ಬಿಸಿಸಿಐ ಜೊತೆ ಒಪ್ಪಂದಕ್ಕೆ ಮುಂದಾದ 65 ಸಾವಿರ ಕೋಟಿ ರೂ. ಮೌಲ್ಯದ ಕಂಪನಿ
BCCI sponsorship: ಏಷ್ಯಾಕಪ್‌ಗೆ ಮುನ್ನ ಬಿಸಿಸಿಐ ಮತ್ತು ಡ್ರೀಮ್ 11 ನಡುವಿನ ಪ್ರಾಯೋಜಕತ್ವ ಒಪ್ಪಂದ ಅಂತ್ಯಗೊಂಡಿದೆ. ಆನ್‌ಲೈನ್ ಗೇಮಿಂಗ್ ನಿಷೇಧದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಟೊಯೋಟಾ ಮೋಟಾರ್ಸ್ ಭಾರತ ಕ್ರಿಕೆಟ್ ತಂಡದ ಹೊಸ ಪ್ರಾಯೋಜಕರಾಗಲು ಆಸಕ್ತಿ ತೋರಿಸಿದೆ. ಬಿಸಿಸಿಐ ಶೀಘ್ರವಾಗಿ ಹೊಸ ಪ್ರಾಯೋಜಕರನ್ನು ಆಯ್ಕೆ ಮಾಡಬೇಕಾಗಿದೆ.

2025 ರ ಏಷ್ಯಾಕಪ್ (Asia Cup 2025) ಆರಂಭಕ್ಕೂ ಮೊದಲು ಬಿಸಿಸಿಐ (BCCI) ಹಾಗೂ ಡ್ರೀಮ್ 11 ನಡುವಿನ ಒಪ್ಪಂದ ಅಂತ್ಯವಾಗಿದೆ. ಆನ್‌ಲೈನ್ ಹಣದ ಆಟಗಳನ್ನು ನಿಷೇಧಿಸುವ ಕಾನೂನು ಜಾರಿಗೆ ಬಂದ ಕಾರಣ ಟೀಂ ಇಂಡಿಯಾದ ಪ್ರಸ್ತುತ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದ್ದ ಡ್ರೀಮ್ -11 ಜೊತೆಗಿನ ಒಪ್ಪಂದವನ್ನು ಅರ್ಧಕ್ಕೆ ರದ್ದುಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಮಂಡಳಿ ಮತ್ತು ಡ್ರೀಮ್ -11 ನಡುವಿನ ಒಪ್ಪಂದವನ್ನು ಅರ್ಧದಲ್ಲೇ ಕೊನೆಗೊಳಿಸಲಾಗಿದೆ. ಇನ್ನು ಮುಂದೆ ಇಂತಹ ಕಂಪನಿಗಳೊಂದಿಗೆ ಯಾವುದೇ ಪ್ರಾಯೋಜಕತ್ವದ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಏಷ್ಯಾಕಪ್ ಆರಂಭಕ್ಕೂ ಮೊದಲು ಹೊಸ ಪ್ರಾಯೋಜಕರನ್ನು ಆಯ್ಕೆ ಮಾಡುವ ಸವಾಲು ಬಿಸಿಸಿಐ ಮುಂದಿದೆ. ಆದಾಗ್ಯೂ ಬಿಸಿಸಿಐ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಈಗಾಗಲೇ ಹಲವು ಪ್ರಸಿದ್ಧ ಕಂಪನಿಗಳು ಸಾಲಾಗಿ ನಿಂತಿವೆ. ಅಂತಹ ಕಂಪನಿಗಳ ಪಟ್ಟಿಯಲ್ಲಿ 65 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಕಂಪನಿ ಮುಂಚೂಣಿಯಲ್ಲಿದೆ.
ಸೆಪ್ಟೆಂಬರ್ 9 ರಂದು ಪ್ರಾರಂಭವಾಗುವ ಏಷ್ಯಾಕಪ್‌ಗೆ ಸುಮಾರು 2 ವಾರಗಳ ಮೊದಲು, ಬಿಸಿಸಿಐ ಮತ್ತು ಡ್ರೀಮ್ -11 ಪ್ರಾಯೋಜಕತ್ವದ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದವು. 2023 ರಲ್ಲಿ ನಡೆದಿದ್ದ ಈ ಒಪ್ಪಂದವನ್ನು 3 ವರ್ಷಗಳ ಅವಧಿಗೆ ಮಾಡಲಾಗಿತ್ತು. ಮುಂದಿನ ವರ್ಷ ಅಂದರೆ 2026 ರಲ್ಲಿ ಈ ಒಪ್ಪಂದ ಕೊನೆಗೊಳ್ಳಬೇಕಿತ್ತು. ಆದರೆ ಹೊಸ ಆನ್‌ಲೈನ್ ಗೇಮಿಂಗ್ ಕಾನೂನಿನಿಂದಾಗಿ, ಡ್ರೀಮ್ -11 ತನ್ನ ಮುಖ್ಯ ವ್ಯವಹಾರವನ್ನು ನಿಲ್ಲಿಸಿದ್ದರಿಂದ ಈ ಒಪ್ಪಂದ ಮುರಿದುಬಿದ್ದಿದೆ.
ಟೊಯೋಟಾ ಮೋಟಾರ್ಸ್ ಆಸಕ್ತಿ
ಇದರ ಪರಿಣಾಮವೆಂದರೆ ಭಾರತ ತಂಡವು ಯಾವುದೇ ಪ್ರಾಯೋಜಕರಿಲ್ಲದೆ ಏಷ್ಯಾಕಪ್ ಆಡಬೇಕಾಗಬಹುದು. ಆದರೆ ಈ ಮಧ್ಯೆ, ಪ್ರಸಿದ್ಧ ಆಟೋಮೊಬೈಲ್ ಕಂಪನಿ ಟೊಯೋಟಾ, ಟೀಂ ಇಂಡಿಯಾದ ಪ್ರಾಯೋಜಕತ್ವ ಪಡೆಯಲು ಆಸಕ್ತಿ ತೋರಿಸಿದೆ. ವರದಿಯ ಪ್ರಕಾರ, ಜಪಾನ್‌ನ ಪ್ರಸಿದ್ಧ ಕಾರು ಕಂಪನಿ ಟೊಯೋಟಾ ಭಾರತ ತಂಡದ ಶೀರ್ಷಿಕೆ ಪ್ರಾಯೋಜಕತ್ವ ಪಡೆಯಲು ಬಯಸಿದೆ. ಈ ಕಂಪನಿಯು ಟೊಯೋಟಾ ಕಿರ್ಲೋಸ್ಕರ್ ಜೊತೆ ಜಂಟಿ ಉದ್ಯಮದಡಿಯಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ ಸುಮಾರು 56500 ಕೋಟಿ ರೂ.ಗಳಿಗಿಂತ ಹೆಚ್ಚು ವಹಿವಾಟು ನಡೆಸಿದೆ.
BCCI: ಡ್ರೀಮ್ 11 ಜೊತೆಗಿನ 358 ಕೋಟಿ ರೂ. ಒಪ್ಪಂದಕ್ಕೆ ಅಂತ್ಯ ಹಾಡಿದ ಬಿಸಿಸಿಐ
ಬಿಸಿಸಿಐ ಶೀಘ್ರದಲ್ಲೇ ನಿರ್ಧಾರ ಬರಲಿದೆ
ಟೊಯೋಟಾದಂತಹ ದೊಡ್ಡ ಕಂಪನಿಯು ಪ್ರಾಯೋಜಕತ್ವದಲ್ಲಿ ಆಸಕ್ತಿ ತೋರಿಸಿದರೆ, ಬಿಸಿಸಿಐ ಕೂಡ ಅದನ್ನು ಪರಿಗಣಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಟೊಯೋಟಾ ಮೋಟಾರ್ಸ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ. ಅದಕ್ಕೂ ಮೊದಲು ಅದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿತ್ತು. ವರದಿಯ ಪ್ರಕಾರ, ಟೊಯೋಟಾ ಮಾತ್ರವಲ್ಲದೆ ಫಿನ್-ಟೆಕ್ ಕಂಪನಿಯೂ ಸಹ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸುತ್ತಿದೆ. ಆದಾಗ್ಯೂ, ಈ ಕಂಪನಿಯ ಹೆಸರನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಮುಂಬರುವ ದಿನಗಳಲ್ಲಿ ಬಿಸಿಸಿಐ ಈ ಒಪ್ಪಂದಕ್ಕೆ ಯಾರೊಂದಿಗೆ ಸಹಿ ಹಾಕುತ್ತದೆ ಎಂಬುದು ತಿಳಿಯಲಿದೆ. ಆದರೆ ಪ್ರಾಯೋಜಕರಿಲ್ಲದೆ ಏಷ್ಯಾಕಪ್‌ನಲ್ಲಿ ಆಡುವುದನ್ನು ತಪ್ಪಿಸಲು ಮಂಡಳಿಯು ಬಯಸಿದರೆ, ಅದು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Mon, 25 August 25
