Ayush Badoni: 19 ಸಿಕ್ಸ್, 55 ಎಸೆತಗಳಲ್ಲಿ 165 ರನ್; ಆಯುಷ್ ಬದೋನಿ ಅಬ್ಬರಕ್ಕೆ ಎದುರಾಳಿ ತಂಡ ತತ್ತರ

|

Updated on: Aug 31, 2024 | 4:58 PM

DPL 2024: ದೆಹಲಿ ಪ್ರೀಮಿಯರ್ ಲೀಗ್​ನಲ್ಲಿ ಇಂದು ನಡೆಯುತ್ತಿರುವ 23 ನೇ ಪಂದ್ಯದಲ್ಲಿ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ತಂಡದ ನಾಯಕ ಆಯುಷ್ ಬದೋನಿ ಉತ್ತರ ದೆಹಲಿ ತಂಡದ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 55 ಎಸೆತಗಳಲ್ಲಿ 19 ಸಿಕ್ಸರ್ ಹಾಗೂ 8 ಬೌಂಡರಿ ಸಹಿತ 300 ರ ಸ್ಟ್ರೈಕ್​ ರೇಟ್​ನಲ್ಲಿ 165 ರನ್​ಗಳ ದಾಖಲೆಯ ಇನ್ನಿಂಗ್ಸ್ ಆಡಿದ್ದಾರೆ.

Ayush Badoni: 19 ಸಿಕ್ಸ್, 55 ಎಸೆತಗಳಲ್ಲಿ 165 ರನ್; ಆಯುಷ್ ಬದೋನಿ ಅಬ್ಬರಕ್ಕೆ ಎದುರಾಳಿ ತಂಡ ತತ್ತರ
ಆಯುಷ್ ಬದೋನಿ
Follow us on

ದೆಹಲಿ ಪ್ರೀಮಿಯರ್ ಲೀಗ್​ನಲ್ಲಿ ಇಂದು ನಡೆಯುತ್ತಿರುವ 23 ನೇ ಪಂದ್ಯದಲ್ಲಿ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ತಂಡದ ನಾಯಕ ಆಯುಷ್ ಬದೋನಿ ಉತ್ತರ ದೆಹಲಿ ತಂಡದ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 55 ಎಸೆತಗಳಲ್ಲಿ 19 ಸಿಕ್ಸರ್ ಹಾಗೂ 8 ಬೌಂಡರಿ ಸಹಿತ 300 ರ ಸ್ಟ್ರೈಕ್​ ರೇಟ್​ನಲ್ಲಿ 165 ರನ್​ಗಳ ದಾಖಲೆಯ ಇನ್ನಿಂಗ್ಸ್ ಆಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಬದೋನಿಗೆ ಉತ್ತಮ ಸಾಥ್ ನೀಡಿದ ಆರಂಭಿಕ ಪ್ರಿಯಾಂಶ್ ಆರ್ಯ ಕೂಡ ಅಬ್ಬರದ ಶತಕ ಸಿಡಿಸಿದ್ದು, ಈ ಇಬ್ಬರ ನೆರವಿನಿಂದಾಗಿ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ತಂಡ 20 ಓವರ್​ಗಳಲ್ಲಿ ಬರೋಬ್ಬರಿ 308 ರನ್ ಕಲೆಹಾಕಿದೆ.

55 ಎಸೆತಗಳಲ್ಲಿ 165 ರನ್

ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಪ್ರಿಯಾಂಶ್ ಆರ್ಯ ಮತ್ತು ಸಾರ್ಥಕ್ ರೇ ಮೊದಲ ವಿಕೆಟ್​ಗೆ ಕೇವಲ 13 ರನ್ ಜೊತೆಯಾಟ ನೀಡಲಷ್ಟೇ ಜೊತೆಯಾದರು. ಆದರೆ ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ಆಯುಷ್ ಬದೋನಿ ಹಾಗೂ ಪ್ರಿಯಾಂಶ್ ಆರ್ಯ ಎದುರಾಳಿ ತಂಡದ ಬೌಲರ್​ಗಳ ಬೆವರಿಳಿಸಿದರು. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ಈ ಇಬ್ಬರು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ರನ್​ಗಳ ಬಿರುಗಾಳಿ ಎಬ್ಬಿಸಿದರು. ಬಂದೊಡನೆ ಹೊಡಿಬಡಿ ಆಟಕ್ಕೆ ಮುಂದಾದ ಬದೋನಿ ಈ ಲೀಗ್​ನಲ್ಲಿ ತಮ್ಮ ಚೊಚ್ಚಲ ಶತಕವನ್ನು ದಾಖಲಿಸಿದರು. ಆ ನಂತರವೂ ತಣ್ಣಗಾಗದ ಬದೋನಿ 150 ರನ್​ಗಳ ಗಡಿಯನ್ನು ದಾಟಿದರು. ಅಂತಿಮವಾಗಿ 19ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದ ಬದೋನಿ 165 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಕೊನೆಗಾಣಿಸಿದರು.

ಪ್ರಿಯಾಂಶ್ ಆರ್ಯ ಸಿಕ್ಸರ್ ದಾಖಲೆ

ಬದೋನಿ ಹೊರತಾಗಿ ಈ ಪಂದ್ಯದಲ್ಲಿ ಆರಂಭಿಕ ಪ್ರಿಯಾಂಶ್ ಆರ್ಯ ಕೂಡ ಶತಕದ ಇನ್ನಿಂಗ್ಸ್ ಆಡಿದರು. ಪ್ರಿಯಾಂಶ್ ಆರ್ಯ ಈ ಪಂದ್ಯದಲ್ಲಿ 50 ಎಸೆತಗಳನ್ನು ಎದುರಿಸಿ 10 ಸಿಕ್ಸರ್ ಮತ್ತು 10 ಬೌಂಡರಿಗಳ ಸಹಾಯದಿಂದ 240 ರ ಸ್ಟ್ರೈಕ್ ರೇಟ್​ನಲ್ಲಿ 120 ರನ್ ಚಚ್ಚಿದರು. ಇದಲ್ಲದೆ ಈ ಸ್ಫೋಟಕ ಇನ್ನಿಂಗ್ಸ್​ನಲ್ಲಿ ಪ್ರಿಯಾಂಶ್ ಒಂದೇ ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಉತ್ತರ ದೆಹಲಿ ತಂಡದ ಮನನ್ ಭಾರದ್ವಾಜ್ ಬೌಲ್ ಮಾಡಿದ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ಪ್ರಿಯಾಂಶ್ ದಾಖಲೆ ನಿರ್ಮಿಸಿದರು. ಪಂದ್ಯದ 12ನೇ ಓವರ್‌ನಲ್ಲಿ ಪ್ರಿಯಾಂಶ್ ಪ್ರತಿ ಎಸೆತವನ್ನು ಸಿಕ್ಸರ್​ಗಟ್ಟಿದರು. ಇದರೊಂದಿಗೆ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮೊದಲು ಪ್ರಿಯಾಂಶ್, ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

286 ರನ್‌ಗಳ ಜೊತೆಯಾಟ

ಈ ಪಂದ್ಯದಲ್ಲಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ ಶತಕ ಸಿಡಿಸಿದಲ್ಲದೆ, ಎರಡನೇ ವಿಕೆಟ್‌ಗೆ 286 ರನ್‌ಗಳ ದಾಖಲೆಯ ಜೊತೆಯಾಟವನ್ನು ನೀಡಿದರು. ಇನ್ನು ದಕ್ಷಿಣ ದೆಹಲಿ ನೀಡಿರುವ 308 ರನ್​ಗಳ ದಾಖಲೆಯ ಗುರಿ ಬೆನ್ನಟ್ಟಿರುವ ಉತ್ತರ ದೆಹಲಿ ತಂಡ ಈ ಸುದ್ದಿ ಬರೆಯುವ ವೇಳೆಗೆ ಆರಂಭಿಕ ಆಘಾತ ಎದುರಿಸಿದ್ದು, 8 ಓವರ್​ಗಳಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಕೇವಲ 64 ರನ್ ಮಾತ್ರ ಕಲೆಹಾಕಿದೆ.

Published On - 4:47 pm, Sat, 31 August 24