7.2 ಓವರ್ಗಳಲ್ಲಿ ಪಂದ್ಯ ಮುಗಿಸಿದ ಇಂಗ್ಲೆಂಡ್
England vs West Indies: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ತಂಡ 3-0 ಅಂತರದಿಂದ ಗೆದ್ದುಕೊಂಡಿದೆ. ಅದರಲ್ಲೂ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಾಝ್ ಬಾಲ್ ಬ್ಯಾಟಿಂಗ್ ಪ್ರದರ್ಶೀಸುವ ಮೂಲಕ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಅಮೋಘ ಗೆಲುವು ದಾಖಲಿಸಿರುವುದು ವಿಶೇಷ.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡವು ಮೊದಲು ಇನಿಂಗ್ಸ್ ಆರಂಭಿಸಿತು. ಅದರಂತೆ ನಾಯಕ ಕ್ರೈಗ್ ಬ್ರಾಥ್‌ವೈಟ್ (61) ಹಾಗೂ ಜೇಸನ್ ಹೋಲ್ಡರ್ (59) ಅವರ ಅರ್ಧಶತಕಗಳ ನೆರವಿನಿಂದ ವಿಂಡೀಸ್ ಮೊದಲ ಇನಿಂಗ್ಸ್ನಲ್ಲಿ 282 ರನ್ ಕಲೆಹಾಕಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಜೋ ರೂಟ್ (87), ಜೇಮಿ ಸ್ಮಿತ್ (95) ಹಾಗೂ ಬೆನ್ ಸ್ಟೋಕ್ಸ್ (54) ಅರ್ಧಶತಕಗಳನ್ನು ಬಾರಿಸಿದರು. ಈ ಮೂಲಕ 376 ರನ್ಗಳಿಸಿ 94 ರನ್ಗಳ ಮುನ್ನಡೆ ಪಡೆಯಿತು.
94 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು 175 ರನ್ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ನ ಮುನ್ನಡೆಯೊಂದಿಗೆ ಇಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 81 ರನ್ಗಳ ಗುರಿ ಪಡೆಯಿತು.
7.2 ಓವರ್ಗಳಲ್ಲಿ ಚೇಸಿಂಗ್:
ದ್ವಿತೀಯ ಇನಿಂಗ್ಸ್ನಲ್ಲಿ 81 ರನ್ಗಳ ಗುರಿ ಪಡೆದ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಹಾಗೂ ಬೆನ್ ಡಕೆಟ್ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ಈ ಜೋಡಿಯು ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 4.2 ಓವರ್ಗಳಲ್ಲಿ ತಂಡದ ಮೊತ್ತ ಅರ್ಧಶತಕದ ಗಡಿದಾಟಿತು.
ಇನ್ನು ಬೆನ್ ಸ್ಟೋಕ್ಸ್ 28 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 57 ರನ್ ಬಾರಿಸಿದರೆ, ಬೆನ್ ಡಕೆಟ್ 16 ಎಸೆತಗಳಲ್ಲಿ 4 ಫೋರ್ಗಳೊಂದಿಗೆ ಅಜೇಯ 25 ರನ್ ಸಿಡಿಸಿದರು. ಈ ಮೂಲಕ ಕೇವಲ 7.2 ಓವರ್ಗಳಲ್ಲಿ 87 ರನ್ ಸಿಡಿಸಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಸರಣಿ ಕ್ಲೀನ್ ಸ್ವೀಪ್:
ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನಿಂಗ್ಸ್ ಮತ್ತು 114 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 241 ರನ್ಗಳ ಗೆಲುವು ದಾಖಲಿಸಿತ್ತು. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲೀ ಪೋಪ್ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜೇಮಿ ಸ್ಮಿತ್ (ವಿಕೆಟ್ ಕೀಪರ್) , ಕ್ರಿಸ್ ವೋಕ್ಸ್ , ಗಸ್ ಅಟ್ಕಿನ್ಸನ್ , ಮಾರ್ಕ್ ವುಡ್ , ಶೋಯೆಬ್ ಬಶೀರ್.
ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಯಾದವ್ ಅಬ್ಬರಕ್ಕೆ ಮ್ಯಾಕ್ಸ್ವೆಲ್ ವಿಶ್ವ ದಾಖಲೆ ಉಡೀಸ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ಮೈಕೈಲ್ ಲೂಯಿಸ್ , ಕಿರ್ಕ್ ಮೆಕೆಂಜಿ , ಅಲಿಕ್ ಅಥಾನಾಜೆ , ಕವೆಮ್ ಹಾಡ್ಜ್ , ಜೇಸನ್ ಹೋಲ್ಡರ್ , ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್) , ಅಲ್ಜಾರಿ ಜೋಸೆಫ್ , ಗುಡಕೇಶ್ ಮೋಟಿ , ಶಮರ್ ಜೋಸೆಫ್ , ಜೇಡನ್ ಸೀಲ್ಸ್