England Squad: ಇಂಗ್ಲೆಂಡ್ ಟೆಸ್ಟ್ ತಂಡ ಪ್ರಕಟ
James Anderson: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ 41 ವರ್ಷದ ಜೇಮ್ಸ್ ಅ್ಯಂಡರ್ಸನ್ ಸ್ಥಾನ ಪಡೆದಿದ್ದಾರೆ. ಜುಲೈ 10 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ವಿಂಡೀಸ್ ವಿರುದ್ಧದ ಮೊದಲ ಪಂದ್ಯ ಇಂಗ್ಲೆಂಡ್ ಪಾಲಿಗೆ ತುಂಬಾ ಮಹತ್ವದ್ದು.
ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡವನ್ನು (England) ಪ್ರಕಟಿಸಲಾಗಿದೆ. 14 ಸದಸ್ಯರ ಈ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಈ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಯ್ಕೆ ಮಾಡಲಾದ ಈ ತಂಡದಿಂದ ಅನುಭವಿ ವಿಕೆಟ್‌ಕೀಪರ್ ಜಾನಿ ಬೈರ್‌ಸ್ಟೋವ್ ಮತ್ತು ಬೆನ್ ಫೋಕ್ಸ್ ಅವರನ್ನು ಕೈ ಬಿಡಲಾಗಿದೆ. ಬದಲಾಗಿ ಅನ್ ಕ್ಯಾಪ್ಡ್ ಜೇಮೀ ಸ್ಮಿತ್ ಮತ್ತು ಡಿಲನ್ ಪೆನ್ನಿಂಗ್‌ಟನ್ ಅವರಿಗೆ ಚೊಚ್ಚಲ ಅವಕಾಶ ನೀಡಲಾಗಿದೆ.
ಈ ವರ್ಷದ ಆರಂಭದಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್ಗಳಿಸಲು ಪರದಾಡಿದ್ದ ಬೈರ್‌ಸ್ಟೋವ್ ಬದಲಿಯಾಗಿ 23ರ ಹರೆಯದ ವಿಕೆಟ್ ಕೀಪರ್ ಸ್ಮಿತ್ ಆಯ್ಕೆಯಾಗಿದ್ದಾರೆ. ಅಲ್ಲದೆ ಫೋಕ್ಸ್ ಕೂಡ ಇಂಗ್ಲೆಂಡ್ ತಂಡದಿಂದ ಹೊರಬಿದ್ದಿರುವ ಕಾರಣ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ನಲ್ಲಿ ವಿಕೆಟ್ ಕೀಪರ್ ಆಗಿ ಜೇಮೀ ಸ್ಮಿತ್ಗೆ ಸ್ಥಾನ ಸಿಗಬಹುದು.
ಇನ್ನು ಇಂಗ್ಲೆಂಡ್ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದ ಜ್ಯಾಕ್ ಲೀಚ್, ಒಲೀ ರಾಬಿನ್ಸನ್ ಮತ್ತು ಮಾರ್ಕ್ ವುಡ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಹಿರಿಯ ವೇಗಿ ಜೇಮ್ಸ್ ಅ್ಯಂಡರ್ಸನ್ ತಂಡದಲ್ಲಿದ್ದು, ಜುಲೈ 10 ರಂದು ಲಾರ್ಡ್ಸ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಜಿಮ್ಮಿ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಡಿಲನ್ ಪೆನ್ನಿಂಗ್ಟನ್ಗೆ ಚಾನ್ಸ್ ಸಿಗಬಹುದು.
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೋ ರೂಟ್ , ಜೇಮ್ಸ್ ಅ್ಯಂಡರ್ಸನ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಡಿಲನ್ ಪೆನ್ನಿಂಗ್ಟನ್, ಆಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್.
ಇದನ್ನೂ ಓದಿ: Shoaib Akhtar: ಭಗವದ್ಗೀತೆ ಶ್ಲೋಕ ಹಂಚಿಕೊಂಡ ಶೊಯೇಬ್ ಅಖ್ತರ್
ಇಂಗ್ಲೆಂಡ್-ವೆಸ್ಟ್ ಇಂಡೀಸ್ ವೇಳಾಪಟ್ಟಿ:
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿಯು ಜುಲೈ 10 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಗೆ ಇಂಗ್ಲೆಂಡ್ ಆತಿಥ್ಯವಹಿಸುತ್ತಿದೆ. ಇನ್ನು ಈ ಸರಣಿಯ ಮೊದಲ ಪಂದ್ಯದ ಮೂಲಕ ಜೇಮ್ಸ್ ಅ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ಲಾರ್ಡ್ಸ್ನಲ್ಲಿ ನಡೆಯಲಿರುವ ಮೊದಲ ಪಂದ್ಯವು ಇಂಗ್ಲೆಂಡ್ ಪಾಲಿಗೆ ತುಂಬಾ ಮಹತ್ವದ್ದು. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಲೆಜೆಂಡ್ ವೇಗಿಗೆ ಗೆಲುವಿನ ಬೀಳ್ಕೊಡುಗೆ ನೀಡಲು ಬೆನ್ ಸ್ಟೋಕ್ಸ್ ಪಡೆ ಪ್ಲ್ಯಾನ್ ರೂಪಿಸಿಕೊಂಡಿದೆ.
ಪಂದ್ಯ | ದಿನಾಂಕ | ಸ್ಥಳ |
---|---|---|
ಮೊದಲ ಟೆಸ್ಟ್ | ಜುಲೈ 10 ರಿಂದ 14 | ಲಾರ್ಡ್ಸ್ |
ದ್ವಿತೀಯ ಟೆಸ್ಟ್ | ಜುಲೈ 18 – 22 | ಟ್ರೆಂಟ್ ಬ್ರಿಡ್ಜ್ |
ತೃತೀಯ ಟೆಸ್ಟ್ | ಜುಲೈ 26 – 30 | ಎಡ್ಜ್ಬಾಸ್ಟನ್ |
Published On - 7:59 am, Tue, 2 July 24