ದುರ್ಗಾ ಪೂಜೆಗೆ ಶುಭಕೋರಿದ ಬಾಂಗ್ಲಾ ಕ್ರಿಕೆಟಿಗನಿಗೆ ಮತಾಂತರವಾಗುವಂತೆ ಬೆದರಿಕೆ..!
Litton Das: ಬಾಂಗ್ಲಾದೇಶ್ ಪರ 35 ಟೆಸ್ಟ್, 57 ಏಕದಿನ ಹಾಗೂ 56 ಟಿ20 ಪಂದ್ಯಗಳನ್ನಾಡಿರುವ ಲಿಟನ್ ದಾಸ್ ಒಟ್ಟು 5066 ರನ್ ಕಲೆಹಾಕಿದ್ದಾರೆ.
ಬಾಂಗ್ಲಾದೇಶ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಲಿಟನ್ ಕುಮಾರ್ ದಾಸ್ (Litton das) ಇದೀಗ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಹಾಲಯದ ಶುಭ ಸಂದರ್ಭದಲ್ಲಿ ಲಿಟನ್ ದಾಸ್ ತಮ್ಮ ಅಭಿಮಾನಿಗಳಿಗೆ ಫೇಸ್‌ಬುಕ್‌ನಲ್ಲಿ ಶುಭಾಶಯಗಳನ್ನು ಕೋರಿದ್ದರು. ಇದನ್ನು ಸಹಿಸದ ಮೂಲಭೂತವಾದಿಗಳು ಇದೀಗ ಬಾಂಗ್ಲಾ ಕ್ರಿಕೆಟಿಗನ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಧರ್ಮನಿಂದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ, ಮಹಾಲಯವನ್ನು ದುರ್ಗಾ ಪೂಜೆಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದರಂತೆ ಹಿಂದೂ ಧರ್ಮೀರಾಗಿರುವ ಲಿಟನ್ ದಾಸ್ ಸೋಷಿಯಲ್ ಮೀಡಿಯಾದಲ್ಲಿ ದುರ್ಗಾಪೂಜೆಗೆ ಶುಭಾಶಯ ತಿಳಿಸಿದ್ದರು. ಇದರ ಬೆನ್ನಲ್ಲೇ ಕ್ರಿಕೆಟಿಗನಿಗೆ ಮೂಲಭೂತವಾದಿಗಳಿಂದ ಬೆದರಿಕೆಗಳು ಬರಲಾರಂಭಿಸಿದೆ.
ಅಷ್ಟೇ ಅಲ್ಲದೆ ಕೆಲವರು ವಿಗ್ರಹ ಪೂಜೆಯನ್ನು ಖಂಡಿಸಿ, ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ. ಇನ್ನೂ ಕೆಲವರು ಲಿಟನ್ ದಾಸ್ ಅವರಿಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಲಿಟನ್ ದಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಪರ ವಿರೋಧ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಈ ನಿಂದನೆ, ಅವಹೇಳನದ ನಡುವೆಯೂ ಲಿಟನ್ ದಾಸ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅಲ್ಲದೆ ಬಾಂಗ್ಲಾ ಕ್ರಿಕೆಟಿಗನಿಗೆ ಅಭಿಮಾನಿಗಳಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿರುವುದು ಕೂಡ ಇದೀಗ ಮೂಲಭೂತವಾದಿಗಳ ಚಿಂತೆಯನ್ನು ಹೆಚ್ಚಿಸಿದೆ.
ಬಾಂಗ್ಲಾದೇಶ್ ಪರ 35 ಟೆಸ್ಟ್, 57 ಏಕದಿನ ಹಾಗೂ 56 ಟಿ20 ಪಂದ್ಯಗಳನ್ನಾಡಿರುವ ಲಿಟನ್ ದಾಸ್ ಒಟ್ಟು 5066 ರನ್ ಕಲೆಹಾಕಿದ್ದಾರೆ. ಅಲ್ಲದೆ ಮುಂಬರುವ ಟಿ20 ವಿಶ್ವಕಪ್ಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಲಿಟನ್ ದಾಸ್ ಆಯ್ಕೆಯಾಗಿದ್ದಾರೆ.