ತಿರುವನಂತಪುರದ ಗ್ರೀನ್ಫೀಲ್ಡ್ ಮೈದಾನದಲ್ಲಿ ನಡೆದ ಭಾರತ-ಸೌತ್ ಆಫ್ರಿಕಾ (India vs South Africa 1st T20) ನಡುವಣ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ರೂವಾರಿಗಳೆಂದರೆ ಟೀಮ್ ಇಂಡಿಯಾ ಬೌಲರ್ಗಳು. ಏಕೆಂದರೆ ಕೇವಲ 9 ರನ್ಗಳಿಗೆ ಸೌತ್ ಆಫ್ರಿಕಾ ತಂಡದ ಟಾಪ್ 5 ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಕಳುಹಿಸುವ ಮೂಲಕ ಭರ್ಜರಿ ಆರಂಭ ಒದಗಿಸಿದ್ದರು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ್ದ ಟೀಮ್ ಇಂಡಿಯಾಗೆ ಮೊದಲ ಓವರ್ನಲ್ಲೇ ದೀಪಕ್ ಚಹರ್ ನಾಯಕ ತೆಂಬಾ ಬವುಮಾರ ವಿಕೆಟ್ ಪಡೆದು ಪ್ರಥಮ ಯಶಸ್ಸು ತಂದುಕೊಟ್ಟಿದ್ದರು. ಇನ್ನು ಅರ್ಷದೀಪ್ ಸಿಂಗ್ ಎಸೆದ 2ನೇ ಓವರ್ನಲ್ಲಿ ಕ್ವಿಂಟನ್ ಡಿಕಾಕ್ ಕೂಡ ಬೌಲ್ಡ್ ಆದರು. ಆ ಬಳಿಕ ಬಂದ ರಿಲೀ ರೊಸ್ಸೊ ಅವರನ್ನು ಮೊದಲ ಎಸೆತದಲ್ಲೇ ಅರ್ಷದೀಪ್ ಸಿಂಗ್ ಪೆವಿಲಿಯನ್ಗೆ ಕಳುಹಿಸಿದರು.
ಅಲ್ಲದೆ ಮರುಎಸೆತದಲ್ಲೇ ಟಿ20 ಕ್ರಿಕೆಟ್ನ ಕಿಲ್ಲರ್ ಬ್ಯಾಟ್ಸ್ಮನ್ ಎಂದೇ ಗುರುತಿಸಿಕೊಂಡಿರುವ ಡೇವಿಡ್ ಮಿಲ್ಲರ್ ರನ್ನು ಇನ್ ಸ್ವಿಂಗ್ ಎಸೆತದ ಮೂಲಕ ಅರ್ಷದೀಪ್ ಸಿಂಗ್ ಕ್ಲೀನ್ ಬೌಲ್ಡ್ ಮಾಡಿದರು. ವಿಶೇಷ ಎಂದರೆ ಈ ಒಂದು ವಿಕೆಟ್ ಇದೀಗ ದೀರ್ಘಾವಧಿಯ ದಾಖಲೆಗೆ ಬ್ರೇಕ್ ಹಾಕಿದೆ.
ಅಂದರೆ ಡೇವಿಡ್ ಮಿಲ್ಲರ್ ಇದಕ್ಕೂ ಮುನ್ನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 90 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಒಮ್ಮೆಯೂ ಶೂನ್ಯಕ್ಕೆ ಔಟಾಗಿರಲಿಲ್ಲ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ನಲ್ಲಿ ಡಕ್ ಔಟ್ ಆಗದೇ ಹೊಸ ಇತಿಹಾಸವನ್ನು ಮಿಲ್ಲರ್ ನಿರ್ಮಿಸಿದ್ದರು. ಆದರೆ ಈ ಇತಿಹಾಸವನ್ನು ಕೇವಲ ಒಂದು ಎಸೆತದ ಮೂಲಕ ಅರ್ಷದೀಪ್ ಸಿಂಗ್ ಅಳಿಸಿಹಾಕಿದ್ದಾರೆ.
91ನೇ ಇನಿಂಗ್ಸ್ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಡೇವಿಡ್ ಮಿಲ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಅರ್ಷದೀಪ್ ಸಿಂಗ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಕಿಲ್ಲರ್ ಮಿಲ್ಲರ್ರನ್ನು ಶೂನ್ಯಕ್ಕೆ ಔಟ್ ಮಾಡಿದ ಮೊದಲ ಬೌಲರ್ ಎಂಬ ಹೊಸ ಇತಿಹಾಸ ನಿರ್ಮಿಸಿದ್ದಾರೆ ಟೀಮ್ ಇಂಡಿಯಾದ ಯುವ ಎಡಗೈ ವೇಗಿ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 106 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ 4 ಓವರ್ಗಳಲ್ಲಿ 32 ರನ್ ನೀಡಿ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರೆ, ದೀಪಕ್ ಚಹರ್ 4 ಓವರ್ನಲ್ಲಿ 24 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು.
ಅದರಂತೆ 107 ರನ್ಗಳ ಸಾಧಾರಣ ಗುರಿ ಪಡೆದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಪರಿಣಾಮ ಕೇವಲ 16.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 110 ರನ್ಗಳಿಸಿ 8 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.