ ಆಟಗಾರರು ಬೇಗನೆ ನಿವೃತ್ತರಾಗಬಹುದು ಎಂದು ಸ್ಯಾಮಿ ಭವಿಷ್ಯ ನುಡಿದಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸೌತ್ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಹಾಗೂ ಕ್ವಿಂಟನ್ ಡಿಕಾಕ್. ಈ ಪಟ್ಟಿಗೆ ಈಗ ನಿಕೋಲಸ್ ಪೂರನ್ ಕೂಡ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಗ್ಲೆನ್ ಮ್ಯಾಕ್ಸ್ವೆಲ್ಗೆ ಒಲಿದ ಚಾಂಪಿಯನ್ ತಂಡದ ನಾಯಕತ್ವ
ಈ ಹಿಂದೆ ಡಿಕಾಕ್ ನಿವೃತ್ತಿ ಘೋಷಿಸಿದಾಗ ಎಲ್ಲರೂ ಮಾತನಾಡಿಕೊಂಡಿದ್ದರು. ಆ ಬಳಿಕ ಕ್ಲಾಸೆನ್ ನಿವೃತ್ತಿ ಘೋಷಿಸಿದರು. ಇದೀಗ ಪೂರನ್ ಸಹ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆಟಗಾರರ ಇಂತಹ ನಿರ್ಧಾರಗಳು ನಮ್ಮ ನಿಯಂತ್ರಣಕ್ಕೆ ಮೀರಿದ್ದು. ಹೀಗಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಆಟಗಾರರು ಶೀಘ್ರ ನಿವೃತ್ತಿ ಘೋಷಿಸಿದರೂ ಅಚ್ಚರಿಪಡಬೇಕಿಲ್ಲ ಎಂದು ಡ್ಯಾರೆನ್ ಸ್ಯಾಮಿ ಹೇಳಿದ್ದಾರೆ.
