2021ರ ಐಸಿಸಿ ಟಿ20 ವಿಶ್ವಕಪ್ ಬಳಿಕ ಇದೀಗ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ನಡುವಣ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. ಇದೇ ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏಷ್ಯಾಕಪ್ನ (Asia Cup 2022) ದ್ವಿತೀಯ ಪಂದ್ಯ ನಡೆಯಲಿದ್ದು ಇದರಲ್ಲಿ ವಿಶ್ವವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಇಂಡೋ–ಪಾಕ್ ನಡುವೆ ಕದನ ಆಯೋಜಿಸಲಾಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ, ರಿಷಭ್ ಪಂತ್ (Rishabh Pant), ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಹೀಗೆ ಅಭ್ಯಾಸ ನಡೆಸುತ್ತಿರುವಾಗ ಪಂತ್ ಹಾಗೂ ದೀಪಕ್ ಚಹರ್ (Deepak Chahar) ನಡುವೆ ಜಗಳವಾದ ಘಟನೆ ನಡೆದಿದೆ.
ಒಂದು ಕಡೆ ಕೊಹ್ಲಿ–ರೋಹಿತ್ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದರೆ ಇತ್ತ ರಿಷಭ್ ಪಂತ್ ಕೂಡ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ಇವರಿಗೆ ದೀಪಕ್ ಚಹರ್ ಬೌಲಿಂಗ್ ಮಾಡುತ್ತಿದ್ದರು. ರಾಹುಲ್ ದ್ರಾವಿಡ್ ಅಲಭ್ಯತೆಯಲ್ಲಿ ಕೋಚ್ ಸ್ಥಾನ ಅಲಂಕರಿಸಿರುವ ವಿವಿಎಸ್ ಲಕ್ಷ್ಮಣ್ ಅಂಪೈರ್ ಆಗಿದ್ದರು. ಪ್ರ್ಯಾಕ್ಟೀಸ್ ಸೆಷನ್ ಮುಗಿಯಲು ಕೊನೆಯ ಎಸೆತ ಇರುವಾಗ ಚಹರ್ ಬೌಲಿಂಗ್ನಲ್ಲಿ ಪಂತ್ ಒಂದೇ ಕೈಯಲ್ಲಿ ಬ್ಯಾಟ್ ಹಿಡಿದು ಜೋರಾಗಿ ಬೀಸಿದರು.
ಪಂತ್ ಹೊಡೆದ ರಭಸಕ್ಕೆ ಚೆಂಡು ಗಾಳಿಯಲ್ಲಿ ತೇಲಿ ದೂರ ಹೋಗಿಬಿತ್ತು. ಇತ್ತ ಲಕ್ಷ್ಮಣ್ ಇದನ್ನು ಸಿಕ್ಸ್ ಎಂದು ಎರಡೂ ಕೈ ಮೇಲೆ ಮಾಡಿದರು. ಆದರೆ, ಇದರಿಂದ ಅಸಮಾಧಾನಗೊಂಡ ಚಹರ್ ಇದು ಸಿಕ್ಸ್ ಅಲ್ಲ ಎಂದು ವಾದಕ್ಕಿಳಿದಿದ್ದಾರೆ. ಪಂತ್ ಜೊತೆ ವಾದ ಮಾಡುತ್ತಾ ದೀಪಕ್ ತಮಾಷೆಯಾಗಿ ಜಗಳವಾಡಿದ ರೀತಿ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
ಕೊಹ್ಲಿ ಭರ್ಜರಿ ಅಭ್ಯಾಸ:
ಇನ್ನು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡು ಇದೀಗ ಏಷ್ಯಾಕಪ್ನಲ್ಲಿ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ ಕೂಡ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಟ್ರೈನಿಂಗ್ ಸೆಷನ್ನಲ್ಲಿ ಕೊಹ್ಲಿಯ ಹೊಡೆತವನ್ನು ಕಂಡು ಅಭಿಮಾನಿಗಳಂತು ಶಾಕ್ ಆಗಿದ್ದಾರೆ. ಯುಜ್ವೇಂದ್ರ ಚಹಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ಗೆ ಮುಂದೆ ಬಂದು ಭರ್ಜರಿ ಶಾಟ್ ಹೊಡೆದಿದ್ದು ಚೆಂಡು ಬೌಂಡರಿ ಗೆರೆ ದಾಟಿದೆ. ಇದರ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಸಖತ್ ವೈರಲ್ ಕೂಡ ಆಗುತ್ತಿದೆ.
ಏಷ್ಯಾಕಪ್ 2022ಕ್ಕೆ ನಾಳೆ (ಆ.27) ಚಾಲನೆ ಸಿಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿ ಆಗಲಿದೆ. ಭಾರತ ಆ. 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ಆಗಸ್ಟ್ 31 ರಂದು ಹಾಂಗ್ಕಾಂಗ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈ ಟೂರ್ನಿಯ ಎಲ್ಲ ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:30ಕ್ಕೆ ಶುರುವಾಗಲಿದೆ.