David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

| Updated By: ಝಾಹಿರ್ ಯೂಸುಫ್

Updated on: Oct 04, 2021 | 3:47 PM

IPL 2021: ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್ ಅವರನ್ನು ಟೂರ್ನಿಯ ಮೊದಲಾರ್ಧದ ವೇಳೆ ಹೈದರಾಬಾದ್ ಫ್ರಾಂಚೈಸಿ ನಾಯಕತ್ವದಿಂದ ಕೆಳಗಿಳಿಸಿತ್ತು.

David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್
David Warner
Follow us on

ದುಬೈನಲ್ಲಿ ಭಾನುವಾರ ನಡೆದ ಐಪಿಎಲ್​ನ (IPL 2021) 49ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಮಾಡು ಇಲ್ಲವೇ ಮಡಿ ಎಂಬಂತಿದ್ದ ಈ ಪಂದ್ಯದಲ್ಲಿ ಕೆಕೆಆರ್​ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಇನ್ನು ಪಂದ್ಯದ ವೇಳೆ ಎಸ್​ಆರ್​ಹೆಚ್ (SRH)​ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ (David Warner) ಕಾಣಿಸಿಕೊಂಡಿದ್ದು ವಿಶೇಷ. ಏಕೆಂದರೆ ಕಳೆದೆರಡು ಪಂದ್ಯಗಳ ವೇಳೆ ಎಸ್​ಆರ್​ಹೆಚ್​ ಡಗೌಟ್​ನಲ್ಲಿ ವಾರ್ನರ್ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ವಾರ್ನರ್ ಅವರನ್ನು ಇಡೀ ಟೂರ್ನಿಯಿಂದಲೇ ಕೈಬಿಡಲಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದರ ಬೆನ್ನಲ್ಲೇ ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ ವಿರುದ್ದ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಕೆಕೆಆರ್ ವಿರುದ್ದದ ಪಂದ್ಯದ ವೇಳೆ ಮತ್ತೊಮ್ಮೆ ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿತ್ತು. ಇದಾಗ್ಯೂ ವಾರ್ನರ್ ಡಗೌಟ್​ನಲ್ಲಿ ಕೂತಿರಲಿಲ್ಲ. ಬದಲಾಗಿ ಅಭಿಮಾನಿಗಳ ಮಧ್ಯೆ ಕುಳಿತು ತಂಡಕ್ಕೆ ಬೆಂಬಲ ನೀಡಿದ್ದರು. ಎಸ್​ಆರ್​ಹೆಚ್​ ಜೆರ್ಸಿಯೊಂದಿಗೆ ಕಾಣಿಸಿಕೊಂಡಿದ್ದ ವಾರ್ನರ್​ ಸ್ಟೇಡಿಯಂನಲ್ಲಿ ಕೂತು ತಂಡ ಬಾವುಟವನ್ನು ಹಿಡಿದು ಹುರಿದುಂಬಿಸುತ್ತಿರುವುದು ಕಂಡು ಬಂತು. ಡೇವಿಡ್ ವಾರ್ನರ್ ಅವರ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಬಾರಿಯ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್ ಅವರನ್ನು ಟೂರ್ನಿಯ ಮೊದಲಾರ್ಧದ ವೇಳೆ ಹೈದರಾಬಾದ್ ಫ್ರಾಂಚೈಸಿ ನಾಯಕತ್ವದಿಂದ ಕೆಳಗಿಳಿಸಿತ್ತು. ಆ ಬಳಿಕ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್​ಗೆ ನಾಯಕತ್ವ ನೀಡಲಾಗಿತ್ತು. ಇದಾಗ್ಯೂ ದ್ವಿತಿಯಾರ್ಧದಲ್ಲಿ ಕಾಣಿಸಿಕೊಂಡ ವಾರ್ನರ್ ಮೊದಲೆರಡು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಅವರನ್ನು ಆಡುವ ಬಳಗದಿಂದ ಕೈಬಿಟ್ಟು ಅವರ ಬದಲಿಗೆ ಜೇಸನ್ ರಾಯ್​ಗೆ ಅವಕಾಶ ನೀಡಲಾಗಿತ್ತು. ಈ ಬದಲಾವಣೆಗಳ ಹೊರತಾಗಿಯೂ ಸನ್​ರೈಸರ್ಸ್​ ಹೈದರಾಬಾದ್ ತಂಡದ ಫಲಿತಾಂಶದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗಿಲ್ಲ. ಆಡಿರುವ 12 ಪಂದ್ಯಗಳಲ್ಲಿ 10 ರಲ್ಲಿ ಸೋತು ಸನ್​ರೈಸರ್ಸ್​ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Happy Birthday Rishabh Pant: ರಿಷಭ್ ಪಂತ್​ಗೆ ಹುಟ್ಟುಹಬ್ಬದ ಸಂಭ್ರಮ: ಯಂಗ್ ವಿಕೆಟ್ ಕೀಪರ್​ನ ಮೂರು ಅಮೋಘ ದಾಖಲೆ ಇಲ್ಲಿದೆ

Yuzvendra Chahal: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಯುಜ್ವೇಂದ್ರ ಚಹಾಲ್: ಟಿ-20 ವಿಶ್ವಕಪ್​ಗೆ ಆಯ್ಕೆ ಪಕ್ಕಾ

 

(David Warner Waves SRH Flag From The Stands)

Published On - 2:52 pm, Mon, 4 October 21