KL Rahul: ಭರ್ಜರಿ ಬ್ಯಾಟಿಂಗ್ ಮೂಲಕ ವಿಶೇಷ ಸಾಧನೆ ಮಾಡಿದ ಕೆಎಲ್ ರಾಹುಲ್
DC vs LSG: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 195 ರನ್ ಗಳಿಸಿದೆ.

IPL 2022: ಐಪಿಎಲ್ 2022 ರಲ್ಲಿ ಕೆಎಲ್ ರಾಹುಲ್ ಅವರ ಅದ್ಭುತ ಪ್ರದರ್ಶನ ಮುಂದುವರೆದಿದೆ. ಭಾನುವಾರ ನಡೆದ (DC vs LSG) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಕೆಎಲ್ ರಾಹುಲ್ ಅರ್ಧಶತಕ ಗಳಿಸಿದರು. ಈ ಸೀಸನ್ನಲ್ಲಿ ಇದು ಅವರ ಎರಡನೇ ಅರ್ಧಶತಕವಾಗಿದೆ. ಅಲ್ಲದೆ ಇದಕ್ಕೂ ಮುನ್ನ 2 ಶತಕಗಳನ್ನೂ ಕೂಡ ಬಾರಿಸಿದ್ದಾರೆ. ಇದರೊಂದಿಗೆ ಪ್ರಸಕ್ತ ಸೀಸನ್ನಲ್ಲಿ ಕೆಎಲ್ ರಾಹುಲ್ 400 ರನ್ ಪೂರ್ಣಗೊಳಿಸಿದ್ದಾರೆ. ಕಳೆದ ಐದು ಸೀಸನ್ ಐಪಿಎಲ್ನಲ್ಲೂ ರಾಹುಲ್ 400 ಕ್ಕೂ ಅಧಿಕ ರನ್ ಗಳಿಸಿರುವುದು ವಿಶೇಷ.
ಕೆಎಲ್ ರಾಹುಲ್ 2018 ರಿಂದ ಐಪಿಎಲ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೇವಲ 5 ಸೀಸನ್‌ಗಳಲ್ಲಿ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2021 ರಲ್ಲಿ ಪಂಜಾಬ್ ಕಿಂಗ್ಸ್ ನಾಯಕರಾಗಿದ್ದ ರಾಹುಲ್ 13 ಪಂದ್ಯಗಳಲ್ಲಿ 63ರ ಸರಾಸರಿಯಲ್ಲಿ 626 ರನ್ ಗಳಿಸಿದ್ದರು. ಅಲ್ಲದೆ 6 ಅರ್ಧಶತಕಗಳನ್ನು ಬಾರಿಸಿದ್ದರು. ಇದಾಗ್ಯೂ ತಂಡವು ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿಯೇ ಕೆಎಲ್ ರಾಹುಲ್ ಈ ಬಾರಿ ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಂದಿದ್ದರು. ಇದೀಗ ಹೊಸ ತಂಡದ ನಾಯಕರಾಗಿ ಕೆಎಲ್ ರಾಹುಲ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 400+ ರನ್ಗಳಿಸುವ ಮೂಲಕ ಈ ಸೀಸನ್ನಲ್ಲಿ ಈ ಸಾಧನೆ ಮಾಡಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಈಗಾಗಲೇ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ 566 ರನ್ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿಶೇಷ ಎಂದರೆ ಕೆಎಲ್ ರಾಹುಲ್ 400+ ರನ್ಗಳಿಸುತ್ತಿರುವುದು ಇದು ಐದನೇ ಬಾರಿ.
2018ರಲ್ಲಿ ಕೆಎಲ್ಆರ್ 6 ಅರ್ಧಶತಕಗಳೊಂದಿಗೆ 659 ರನ್ ಗಳಿಸಿದ್ದರು. ಹಾಗೆಯೇ 2019 ರಲ್ಲಿ 593 ರನ್ ಬಾರಿಸಿ ಮಿಂಚಿದ್ದರು. ಈ ವೇಳೆ ಒಂದು ಶತಕ ಮತ್ತು 6 ಅರ್ಧ ಶತಕಗಳನ್ನು ಬಾರಿಸಿದ್ದರು. ಇನ್ನು ಐಪಿಎಲ್ 2020 ರಲ್ಲಿ 670 ರನ್ ಗಳಿಸಿದ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಈ ವೇಳೆ ಒಂದು ಶತಕ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದರು. ಇನ್ನು ಕಳೆದ ಸೀಸನ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ರಾಹುಲ್ 626 ರನ್ ಬಾರಿಸಿ ಮಿಂಚಿದ್ದರು. ಇದೀಗ 10 ಪಂದ್ಯಗಳಿಂದ 451 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ನ 5 ಸೀಸನ್‌ಗಳಲ್ಲಿ ಬ್ಯಾಕ್ ಟು ಬ್ಯಾಕ್ 400+ ರನ್ಗಳಿಸಿ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 195 ರನ್ ಗಳಿಸಿತು. ಕೆಎಲ್ ರಾಹುಲ್ ಹೊರತಾಗಿ ದೀಪಕ್ ಹೂಡಾ ಕೂಡ 52 ರನ್ ಗಳ ಉತ್ತಮ ಇನ್ನಿಂಗ್ಸ್ ಆಡಿದರು. ರಾಹುಲ್ 51 ಎಸೆತಗಳಲ್ಲಿ 77 ರನ್ ಗಳಿಸಿ ಔಟಾದರು. ಈ ವೇಳೆಯೊಳಗೆ 4 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿ ಮಿಂಚಿದ್ದರು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




