India vs South Africa: ಭಾರತಕ್ಕಿಂದು ದಕ್ಷಿಣ ಆಫ್ರಿಕಾ ಸವಾಲು: ಹ್ಯಾಟ್ರಿಕ್ ಜಯದ ವಿಶ್ವಾಸದಲ್ಲಿ ರೋಹಿತ್ ಪಡೆ
ICC T20 World Cup, IND vs SA: ರೋಹಿತ್ ಶರ್ಮಾ ನೇತೃತ್ವದ ಭಾರತದ ತಂಡ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇಂಡೋ- ಆಫ್ರಿಕಾ ಕದನ ಪರ್ತ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಶುರುವಾಗಲಿದೆ.
ಐಸಿಸಿ ಟಿ20 ವಿಶ್ವಕಪ್ನಲ್ಲಿಂದು (T20 World Cup) ಮೂರು ಮಹತ್ವದ ಪಂದ್ಯಗಳು ನಡೆಯಲಿದೆ. ಮೊದಲಿಗೆ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ಮುಖಾಮುಖಿಯಾದರೆ ನಂತರ ಪಾಕಿಸ್ತಾನ-ನೆದರ್ಲೆಂಡ್ಸ್ ಸೆಣೆಸಾಟ ನಡೆಸಲಿದೆ. ಬಳಿಕ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತದ ತಂಡ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇಂಡೋ- ಆಫ್ರಿಕಾ ಕದನ ಪರ್ತ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಶುರುವಾಗಲಿದೆ. ಭಾರತ ಹಾಗೂ ಆಫ್ರಿಕಾ ನಡುವಣ ಪಂದ್ಯದ ಫಲಿತಾಂಶವು ಪಾಕಿಸ್ತಾನ ತಂಡದ ಸೆಮಿಫೈನಲ್ ಅವಕಾಶದ ಮೇಲೆ ಪರಿಣಾಮ ಬೀರಲಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿರುವ ಬಾಬರ್ ಪಡೆಗೆ ಇಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಗೆಲ್ಲುವ ಜೊತೆಗೆ ಆಫ್ರಿಕಾ ವಿರುದ್ಧ ಭಾರತ ಕೂಡ ಜಯ ಸಾಧಿಸಿಬೇಕಿದೆ. ಹೀಗಾಗಿ ಭಾರತ-ಆಫ್ರಿಕಾ (India vs South Africa) ಕದನದ ಮೇಲೆ ಎಲ್ಲರ ಕಣ್ಣಿದೆ.
ಟೀಮ್ ಇಂಡಿಯಾ ಆಡಿರುವ ಎರಡು ಪಂದ್ಯಗಳ ಪೈಕಿ ಎರಡನ್ನೂ ಗೆದ್ದು 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ, +1.425 ರನ್ರೇಟ್ ಹೊಂದಿದೆ. ಇತ್ತ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಮತ್ತೊಂದರಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ +5.200 ರನ್ರೇಟ್ನೊಂದಿಗೆ 3 ಅಂಕ ಪಡೆದು ಎರಡನೇ ಸ್ಥಾನಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತ ಗೆದ್ದರೆ ಅಗ್ರಸ್ಥಾನ ಉಳಿಸಿಕೊಳ್ಳಲಿದೆ. ಆಫ್ರಿಕಾ ಗೆದ್ದರೆ ಟೀಮ್ ಇಂಡಿಯಾ ದ್ವಿತೀಯ ಸ್ಥಾನಕ್ಕೆ ಕುಸಿಯುತ್ತದೆ.
ಭಾರತಕ್ಕೆ ದೊಡ್ಡ ತಲೆನೋವಾಗಿರುವುದು ಕೆಎಲ್ ರಾಹುಲ್ ಫಾರ್ಮ್. ರನ್ ಗಳಿಸಲು ಪರದಾಡುತ್ತಿರುವ ರಾಹುಲ್ ಕಳೆದ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇದರಿಂದ ತಂಡ ಉತ್ತಮ ಆರಂಭ ಕೂಡ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಏನಾದರು ಬದಲಾವಣೆ ಆಗುತ್ತಾ ಎಂಬುದು ನೋಡಬೇಕಿದೆ. ಉಳಿದಂತೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಟಾಪ್ ಆರ್ಡರ್ಗಳಾದರೆ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಸಂದರ್ಭಕ್ಕೆ ತಕ್ಕಂತೆ ಆಡಲಿದ್ದಾರೆ. ಅಕ್ಷರ್, ಭುವಿ, ಅರ್ಶ್ದೀಪ್, ಶಮಿ ಜೊತೆ ಆರ್. ಅಶ್ವಿನ್ ಅಥವಾ ಚಹಲ್ ಇರಲಿದ್ದಾರೆ.
ಇತ್ತ ಆಫ್ರಿಕಾ ತಂಡದಲ್ಲಿ ನಾಯಕ ತೆಂಬಾ ಬವುಮಾ ಬಿಟ್ಟರೆ ಉಳಿದ ಬ್ಯಾಟರ್ಗಳು ಉತ್ತಮ ಫಾರ್ಮ್ನಲ್ಲಿದ್ದಾರೆ. ಬಾಂಗ್ಲಾ ಎದುರಿನ ಪಂದ್ಯದಲ್ಲಿ ಶತಕ ಗಳಿಸಿರುವ ರಿಲೀ ರೊಸೊ ಮಧ್ಯಮಕ್ರಮಾಂಕದ ಶಕ್ತಿಯಾಗಿದ್ದಾರೆ. ಡೇವಿಡ್ ಮಿಲ್ಲರ್, ಮರ್ಕರಂ ಹಾಗೂ ಕ್ವಿಂಟನ್ ಡಿಕಾಕ್ ಸ್ಪೋಟಕ ಬ್ಯಾಟಿಂಗ್ ಮಾಡುವ ಸಮರ್ಥರು. ಅನುಭವಿ ವೇಗಿ ಕಗಿಸೊ ರಬಾಡ, ಎನ್ರಿಚ್ ನಾಕಿಯಾ ಹಾಗೂ ವೇಯ್ನ್ ಪಾರ್ನೆಲ್ ಬೌಲಿಂಗ್ ಕೂಡ ಮಾರಕವಾಗಿದೆ.
ಮಳೆ ಇದೆಯೇ?:
ಪರ್ತ್ನಲ್ಲಿ ನಡೆಯಲಿರುವ ಭಾರತ- ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಪಂದ್ಯದ ದಿನ ಕೊಂಚ ಮಳೆ ಬೀಳುವ ಸಂಭವವಿದೆ. ಬೆಳಗ್ಗೆ 10 ಗಂಟೆಯಿಂದ 12 ಗಂಟೆ ನಡುವೆ ಮಳೆ ಆಗಬಹುದು. ಆದರೆ, ನಂತರ ವರುಣನ ಕಾಟ ಇರುವುದಿಲ್ಲ. ಭಾರತ-ಆಫ್ರಿಕಾ ಪಂದ್ಯ ಆಸ್ಟ್ರೇಲಿಯಾ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಶುರುವಾಗಲಿದೆ. ಹೀಗಾಗಿ ಈ ರೋಚಕ ಕದನ ಯಾವುದೇ ಅಡೆತಡೆಗಳಿಲ್ಲದೆ ಜರುಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಿಚ್ ಹೇಗಿದೆ?:
ಪರ್ತ್ ಸ್ಟೇಡಿಯಂನಲ್ಲಿನ ಪಿಚ್ ಬಗ್ಗೆ ಗಮನಿಸುವುದಾದರೆ, ಇಲ್ಲಿ ಬೌಲರ್‌ಗಳು ಹೆಚ್ಚು ಯಶಸ್ಸು ಸಾಧಿಸುತ್ತಾರೆ. ಈ ಪಿಚ್ ಹೆಚ್ಚು ಬೌನ್ಸ್ ಒದಗಿಸುವ ನಿರೀಕ್ಷೆಯಿದೆ. ವೇಗದ ಬೌಲರ್‌ಗಳು ಮೇಲ್ಮೈಯಲ್ಲಿ ಕಾರ್ಯನಿರ್ವಹಿಸುವುದನ್ನು ಆನಂದಿಸಬೇಕು. ಬೌಲರ್ಗಳ ಜೊತೆಗೆ ಪರ್ತ್‌ನಲ್ಲಿರುವ ಟ್ರ್ಯಾಕ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಇಲ್ಲಿ ನಡೆದಿರುವ ಬಹುತೇಕ ಪಂದ್ಯ ಹೈಸ್ಕೋರ್ ಗೇಮ್ ಆಗಿದೆ. ಹೀಗಾಗಿ ಸ್ಫೋಟಕ ಬ್ಯಾಟರ್ಗಳಿಂದ ಕೂಡಿರುವ ಭಾರತ-ಆಫ್ರಿಕಾ ಪಂದ್ಯ ಕೂಡ ರೋಚಕತೆಯಿಂದ ಕೂಡಿರಲಿದೆ.
ಉಭಯ ತಂಡಗಳು:
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಆರ್ಶ್ದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಆರ್. ಅಶ್ವಿನ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ದೀಪಕ್ ಹೂಡಾ, ಯುಜ್ವೇವೇಂದ್ರ ಚಹಲ್.
ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್ (ವಿಕೆಟ್ ಕೀಪರ್), ರೀಜಾ ಹೆನ್ರಿಕ್ಸ್, ಹೆನ್ರಿಚ್ ಕ್ಲಾಸನ್, ಕೇಶವ್ ಮಹಾರಾಜ, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಎನ್ರಿಚ್ ನಾಕಿಯಾ, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ರಿಲೀ ರೋಸೊ, ತಬ್ರೇಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್.
Published On - 7:53 am, Sun, 30 October 22