ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಹೈವೋಲ್ಟೇಜ್ ಕದನ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30 ಪಂದ್ಯ ಆರಂಭವಾಗಲಿದೆ. ಸೆಮಿ ಫೈನಲ್ಗೆ ಪ್ರವೇಶ ಪಡೆಯುವ ದೃಷ್ಟಿಯಿಂದ ಉಭಯ ತಂಡಗಳಿಗೆ ಈ ಮ್ಯಾಚ್ ಮಹತ್ವದ್ದಾಗಿದ್ದು, ಪರ್ತ್ ಸ್ಟೇಡಿಯಂನಲ್ಲಿ (Perth Stadium) ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಅಗ್ರಸ್ಥಾನವನ್ನು ಭದ್ರ ಪಡಿಸಲಿದೆ, ಅದೇರೀತಿ ಆಫ್ರಿಕಾ ಗೆದ್ದರೆ ಮೊದಲ ಸ್ಥಾನಕ್ಕೇರಲಿದ್ದು ಭಾರತ ಪಾಯಿಂಟ್ ಟೇಬಲ್ನಲ್ಲಿ ಕುಸಿಯಲಿದೆ. ಹೀಗೆ ಅನೇಕ ಕಾರಣಗಳಿಗೆ ಇಂದಿನ ಮ್ಯಾಚ್ ಸಾಕಷ್ಟು ಮಹತ್ವದ ಪಡೆದುಕೊಂಡಿದೆ. ಆದರೆ, ಇದಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ (Team India) ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬ್ಯಾಟರ್ ಇಂಜುರಿಗೆ ತುತ್ತಾಗಿದ್ದಾರೆ.
ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ಪರ್ತ್ ಸ್ಟೇಡಿಯಂನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಈ ಸಂದರ್ಭ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಕ್ಯಾಚಿಂಗ್ ಅಭ್ಯಾಸ ನಡೆಸುತ್ತಿರುವಾಗ ಗಾಯಕ್ಕೆ ತುತ್ತಾಗಿದ್ದಾರೆ. ಡೈವ್ ಬಿದ್ದು ಕ್ಯಾಚ್ ಹಿಡಿಯುವಾಗ ಕೈಗೆ ಗಾಯವಾಗಿದ್ದು ನೋವಿನಿಂದ ಮೈದಾನದಲ್ಲೇ ಕೂತಿರುವ ಕಾರ್ತಿಕ್ ವಿಡಿಯೋ ಹರಿದಾಡುತ್ತಿದೆ. ಎಕ್ಸ್ಪ್ರೆಸ್ ಸ್ಪೋರ್ಟ್ಸ್ ಈ ಬಗ್ಗೆ ಟ್ವೀಟ್ ಮಾಡಿ ವಿಡಿಯೋ ಹಂಚಿಕೊಂಡಿದೆ. ಕಾರ್ತಿಕ್ಗೆ ದೊಡ್ಡ ಪ್ರಮಾಣದಲ್ಲಿ ಗಾಯವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ, ವಿಶ್ರಾಂತಿಯ ಅಗತ್ಯವಿದೆಯೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಡಿಕೆ ಪ್ಲೇಯಿಂಗ್ XI ನಿಂದ ಹೊರಬಿದ್ದರೆ ರಿಷಭ್ ಪಂತ್ಗೆ ಅವಕಾಶ ಸಿಗಲಿದೆ.
Dinesh Karthik in pain after taking a diving catch during practice session. Don’t worry, nothing serious here. Karthik was soon back taking few more catches in the session.
?: @pdevendra pic.twitter.com/jInPeP6JlS
— Express Sports (@IExpressSports) October 29, 2022
ಭಾರತ ಪ್ಲೇಯಿಂಗ್ XI ಹೇಗಿರಲಿದೆ?:
ಸತತ ಎರಡು ಗೆಲುವಿನ ಬಳಿಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಬದಲಾವಣೆ ಮಾಡುವ ಸಂಭವ ಅಧಿಕವಿದೆ. ಓಪನರ್ಗಳಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಆಡುವುದು ಖಚಿತ. ಕೊಹ್ಲಿ ಒನ್-ಡೌನ್ ಆಗಿ ಕಣಕ್ಕಿಳಿದರೆ ನಂತರ ಸ್ಥಾನದಲ್ಲಿ ಸೂರ್ಯಕುಮಾರ್ ಬ್ಯಾಟ್ ಬೀಸಲಿದ್ದಾರೆ. ಹಾರ್ದಿಕ್ ಐದನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಕಾರ್ತಿಕ್ ಅಥವಾ ಪಂತ್ ಪೈಕಿ ಒಬ್ಬರು ಕೀಪಿಂಗ್ ಜವಾಬ್ದಾರಿ ವಹಿಸಲಿದ್ದಾರೆ.
ಆಲ್ರೌಂಡರ್ ಆಗಿರುವ ಅಕ್ಷರ್ ಪಟೇಲ್ ಬ್ಯಾಟಿಂಗ್ನಲ್ಲಿ ಮಾತ್ರ ಸದ್ದು ಮಾಡುತ್ತಿಲ್ಲ. ಬೌಲಿಂಗ್ನಲ್ಲಿ ಪಾಕ್ ವಿರುದ್ಧ ದುಬಾರಿ ಆಗಿದ್ದರು. ಹೀಗಾಗಿ ಇವರ ಬದಲು ಮತ್ತೊಬ್ಬ ಆಲ್ರೌಂಡರ್ ದೀಪಕ್ ಹೂಡಾಗೆ ಅವಕಾಶ ಸಿಗಬಹುದು. ಜೊತೆಗೆ ರವಿಚಂದ್ರನ್ ಅಶ್ವಿನ್ಗೆ ವಿಶ್ರಾಂತಿ ನೀಡಿ ಯುಜ್ವೇಂದ್ರ ಚಹಲ್ ಕೂಡ ಸ್ಥಾನ ಪಡೆಯುವ ಸಂಭವವಿದೆ. ಉಳಿದಂರೆ ಭುವಿ, ಶಮಿ, ಅರ್ಶ್ದೀಪ್ ತಂಡದಲ್ಲಿ ಇರಲಿದ್ದಾರೆ.
ದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ:
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಕೊಹ್ಲಿ ಈವರೆಗೆ ಆಡಿರುವ 23 ಟಿ20 ವಿಶ್ವಕಪ್ ಪಂದ್ಯದಲ್ಲಿ ಒಟ್ಟು 989 ರನ್ ಕಲೆಹಾಕಿದ್ದಾರೆ. ಇಂದಿನ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇವಲ 11 ರನ್ ಗಳಿಸಿದರೆ ಭಾರತ ಪರ ಟಿ20 ವಿಶ್ವಕಪ್ನಲ್ಲಿ 1000 ರನ್ ಗಳಿಸಿದ ಮೊಟ್ಟ ಮೊದಲ ಕ್ರಿಕೆಟಿಗ ಆಗಲಿದ್ದಾರೆ. ಇದರ ಜೊತೆಗೆ 28 ರನ್ ಬಾರಿಸಿದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎಂಬ ಪಟ್ಟ ತೊಡಲಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ಶ್ರೀಲಂಕಾದ ಮಹೇಲ ಜಯವರ್ಧನೆ 1016 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.