T20 World Cup: ಆ ಅವಮಾನಕರ ಸೋಲಿಗೆ 610 ದಿನಗಳ ನಂತರ ಸೇಡು ತೀರಿಸಿಕೊಂಡ ಕಿವೀಸ್
New Zealand vs Afghanistan: 2026ರ ಟಿ20 ವಿಶ್ವಕಪ್‌ನ ಎರಡನೇ ದಿನದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಅಫ್ಘಾನಿಸ್ತಾನವನ್ನು ಸೋಲಿಸಿ, 2024ರ ಸೋಲಿಗೆ ಸೇಡು ತೀರಿಸಿಕೊಂಡಿತು. ಅಫ್ಘಾನ್ ನೀಡಿದ 182 ರನ್‌ಗಳ ಗುರಿಯನ್ನು ಟಿಮ್ ಸೀಫರ್ಟ್ ಅವರ ಸ್ಫೋಟಕ 65 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ 17.5 ಓವರ್‌ಗಳಲ್ಲಿ ಸಾಧಿಸಿತು. ಗುಲ್ಬದಿನ್ ನೈಬ್ 63 ರನ್ ಗಳಿಸಿದರೂ ಅಫ್ಘಾನ್ ಸೋಲು ತಪ್ಪಿಸಲಾಗಲಿಲ್ಲ. ಕಿವೀಸ್ ತಂಡದ ಈ ಗೆಲುವು ಟೂರ್ನಿಯಲ್ಲಿ ಉತ್ತಮ ಆರಂಭ ನೀಡಿದೆ.

2026 ರ ಟಿ20 ವಿಶ್ವಕಪ್‌ನ (T20 World Cup 2026) ಎರಡನೇ ದಿನದ ಮೊದಲ ಪಂದ್ಯದಂದು ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ (New Zealand vs Afghanistan) ತಂಡಗಳು ಮುಖಾಮುಖಿಯಾಗಿದ್ದವು. ಕಳೆದ ಕೆಲವು ವರ್ಷಗಳಿಂದ ಅಫ್ಘನ್ ತಂಡ ಕೂಡ ಬಲಿಷ್ಠ ತಂಡಗಳನ್ನು ಮಣಿಸುವ ಸಾಮರ್ಥ್ಯವನ್ನು ತೋರಿಸಿರುವುದರಿಂದ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇದರ ಜೊತೆಗೆ ಕಳೆದ ವಿಶ್ವಕಪ್‌ನಲ್ಲಿ ಇದೇ ನ್ಯೂಜಿಲೆಂಡ್ ತಂಡವನ್ನು ಭಾರಿ ಅಂತರದಿಂದ ಅಫ್ಘಾನಿಸ್ತಾನ ಮಣಿಸಿತ್ತು. ಅಂತಿಮವಾಗಿ ಈ ಸೇಡಿನ ಸಮರದಲ್ಲಿ ಗೆದ್ದು ಬೀಗುವುದರಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ182 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಇನ್ನು 13 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ, ನ್ಯೂಜಿಲೆಂಡ್ 2024 ರ ವಿಶ್ವಕಪ್‌ನಲ್ಲಿ ತನ್ನ ಸೋಲಿಗೆ ಸೇಡು ಕೂಡ ತೀರಿಸಿಕೊಂಡಿತು.
610 ದಿನಗಳ ಹಳೆಯ ಸೇಡು
ಸರಿಯಾಗಿ 610 ದಿನಗಳ ಹಿಂದೆ ಅಂದರೆ ಜೂನ್ 8, 2024 ರಂದು ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು ಕೇವಲ 75 ರನ್‌ಗಳಿಗೆ ಆಲೌಟ್ ಮಾಡಿ 84 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು. ಪರಿಣಾಮವಾಗಿ, ಚೆನ್ನೈ ಪಿಚ್‌ನಲ್ಲೂ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿತ್ತು. ವಿಶೇಷವಾಗಿ ಭಾರತ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಸ್ಪಿನ್ನರ್‌ಗಳ ವಿರುದ್ಧ ಕಿವೀಸ್ ಬ್ಯಾಟ್ಸ್‌ಮನ್‌ಗಳ ಹೋರಾಟವನ್ನು ಪರಿಗಣಿಸಿದರೆ, ಅಫ್ಘಾನಿಸ್ತಾನವು ಅಸಾಧಾರಣ ಸವಾಲಾಗಿ ಪರಿಣಮಿಸಿತ್ತು.
ಸೀಫರ್ಟ್ ಗೆಲುವಿನ ಇನ್ನಿಂಗ್ಸ್
ಇದಕ್ಕೆ ಪೂರಕವಾಗಿ 182 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಎರಡನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಆರಂಭಿಕರಾದ ಫಿನ್ ಅಲೆನ್ ಮತ್ತು ರಚಿನ್ ರವೀಂದ್ರ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದರು. ಆದಾಗ್ಯೂ, ಆ ಬಳಿಕ ಜೊತೆಯಾದ ಟಿಮ್ ಸೀಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ 74 ರನ್‌ಗಳ ಜೊತೆಯಾಟ ನಡೆಸಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇದೇ ವೇಳೆ ಸೀಫರ್ಟ್ 65 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕೂಡ ಆಡಿದರು. ಅವರಿಗೆ ಮಾರ್ಕ್ ಚಾಪ್ಮನ್ ಕೂಡ ಸಾಥ್ ನೀಡಿ 28 ರನ್‌ಗಳ ಕಾಣಿಕೆ ನೀಡಿದರು. ಇಬ್ಬರೂ ಔಟಾದಾಗ, ನ್ಯೂಜಿಲೆಂಡ್ 26 ಎಸೆತಗಳಲ್ಲಿ ಕೇವಲ 28 ರನ್ ಗಳಿಸಬೇಕಾಗಿತ್ತು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ಮುಂದಿನ 13 ಎಸೆತಗಳಲ್ಲಿ 28 ರನ್ ಗಳಿಸಿ ಕೇವಲ 17.5 ಓವರ್‌ಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.
182 ರನ್ ದಾಖಲಿಸಿದ ಅಫ್ಘಾನಿಸ್ತಾನ
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘನ್ ತಂಡದ ಆರಂಭ ಕಳಪೆಯಾಗಿತ್ತು. ಪವರ್‌ಪ್ಲೇನಲ್ಲಿ ಇಬ್ಬರೂ ಆರಂಭಿಕರು ಕೇವಲ 44 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಒಂದೇ ಓವರ್‌ನಲ್ಲಿ ಲಾಕಿ ಫರ್ಗುಸನ್ ಇಬ್ಬರನ್ನೂ ಔಟ್ ಮಾಡಿದರು. ಆದಾಗ್ಯೂ, ನಂತರ ಗುಲ್ಬದಿನ್ ಮತ್ತು ಸೆಡಿಕುಲ್ಲಾ ಅಟಲ್ ಸುಮಾರು 80 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಗುಲ್ಬದಿನ್ ಕೇವಲ 35 ಎಸೆತಗಳಲ್ಲಿ 63 ರನ್ ಗಳಿಸಿದರೆ, ಮೊಹಮ್ಮದ್ ನಬಿ, ದರ್ವಿಶ್ ರಸೂಲಿ ಮತ್ತು ಅಜ್ಮತುಲ್ಲಾ ಒಮರ್‌ಜೈ ಕೊನೆಯ ಓವರ್‌ಗಳಲ್ಲಿ ಅಲ್ಪ ಹಾಗೂ ಉಪಯುಕ್ತ ಕಾಣಿಕೆ ನೀಡಿ ತಂಡವನ್ನು 182 ರನ್‌ಗಳಿಗೆ ಕೊಂಡೊಯ್ದರು. ಆದರೆ ಕಿವೀಸ್ ಅಬ್ಬರದ ಮುಂದೆ ಅಫ್ಘನ್ ಗೆಲುವಿಗೆ ಇಷ್ಟು ರನ್ ಸಾಕಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Sun, 8 February 26
