AUS Vs ENG: ಕಾಂಗರೂಗಳ ವಿರುದ್ಧ ಮಲಾನ್ ಅಬ್ಬರ; 11 ವರ್ಷಗಳ ನಂತರ ಅಡಿಲೇಡ್‌ನಲ್ಲಿ ದಾಖಲೆ ಸೃಷ್ಟಿ

| Updated By: ಪೃಥ್ವಿಶಂಕರ

Updated on: Nov 17, 2022 | 12:59 PM

AUS Vs ENG: ಡೇವಿಡ್ ಮಲಾನ್ ಅವರ ಈ ಶತಕ ತುಂಬಾ ವಿಶೇಷ ಏಕೆಂದರೆ 11 ವರ್ಷಗಳ ನಂತರ ಆಂಗ್ಲ ಆಟಗಾರನೊಬ್ಬ ಅಡಿಲೇಡ್‌ನಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

AUS Vs ENG: ಕಾಂಗರೂಗಳ ವಿರುದ್ಧ ಮಲಾನ್ ಅಬ್ಬರ; 11 ವರ್ಷಗಳ ನಂತರ ಅಡಿಲೇಡ್‌ನಲ್ಲಿ ದಾಖಲೆ ಸೃಷ್ಟಿ
ಡೇವಿಡ್ ಮಲಾನ್
Follow us on

2022 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಅತ್ಯಂತ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದ ಡೇವಿಡ್ ಮಲಾನ್ (dawid malan), ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ಅಡಿಲೇಡ್ ಓವಲ್‌ನಲ್ಲಿ (Adelaide Oval) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದ್ದಾರೆ. ಜೇಸನ್ ರಾಯ್, ಜೋಸ್ ಬಟ್ಲರ್, ಸ್ಯಾಮ್ ಬಿಲ್ಲಿಂಗ್ಸ್​ರಂತಹ ಬ್ಯಾಟ್ಸ್​ಮನ್​ಗಳ ವೈಫಲ್ಯದ ನಡುವೆಯೂ ಮಲಾನ್ ಶತಕ ಬಾರಿಸಿ ಮಿಂಚಿದ್ದಾರೆ. ಮಲಾನ್ ತಮ್ಮ ಅಬ್ಬರದ ಶತಕದ ಆಧಾರದ ಮೇಲೆ ಆಂಗ್ಲ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ ತಮ್ಮ ಅತ್ಯುತ್ತಮ ಇನ್ನಿಂಗ್ಸ್ ಮೂಲಕ ಅದ್ಭುತ ದಾಖಲೆಯೊಂದನ್ನು ಬರೆದಿದ್ದಾರೆ.

ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದ ಡೇವಿಡ್ ಮಲಾನ್ 107 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ ಎರಡನೇ ಶತಕವಾಗಿದೆ. ಒಂದು ಸಮಯದಲ್ಲಿ ಇಂಗ್ಲೆಂಡ್ ಕೇವಲ 61 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಕ್ರೀಸ್​ನಲ್ಲಿ ಭದ್ರವಾಗಿ ನೆಲೆಯೂರಿದ ಮಲಾನ್ ಸಂಯಮದಿಂದ ಬ್ಯಾಟಿಂಗ್ ಮಾಡಿ 64 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಮಲಾನ್ ಮುಂದಿನ 33 ಎಸೆತಗಳಲ್ಲಿ ಶತಕ ಪೂರೈಸಿದರು. ಏಕದಿನ ಮಾದರಿಯ 10 ಇನ್ನಿಂಗ್ಸ್‌ಗಳಲ್ಲಿ ಇದು ಮಲಾನ್ ಅವರ ಎರಡನೇ ಏಕದಿನ ಶತಕವಾಗಿದೆ.

ಮಲಾನ್ ಶತಕ ಏಕೆ ವಿಶೇಷ?

ಡೇವಿಡ್ ಮಲಾನ್ ಅವರ ಈ ಶತಕ ತುಂಬಾ ವಿಶೇಷ ಏಕೆಂದರೆ 11 ವರ್ಷಗಳ ನಂತರ ಆಂಗ್ಲ ಆಟಗಾರನೊಬ್ಬ ಅಡಿಲೇಡ್‌ನಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಡೇವಿಡ್ ಮಲಾನ್ ಅಡಿಲೇಡ್‌ನಲ್ಲಿ ಏಕದಿನ ಶತಕ ಗಳಿಸಿದ ನಾಲ್ಕನೇ ಇಂಗ್ಲಿಷ್ ಬ್ಯಾಟ್ಸ್‌ಮನ್. ಅವರಿಗಿಂತ ಮೊದಲು 1983ರಲ್ಲಿ ಡೇವಿಡ್ ಗೋವರ್ ಈ ಸಾಧನೆ ಮಾಡಿದ್ದರು. ಇದರ ನಂತರ, 1999 ರಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ಗ್ರೇಮ್ ಹಿಕ್ ಶತಕ ಬಾರಿಸಿ ಮಿಂಚಿದ್ದರು. 2011ರಲ್ಲಿ ಜೊನಾಥನ್ ಟ್ರಾಟ್ ಅಡಿಲೇಡ್‌ನಲ್ಲಿ ಶತಕ ಬಾರಿಸಿದ್ದು, ಇದೀಗ ಮಲಾನ್ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: IND vs NZ: ಡಿಡಿ ಸ್ಪೋರ್ಟ್ಸ್​ನಲ್ಲಿ ಭಾರತ- ಕಿವೀಸ್ ಟಿ20, ಏಕದಿನ ಸರಣಿಯ ನೇರ ಪ್ರಸಾರ

ಇಂಗ್ಲೆಂಡ್‌ನ ಅಗ್ರ ಕ್ರಮಾಂಕ ವಿಫಲ

ಆಸ್ಟ್ರೇಲಿಯಾ ಅಡಿಲೇಡ್‌ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು ಮತ್ತು ತಂಡದ ಈ ನಿರ್ಧಾರ ಸರಿಯಾಗಿದೆ ಎಂದು ಸಾಬೀತಾಯಿತು. ಇಂಗ್ಲೆಂಡಿನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸ್ಟಾರ್ಕ್ ಮತ್ತು ಕಮ್ಮಿನ್ಸ್‌ರ ಮುಂದೆ ತೊಂದರೆಗೀಡಾದರು. ಫಿಲ್ ಸಾಲ್ಟ್ 14, ರಾಯ್ 6 ರನ್ ಗಳಿಸಿ ಔಟಾದರು. ವಿನ್ಸ್ ಕೂಡ 5 ರನ್ ಗಳಿಸಲಷ್ಟೇ ಶಕ್ತರಾದರು. ಅದೇ ವೇಳೆಗೆ ಸ್ಯಾಮ್ ಬಿಲ್ಲಿಂಗ್ಸ್ 17 ರನ್​ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಆದರೆ ಅಂತಿಮವಾಗಿ ನಿಗಧಿತ 50 ಓವರ್​ಗಳ ಆಟ ಮುಗಿಯುವ ವೇಳೆಗೆ ಇಂಗ್ಲೆಂಡ್ ತಂಡ ಮಲಾನ್ ಅವರ ಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 288 ರನ್ ಕಲೆ ಹಾಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Thu, 17 November 22