
ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹಾಗೂ ಪಾಕಿಸ್ತಾನ್ ಕ್ರಿಕೆಟಿಗರ ನಡುವಣ ಜಿದ್ದಾಟ ಎಂದಿಗೂ ಮುಗಿಯದ ಕಥೆ. ಈ ಹಿಂದೆ ಮೈದಾನದಲ್ಲಿ ಕಂಡು ಬರುತ್ತಿದ್ದ ವಾಕ್ಸಮರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮುಂದುವರೆದಿದೆ. ಅದರಲ್ಲೂ ಭಾರತ-ಪಾಕಿಸ್ತಾನ್ ನಡುವಣ ಪಂದ್ಯಗಳ ಫಲಿತಾಂಶದ ಬೆನ್ನಲ್ಲೇ ಪಾಕಿಗಳ ಕಾಲೆಳೆಯುವಲ್ಲಿ ಇರ್ಫಾನ್ ಪಠಾಣ್ ನಿಸ್ಸೀಮರು. ಇಂತಹದೊಂದು ಜಿದ್ದಾಟ ಶುರುವಾಗಿದ್ದು 2006 ರಲ್ಲಿ ಎಂಬುದು ಅನೇಕರಿಗೆ ಗೊತ್ತಿಲ್ಲ.
2006 ರಲ್ಲಿ ಪಾಕ್ ಪ್ರವಾಸ ಕೈಗೊಂಡಿದ್ದಾಗ ಇರ್ಫಾನ್ ಫಠಾಣ್ ಕೂಡ ಭಾರತ ತಂಡದಲ್ಲಿದ್ದರು. ಈ ವೇಳೆ ನಡೆದ ಕೆಲ ಕುತೂಹಲಕಾರಿ ಘಟನೆಗಳ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
2006 ರಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ಪ್ರವಾಸದಲ್ಲಿದ್ದಾಗ ಎರಡೂ ತಂಡಗಳ ಆಟಗಾರರು ಕರಾಚಿಯಿಂದ ಲಾಹೋರ್‌ಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಶಾಹಿದ್ ಅಫ್ರಿದಿ ಯುವ ಆಟಗಾರನಾಗಿದ್ದ ಇರ್ಫಾನ್ ಪಠಾಣ್ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದರು.
ಸುಮ್ಮನೆ ಕೂತಿದ್ದ ಇರ್ಫಾನ್ ಪಠಾಣ್ ಅವರ ತಲೆ ಮೇಲೆ ಕೈ ಇಟ್ಟು ಹೇರ್ ಸ್ಟೈಲ್ ಅನ್ನು ಹಾಳು ಮಾಡಿದ್ದ ಅಫ್ರಿದಿ ‘ಹೇಗಿದ್ದೀಯ ಮಗು?’ ಎಂದು ಕೇಳಿದರು. ಈ ವೇಳೆ ಕೋಪಗೊಂಡ ನಾನು,‘ ತು ಕಬ್ ಸೆ ಮೇರಾ ಬಾಪ್ ಬನ್ ಗಯಾ? (ನೀನು ಯಾವಾಗಿನಿಂದ ನನ್ನ ತಂದೆಯಾದಿರಿ?)’ ಎಂದು ಕೇಳಿದ್ದೆ. ಇದೇ ವೇಳೆ ಅಫ್ರಿದಿ ನನ್ನನ್ನು ಕೆಲ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಇದು ಅಲ್ಲಿಗೆ ಮುಗಿಯಲಿಲ್ಲ. ನಾನು ವಿಮಾನದಲ್ಲಿ ಇತ್ತ ಕಡೆ ಕೂತಿದ್ದರೆ, ಅತ್ತ ಕಡೆ ಅಫ್ರಿದಿ ಹಾಗೂ ಅಬ್ದುಲ್ ರಝಾಕ್ ಕುಳಿತಿದ್ದರು. ಇದೇ ವೇಳೆ ನಾನು ರಝಾಕ್ ಅವರಲ್ಲಿ ಪಾಕಿಸ್ತಾನದಲ್ಲಿ ಲಭ್ಯವಿರುವ ವಿವಿಧ ರೀತಿಯ ಮಾಂಸದ ಬಗ್ಗೆ ಕೇಳಿದೆ. ಅವರು ವಿವಿಧ ರೀತಿಯ ಮಾಂಸದ ಬಗ್ಗೆ ಹೇಳಿದರು.
ಇದೇ ವೇಳೆ ನಾನು ನಾಯಿ ಮಾಂಸ ಲಭ್ಯವಿದೆಯೇ ಎಂದು ಕೇಳಿದೆ. ಇದನ್ನು ಕೇಳಿ ರಝಾಕ್ ಆಘಾತಕ್ಕೊಳಗಾದರು. ಅಲ್ಲದೆ ಈ ಪ್ರಶ್ನೆ ಯಾಕೆ ಎಂದು ಮರುಪ್ರಶ್ನಿಸಿದರು.
ಇಲ್ಲಾ, ಶಾಹಿದ್ ಅಫ್ರಿದಿ ನಾಯಿ ಮಾಂಸ ತಿಂದಿರಬೇಕು. ಅದಕ್ಕಾಗಿಯೇ ಅವರು ಬೊಗಳುತ್ತಲೇ ಇರುತ್ತಾರೆ ಎಂದು ನಾನು ಮರು ಉತ್ತರ ನೀಡಿದ್ದೆ. ಇದರಿಂದ ಅಫ್ರಿದಿ ಮತ್ತಷ್ಟು ಕೋಪಗೊಂಡರು. ಇದಾಗ್ಯೂ ನಾನು ನೀಡಿದ ಕೌಂಟರ್ ಅಟ್ಯಾಕ್ಗೆ ಶಾಹಿದ್ ಅಫ್ರಿದಿ ತುಟಿಕ್ ಪಿಟಿಕ್ ಅನ್ನಲಿಲ್ಲ ಎಂದು ಇರ್ಫಾನ್ ಪಠಾಣ್ 19 ವರ್ಷಗಳ ಹಳೆಯ ಘಟನೆಯನ್ನು ಮೆಲುಕು ಹಾಕಿದರು.
ಇದನ್ನೂ ಓದಿ: IPL 2026: ಐಪಿಎಲ್ ಟ್ರೇಡ್ ವಿಂಡೋ ಎಂದರೇನು?
ಅಂದಿನ ಘಟನೆಯಿಂದಾಗಿ ಅಫ್ರಿದಿ ಹಾಗೂ ನನ್ನ ನಡುವೆ ಸ್ನೇಹವೇ ಮೂಡಲಿಲ್ಲ. ಈ ಜಿದ್ದಾಜಿದ್ದು ಮೈದಾನದಲ್ಲೂ ಮುಂದುವರೆಯಿತು. ಈ ಪೈಪೋಟಿ ನಡುವೆ ನಾನು ಶಾಹಿದ್ ಅಫ್ರಿದಿಯನ್ನು 11 ಬಾರಿ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಇದೇ ವೇಳೆ ಇರ್ಫಾನ್ ಪಠಾಣ್ ಸ್ಮರಿಸಿದರು.
Published On - 11:55 am, Sat, 16 August 25