Dinesh Karthik: ಇದು ಯಾವ ಶಾಟ್?: ಕಾರ್ತಿಕ್ ಬ್ಯಾಟಿಂಗ್ ಕಂಡು ತಲೆ ಕೆಡಿಸಿಕೊಂಡ ನೆಟ್ಟಿಗರು: ವಿಡಿಯೋ
India vs West Indies: ನಾಯಕ ರೋಹಿತ್ ಶರ್ಮಾ (Rohit Sharma) ಅವರ ಆಕರ್ಷಕ ಅರ್ಧಶತಕದ ಜೊತೆ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ವೆಸ್ಟ್ ಇಂಡೀಸ್ಗೆ ಗೆಲ್ಲಲು ಸವಾಲಿನ ಟಾರ್ಗೆಟ್ ನೀಡಿತು. ಇದರಲ್ಲಿ ಡಿಕೆ ಪಾತ್ರ ತುಂಬಾನೆ ಮಹತ್ವದ್ದಾಗಿತ್ತು.
ಏಕದಿನ ಬಳಿಕ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲೂ ಭಾರತ (India vs West Indies) ಪರಾಕ್ರಮ ಮೆರೆದಿದೆ. ಟ್ರಿನಿಡಾಟ್ನ ಬ್ರಿಯನ್ ಲಾರ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 68 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಅವರ ಆಕರ್ಷಕ ಅರ್ಧಶತಕದ ಜೊತೆ ದಿನೇಶ್ ಕಾರ್ತಿಕ್ (Dinesh Karthik) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಸವಾಲಿನ ಟಾರ್ಗೆಟ್ ನೀಡಿತು. ಆದರೆ, ವೆಸ್ಟ್ ಇಂಡೀಸ್ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ ಅಲ್ಪ ಮೊತ್ತವನ್ನಷ್ಟೆ ಗಳಿಸಿ ಭಾರೀ ಮುಖಭಂಗ ಅನುಭವಿಸಿದೆ. ಭಾರತದ ಮೊತ್ತ 190ಕ್ಕೆ ಬರಲು ಮುಖ್ಯ ಕಾರಣ ಡಿಕೆ.
ಹೌದು, ಪ್ರಮುಖ ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡ ಬಳಿಕ ದಿನೇಶ್ ಕಾರ್ತಿಕ್ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಅಂತಿಮ ಎರಡು ಓವರ್ಗಳಲ್ಲಿ ಮನಬಂದಂತೆ ಬ್ಯಾಟ್ ಬೀಸಿದ ಇವರು ಕೇವಲ 19 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 41 ರನ್ ಚಚ್ಚಿದರು. ಅದರಲ್ಲೂ ಕೊನೆಯ 20ನೇ ಓವರ್ನ ಒಬೆಡ್ ಮೆಖಾಯ್ ಅವರ 4ನೇ ಎಸೆತದಲ್ಲಿ ಕಾರ್ತಿಕ್ ಹೊಡೆದ ಶಾಟ್ ಎಲ್ಲರ ಹುಬ್ಬೇರುವಂತೆ ಮಾಡಿತು.
ಕಾರ್ತಿಕ್ ರಿವರ್ಸ್ ಸ್ವೀಪ್ಗೆಂದು ಕಾದು ಕುಳಿತಿದ್ದರು. ಆದರೆ, ಚೆಂಡು ಔಟ್ಸೈಡ್ ಆಫ್ ಸ್ಟೆಂಪ್ ಕಡೆ ಬಂತು. ಆದರೂ ಅದನ್ನು ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದರು. ಅದು ಸಾಧ್ಯವಾಗಲಿಲ್ಲ. ಅತ್ತ ಲೆಗ್ ಸ್ಟಂಪ್ ಕಡೆ ಕೂಡ ತಿರುಗಿದರು. ಎಡ್ಜ್ ಕೂಡ ಆಗಲಿಲ್ಲ. ಆದರೆ, ಅದೇಗೊ ಬಾಲ್ ಬ್ಯಾಟ್ನ ಒಂದು ಬದಿಗೆ ತಾಗಿ ಫೈನ್ಲೆಗ್ ಕಡೆ ಸಾಗಿತು. ಇದನ್ನು ಕಂಡ ಅಭಿಮಾನಿಗಳು ಇದು ಕಾರ್ತಿಕ್ ಅವರ ಯಾವ ಶಾಟ್ ಎಂದು ತಮಾಷೆಯಾಗಿ ಕೇಳುತ್ತಿದ್ದಾರೆ.
.@DineshKarthik‘s knock pushed India’s total to a massive 190. His batting was an absolute treat to witness!
Watch all the action from the India tour of West Indies LIVE, only on #FanCode ? https://t.co/RCdQk12YsM@BCCI @windiescricket #WIvIND #INDvsWIonFanCode #INDvsWI pic.twitter.com/nya2zlE98o
— FanCode (@FanCode) July 29, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ನಂತರ ಮಧ್ಯಮ ಕ್ರಮಾಂಕದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ರಾಹುಲ್ ಅನುಪಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಆರಂಭಿಸಿದರು. ಈ ಜೋಡಿ 4.4 ಓವರ್ನಲ್ಲಿ 44 ರನ್ ಬಾರಿಸಿತು. ಸೂರ್ಯ 16 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಕೂಡ ಶೂನ್ಯಕ್ಕೆ ನಿರ್ಗಮಿಸಿದರು.
ರಿಷಭ್ ಪಂತ್ (14) ಹಾಗೂ ಹಾರ್ದಿಕ್ ಪಾಂಡ್ಯ (1) ಆಟ ಕೂಡ ನಡೆಯಲಿಲ್ಲ. ಇದರ ನಡುವೆ ಏಕಾಂಗಿಯಾಗಿ ರನ್ ಕಲೆಹಾಕುತ್ತಿದ್ದ ರೋಹಿತ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, 44 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ ಬಾರಿಸಿ 64 ರನ್ ಗಳಿಸಿ ಹಿಟ್ಮ್ಯಾನ್ ಕೂಡ ಬ್ಯಾಟ್ ಕೆಳಗಿಟ್ಟರು. ರವೀಂದ್ರ ಜಡೇಜಾ 16 ರನ್ ಗಳಿಸಿದರಷ್ಟೆ. ಅಂತಿಮ ಹಂತದಲ್ಲಿ ಕ್ರೀಸ್ಗೆ ಬಂದ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡಸಿ ತಂಡಕ್ಕೆ ಆಸರೆಯಾದರು. ಶ್ರೀಆರ್. ಅಶ್ವಿನ್ (13*) ಕೂಡ ಇವರಿಗೆ ಸಾಥ್ ನೀಡಿದರು. ಪರಿಣಾಮ ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಶಮರ್ ಬ್ರೂಕ್ಸ್ 20 ಹಾಗೂ ಬೌಲರ್ ಕೀಮೊ ಪೌಲ್ 19 ರನ್ ಗಳಿಸಿದ್ದೇ ಹೆಚ್ಚು. ಭಾರತ ಪರ ಅರ್ಶ್ದೀಪ್ ಸಿಂಗ್, ಆರ್. ಅಶ್ವಿನ್ ಮತ್ತು ರವಿ ಬಿಷ್ಟೋಯ್ ತಲಾ 2 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್ ಮತ್ತು ಜಡೇಜಾ 1 ವಿಕೆಟ್ ಪಡೆದರು.