ತಿಲಕ್ ವರ್ಮಾಗೆ ನಾಯಕತ್ವ: ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ
Duleep Trophy 2025: ದುಲೀಪ್ ಟ್ರೋಫಿ ಆಗಸ್ಟ್ 28 ರಿಂದ ಶುರುವಾಗಲಿದೆ. 6 ವಲಯಗಳ ನಡುವಣ ಈ ಕದನಕ್ಕಾಗಿ ಸೌತ್ ಝೋನ್ ತಂಡವನ್ನು ಹೆಸರಿಸಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಕೇರಳದ ಐವರು ಆಟಗಾರರು ಸ್ಥಾನ ಪಡೆದರೆ, ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ಇನ್ನು ಹೈದರಾಬಾದ್ನ ಮೂವರು ಆಟಗಾರರಿಗೆ ಸ್ಥಾನ ಲಭಿಸಿದೆ.

ದುಲೀಪ್ ಟ್ರೋಫಿಗಾಗಿ ದಕ್ಷಿಣ ವಲಯ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿ ಸೌತ್ ಝೋನ್ ತಂಡವನ್ನು ಯುವ ಎಡಗೈ ದಾಂಡಿಗ ತಿಲಕ್ ವರ್ಮಾ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಕೇರಳದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಅಝರುದ್ದೀನ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ 15 ಸದಸ್ಯರ ತಂಡದಲ್ಲಿ ಈ ಬಾರಿ ಕರ್ನಾಟಕದ ಇಬ್ಬರು ಸ್ಥಾನ ಪಡೆದಿದ್ದಾರೆ.
ಕರ್ನಾಟಕದ ಯುವ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಹಾಗೂ ವೇಗದ ಬೌಲರ್ ವೈಶಾಕ್ ವಿಜಯಕುಮಾರ್ ಸೌತ್ ಝೋನ್ ತಂಡದಲ್ಲಿದ್ದು, ಈ ಇಬ್ಬರು ಕೂಡ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ದುಲೀಪ್ ಟ್ರೋಫಿ ಟೂರ್ನಿಗೆ ದಕ್ಷಿಣ ವಲಯ ತಂಡ ಈ ಕೆಳಗಿನಂತಿದೆ…
ದಕ್ಷಿಣ ವಲಯ ತಂಡ:
- ತಿಲಕ್ ವರ್ಮಾ (ಹೈದರಾಬಾದ್)
- ಮೊಹಮ್ಮದ್ ಅಝರುದ್ದೀನ್ (ಕೇರಳ)
- ತನ್ಮಯ್ ಅಗರ್ವಾಲ್ (ಹೈದರಾಬಾದ್)
- ದೇವದತ್ ಪಡಿಕ್ಕಲ್ (ಕರ್ನಾಟಕ)
- ಮೋಹಿತ್ ಕಾಳೆ (ಪಾಂಡಿಚೇರಿ)
- ಸಲ್ಮಾನ್ ನಿಝಾರ್ (ಕೇರಳ)
- ನಾರಾಯಣ್ ಜಗದೀಸನ್ (ತಮಿಳುನಾಡು)
- ಆರ್ ಸಾಯಿ ಕಿಶೋರ್ (ತಮಿಳುನಾಡು)
- ತನಯ್ ತ್ಯಾಗರಾಜನ್ (ಹೈದರಾಬಾದ್)
- ವೈಶಾಕ್ ವಿಜಯ್‌ಕುಮಾರ್ (ಕರ್ನಾಟಕ)
- ನಿಧೀಶ್ ಎಂಡಿ (ಕೇರಳ)
- ರಿಕಿ ಭುಯಿ (ಆಂಧ್ರ ಪ್ರದೇಶ್)
- ಬೇಸಿಲ್ ಎನ್‌ಪಿ (ಕೇರಳ)
- ಗುರ್ಜಪ್ನೀತ್ ಸಿಂಗ್ (ತಮಿಳುನಾಡು)
- ಸ್ನೇಹಲ್ ಕೌತಾಂಕರ್ (ಗೋವಾ).
ಇದನ್ನೂ ಓದಿ: ಗೆಲ್ಲಲು ಮಾತ್ರ ಹೊರಟ ಇಂಗ್ಲೆಂಡ್ಗೆ ಟೆಸ್ಟ್ನ ಟೇಸ್ಟ್ ತೋರಿಸಿದ ಟೀಮ್ ಇಂಡಿಯಾ
ಏನಿದು ದುಲೀಪ್ ಟ್ರೋಫಿ?
ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ. 1961-62 ರಲ್ಲಿ ಶುರುವಾದ ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.
ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?
ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.
- ಉತ್ತರ ವಲಯ : ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಸರ್ವೀಸಸ್ ತಂಡಗಳು.
- ದಕ್ಷಿಣ ವಲಯ : ಆಂಧ್ರಪ್ರದೇಶ, ಗೋವಾ, ಹೈದರಾಬಾದ್ ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.
- ಕೇಂದ್ರ ವಲಯ : ಛತ್ತೀಸ್‌ಗಢ, ಮಧ್ಯಪ್ರದೇಶ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ವಿದರ್ಭ.
- ಪೂರ್ವ ವಲಯ : ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ.
- ಈಶಾನ್ಯ ವಲಯ : ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
- ಪಶ್ಚಿಮ ವಲಯ : ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು ಸೌರಾಷ್ಟ್ರ
