ಮುಂದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಮತ್ತೋರ್ವ ಆಟಗಾರ ಎಂಟ್ರಿ
T20 World Cup 2026: ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ನಮೀಬಿಯ ತಂಡವನ್ನು ಎದುರಿಸಲಿದೆ. ಈ ಮ್ಯಾಚ್ ಬಳಿಕ ಭಾರತ ತಂಡವು ಪಾಕಿಸ್ತಾನ್ ಹಾಗೂ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ. ನಮೀಬಿಯ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಆಲ್ರೌಂಡರ್ ಎಂಟ್ರಿ ಕೊಡಲಿರುವುದು ಖಚಿತವಾಗಿದೆ.

ಭಾರತ ತಂಡವು ಟಿ20 ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಯುಎಸ್ಎ ತಂಡವನ್ನು 29 ರನ್ಗಳಿಂದ ಮಣಿಸಿ ಟೀಮ್ ಇಂಡಿಯಾ ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಅಂದರೆ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಪ್ರಮುಖ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸಂಪೂರ್ಣ ಫಿಟ್ ಆಗಿದ್ದಾರೆ.
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಪೆಕ್ಕೆಲುಬಿನ ನೋವಿನ ಸಮಸ್ಯೆಗೀಡಾಗಿದ್ದರು. ಹೀಗಾಗಿ ಅವರು ಕಿವೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ನ ಮೊದಲ ಪಂದ್ಯದ ವೇಳೆಯೂ ಭಾರತ ತಂಡದೊಡನೆ ಕಾಣಿಸಿಕೊಂಡಿರಲಿಲ್ಲ.
ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ವಾಷಿಂಗ್ಟನ್ ಸುಂದರ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಫೆಬ್ರವರಿ 12 ಕ್ಕೂ ಮುನ್ನ ಅವರು ದೆಹಲಿಯಲ್ಲಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಅಂದರೆ ಭಾರತ ಮತ್ತು ನಮೀಬಿಯ ನಡುವಣ ಪಂದ್ಯವು ಫೆಬ್ರವರಿ 12 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವುದು ಖಚಿತವಾಗಿದೆ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.
ಟಿ20 ವಿಶ್ವಕಪ್ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.
ಇದನ್ನೂ ಓದಿ: ಇಬ್ಬರಿಗೆ ಅನಾರೋಗ್ಯ… ಟೀಮ್ ಇಂಡಿಯಾಗೆ ಚಿಂತೆ ಶುರು
ಟಿ20 ವಿಶ್ವಕಪ್ 2026 ಭಾರತದ ವೇಳಾಪಟ್ಟಿ:
- ಫೆಬ್ರವರಿ 7: ಭಾರತ vs ಯುಎಸ್ಎ- (ಮುಂಬೈ)- ಭಾರತ ತಂಡಕ್ಕೆ 29 ರನ್ಗಳ ಭರ್ಜರಿ ಜಯ
- ಫೆಬ್ರವರಿ 12: ಭಾರತ vs ನಮೀಬಿಯಾ- (ದೆಹಲಿ)
- ಫೆಬ್ರವರಿ 15: ಭಾರತ vs ಪಾಕಿಸ್ತಾನ್- (ಕೊಲಂಬೊ)
- ಫೆಬ್ರವರಿ 18: ಭಾರತ vs ನೆದರ್ಲೆಂಡ್ಸ್- (ಅಹಮದಾಬಾದ್)
ಈ ನಾಲ್ಕು ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿದೆ. ಅಂದರೆ 4 ಗ್ರೂಪ್ಗಳ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಅದರಂತೆ ಮೊದಲ ಸುತ್ತಿನ ಬಳಿಕ ಸೂಪರ್-8 ಹಂತದ ಮುಖಾಮುಖಿ ಶುರುವಾಗಲಿದೆ. ಸೂಪರ್-8 ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
