Rohit Sharma: ಕೊಹ್ಲಿ, ಗಪ್ಟಿಲ್ನ ಹಿಂದಿಕ್ಕಿ ವಿಶ್ವ ದಾಖಲೆ ಬರೆದ ಹಿಟ್ಮ್ಯಾನ್
India vs West Indies 1st T20: 191 ರನ್ಗಳ ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾದ ಕರಾರುವಾಕ್ ದಾಳಿ ಮುಂದೆ ರನ್ಗಳಿಸಲು ಪರದಾಡಿದರು. ಪರಿಣಾಮ 101 ರನ್ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು.
ಭಾರತ-ವೆಸ್ಟ್ ಇಂಡೀಸ್ (WI vs IND) ನಡುವಣ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (Rohit Sharma) ಅರ್ಧಶತಕ ಬಾರಿಸಿ ಮಿಂಚಿದ್ದರು. ಕೇವಲ 44 ಎಸೆತಗಳಲ್ಲಿ 64 ರನ್ ಬಾರಿಸುವ ಮೂಲಕ ಹಿಟ್ಮ್ಯಾನ್ ವಿಶ್ವ ದಾಖಲೆಯನ್ನೂ ಕೂಡ ಬರೆದಿದ್ದು ವಿಶೇಷ. ಅಂದರೆ ಇದೀಗ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ನ್ಯೂಜಿಲೆಂಡ್ನ ಮಾರ್ಟಿನ್ ಗಪ್ಟಿಲ್ ಹೆಸರಿನಲ್ಲಿತ್ತು. ಮಾರ್ಟಿನ್ ಗಪ್ಟಿಲ್ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 3399 ರನ್ ಬಾರಿಸಿದ್ದಾರೆ. ಇದೀಗ ಈ ದಾಖಲೆಯನ್ನು ರೋಹಿತ್ ಶರ್ಮಾ ಮುರಿದು ಅಗ್ರಸ್ಥಾನಕ್ಕೇರಿದ್ದಾರೆ.
ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ ಒಟ್ಟು 3443 ರನ್ ಬಾರಿಸುವ ಮೂಲಕ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವದ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರೆ, ಮಾರ್ಟಿನ್ ಗಪ್ಟಿಲ್ (3399) 2ನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (3308) ಇರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರ ಅರ್ಧಶತಕ ಹಾಗೂ ದಿನೇಶ್ ಕಾರ್ತಿಕ್ ಅವರ ಸ್ಪೋಟಕ 41 ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿತು. 191 ರನ್ಗಳ ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾದ ಕರಾರುವಾಕ್ ದಾಳಿ ಮುಂದೆ ರನ್ಗಳಿಸಲು ಪರದಾಡಿದರು. ಪರಿಣಾಮ 101 ರನ್ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು.
ಇದಾಗ್ಯೂ 20 ಓವರ್ಗಳ ಬ್ಯಾಟಿಂಗ್ ಪೂರ್ಣಗೊಳಿಸಿದ ವಿಂಡೀಸ್ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 122 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಟೀಮ್ ಇಂಡಿಯಾ 68 ರನ್ಗಳ ಭರ್ಜರಿ ಜಯ ಸಾಧಿಸಿತು. ಕೇವಲ 19 ಎಸೆತಗಳಲ್ಲಿ 4 ಫೋರ್ ಹಾಗೂ 2 ಭರ್ಜರಿ ಸಿಕ್ಸ್ ಸಿಡಿಸಿ 41 ರನ್ ಬಾರಿಸಿದ್ದ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.