Duleep Trophy 2024: ಒಂದೇ ತಂಡದಲ್ಲಿ ಅಣ್ಣ-ತಮ್ಮ; ಒಂದಂಕಿಗೆ ಅಣ್ಣ ಸುಸ್ತು, ಶತಕ ಸಿಡಿಸಿದ ತಮ್ಮ

|

Updated on: Sep 05, 2024 | 5:34 PM

Musheer Khan: ಇದೇ ಮೊದಲ ಬಾರಿಗೆ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿರುವ ಉದಯೋನ್ಮುಖ ಆಟಗಾರ 19ರ ಹರೆಯದ ಮುಶೀರ್ ಖಾನ್, ಸ್ಟಾರ್ ಬೌಲರ್​ಗಳ ಬೆವರಿಳಿಸಿ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಎ ಮತ್ತು ಭಾರತ ಬಿ ತಂಡಗಳ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ದಿನದಾಟದಂತ್ಯಕ್ಕೆ ಭಾರತ ಬಿ ತಂಡ 7 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿದೆ.

Duleep Trophy 2024: ಒಂದೇ ತಂಡದಲ್ಲಿ ಅಣ್ಣ-ತಮ್ಮ; ಒಂದಂಕಿಗೆ ಅಣ್ಣ ಸುಸ್ತು, ಶತಕ ಸಿಡಿಸಿದ ತಮ್ಮ
ಮುಶೀರ್ ಖಾನ್
Follow us on

ಇಂದಿನಿಂದ ಆರಂಭವಾಗಿರುವ ದುಲೀಪ್ ಟ್ರೋಫಿಯಲ್ಲಿ ಒಂದೇ ದಿನ ನಾಲ್ಕು ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಈ ಎರಡೂ ಪಂದ್ಯಗಳಲ್ಲೂ ಬೌಲರ್​ಗಳ ಪ್ರಾಬಲ್ಯ ಮುಂದುವರೆದಿದೆ. ಆದರೆ ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಆಡುತ್ತಿರುವ ಉದಯೋನ್ಮುಖ ಆಟಗಾರ 19ರ ಹರೆಯದ ಮುಶೀರ್ ಖಾನ್, ಸ್ಟಾರ್ ಬೌಲರ್​ಗಳ ಬೆವರಿಳಿಸಿ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಎ ಮತ್ತು ಭಾರತ ಬಿ ತಂಡಗಳ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ದಿನದಾಟದಂತ್ಯಕ್ಕೆ ಭಾರತ ಬಿ ತಂಡ 7 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿದೆ. ಇದೇ ಪಂದ್ಯದಲ್ಲಿ ಭಾರತ ಬಿ ತಂಡದ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಮುಶೀರ್ ಖಾನ್ ಅಜೇಯ ಶತಕ ಸಿಡಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ವಾಸ್ತವವಾಗಿ ಇದೇ ತಂಡದಲ್ಲಿ ಅಂದರೆ ಭಾರತ ಬಿ ತಂಡದಲ್ಲಿ ಸ್ಟಾರ್ ಕ್ರಿಕೆಟಿಗರಾದ ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ಅಭಿಮನ್ಯು ಈಶ್ವರನ್, ವಾಷಿಂಗ್ಟನ್ ಸುಂದರ್​ ಜೊತೆಗೆ ಕಳೆದ ಬಾರಿಯ ರಣಜಿ ಹೀರೋ ಹಾಗೂ ಮುಶೀರ್ ಖಾನ್ ಅಣ್ಣ ಸರ್ಫರಾಜ್ ಖಾನ್ ಆಡುತ್ತಿದ್ದಾರೆ. ಆದರೆ ಇವರ್ಯಾರಿಗೂ ಮಾಡಲು ಸಾಧ್ಯವಾಗದ ಚಮತ್ಕಾರವನ್ನು ಮುಶೀರ್ ಖಾನ್ ಮಾಡಿದ್ದಾರೆ. ಮೊದಲ ದಿನದಾಟದಲ್ಲಿ ಮುಶೀರ್ ಹೊರತುಪಡಿಸಿ ಉಳಿದೆಲ್ಲ ಸ್ಟಾರ್ ಕ್ರಿಕೆಟಿಗರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಒಂದು ವೇಳೆ ಮುಶೀರ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದ್ದರೆ, ಈ ತಂಡ 100 ರನ್​ಗಳನ್ನು ಕಲೆಹಾಕಲು ಸಾಧ್ಯವಾಗುತ್ತಿರಲಿಲ್ಲ. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸುತ್ತಿರುವ ಮುಶೀರ್ ಅಜೇಯ ಶತಕ ಸಿಡಿಸಿದ್ದಾರೆ.

ಸ್ಟಾರ್ ಕ್ರಿಕೆಟಿಗರು ಫೇಲ್

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಈ ಪಂದ್ಯದಲ್ಲಿ ಭಾರತ ಬಿ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಬೌಲಿಂಗ್ ಮಾಡಲು ಅಖಾಡಕ್ಕಿಳಿದ ಶುಭ್​ಮನ್ ಗಿಲ್ ನಾಯಕತ್ವದ ಭಾರತ ಎ ತಂಡದ ವೇಗದ ಬೌಲರ್‌ಗಳು ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶಿಸಿದರು. ಆಕಾಶ್ ದೀಪ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್, ಭಾರತ ಬಿ ತಂಡದ ಇಡೀ ಅಗ್ರ ಮತ್ತು ಮಧ್ಯಮ ಕ್ರಮಾಂಕವನ್ನು ಬೇಗನೇ ಪೆವಿಲಿಯನ್​ಗಟ್ಟಿದರು. ಯಶಸ್ವಿ ಜೈಸ್ವಾಲ್ (30), ರಿಷಭ್ ಪಂತ್ (7) ಮತ್ತು ಸರ್ಫರಾಜ್ ಖಾನ್ (9) ಅವರಂತಹ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾದರು. ತಂಡದ ನಾಯಕ ಮತ್ತು ಅನುಭವಿ ಆರಂಭಿಕ ಅಭಿಮನ್ಯು ಈಶ್ವರನ್ (13) ಸಹ ಅಗ್ಗವಾಗಿ ಔಟಾದರು. ಅಂತಹ ಪರಿಸ್ಥಿತಿಯಲ್ಲಿ ಮುಶೀರ್ ತಂಡದ ಇನ್ನಿಂಗ್ಸ್ ಕೈಗೆತ್ತಿಕೊಂಡರು.

ಮುಶೀರ್ ಅದ್ಭುತ ಶತಕ, ಸೈನಿ ಸಾಥ್

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮುಶೀರ್, ಅವರ ಎದುರೇ ತಂಡದ 7 ವಿಕೆಟ್‌ಗಳು ಕೇವಲ 94 ರನ್ ಆಗುವಷ್ಟರಲ್ಲಿ ಪತನಗೊಂಡವು. ಅಂತಹ ಸಮಯದಲ್ಲಿ, 9 ನೇ ಕ್ರಮಾಂಕದ ಕಣಕ್ಕಿಳಿದ ನವದೀಪ್ ಸೈನಿ (ವೇಗದ ಬೌಲರ್) ಮುಶೀರ್​ಗೆ ಉತ್ತಮ ಸಾಥ್ ನೀಡಿದರು. ಮುಶೀರ್ ಬಹಳ ನಿಧಾನಗತಿಯ ಆರಂಭ ಮಾಡಿದರು. ಆದರೆ ವಿಕೆಟ್‌ಗಳು ಬೀಳಲು ಪ್ರಾರಂಭಿಸಿದಾಗ, ಅವರು ಸಾಧ್ಯವಾದಷ್ಟು ರನ್ ಸೇರಿಸಲು ಪ್ರಯತ್ನಿಸಿ, ರನ್ಗಳ ವೇಗವನ್ನು ಹೆಚ್ಚಿಸಿದರು.

ಅಂತಿಮವಾಗಿ 204 ಎಸೆತಗಳಲ್ಲಿ ಸ್ಮರಣೀಯ ಶತಕವನ್ನು ಗಳಿಸಿದ ಮುಶೀರ್ ಅವರಿಗೆ ಇದು ಪ್ರಥಮ ದರ್ಜೆ ವೃತ್ತಿಜೀವನದ ಮೂರನೇ ಶತಕವಾಗಿದೆ. ಇದಲ್ಲದೆ ಮುಶೀರ್, ಸೈನಿ ಜೊತೆ ಶತಕದ ಜೊತೆಯಾಟ ನಡೆಸಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು. ದಿನದಾಟದ ಅಂತ್ಯದವರೆಗೂ ಮುಶೀರ್ (105) ಮತ್ತು ಸೈನಿ (29) ಕ್ರೀಸ್‌ನಲ್ಲಿ ಉಳಿದುಕೊಂಡಿದ್ದರಿಂದ ತಂಡ 7 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿದೆ.

ಅಕ್ಷರ್ ಪಟೇಲ್ ಏಕಾಂಗಿ ಹೋರಾಟ

ಮತ್ತೊಂದೆಡೆ ಅನಂತಪುರದಲ್ಲಿ ಇಂಡಿಯಾ-ಸಿ ಹಾಗೂ ಇಂಡಿಯಾ-ಡಿ ನಡುವೆ ಪಂದ್ಯ ಆರಂಭವಾಗಿದ್ದು, ಇಲ್ಲೂ ವೇಗಿಗಳ ಹಾವಳಿ ಕಂಡು ಬಂತು. ಮೊದಲು ಬ್ಯಾಟ್ ಮಾಡಿದ ಭಾರತ-ಡಿ ಕೇವಲ 164 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಅಕ್ಷರ್ ಪಟೇಲ್ 86 ರನ್‌ಗಳ ಅಮೋಘ ಇನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವರಿಂದ ಕಳಪೆ ಪ್ರದರ್ಶನ ಕಂಡುಬಂತು. ಇನ್ನು ಭಾರತ-ಸಿ ಪರ ವೇಗಿ ವೈಶಾಕ್ ವಿಜಯ್‌ಕುಮಾರ್ 3 ಮತ್ತು ಅಂಶುಲ್ ಕಾಂಬೋಜ್ 2 ವಿಕೆಟ್ ಪಡೆದರು. ಇದಕ್ಕೆ ಉತ್ತರವಾಗಿ ಇಂಡಿಯಾ ಸಿ ಕೂಡ ತನ್ನ ಅಗ್ರ 4 ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಕೇವಲ 43 ರನ್‌ಗಳಿಗೆ ಕಳೆದುಕೊಂಡಿತು. ಇದರ ನಂತರ ಅಭಿಷೇಕ್ ಪೊರೆಲ್ (32) ಮತ್ತು ಬಾಬಾ ಇಂದರ್‌ಜೀತ್ (15) ಇನಿಂಗ್ಸ್ ಕೈಗೆತ್ತಿಕೊಂಡಿದ್ದು, ದಿನದಾಟದಂತ್ಯಕ್ಕೆ ತಂಡವು 4 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Thu, 5 September 24