Breaking News: ಏಕದಿನ ಕ್ರಿಕೆಟ್​ಗೆ ಹಠಾತ್ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್..!

| Updated By: ಪೃಥ್ವಿಶಂಕರ

Updated on: Jul 18, 2022 | 6:08 PM

Ben Stokes: ಜುಲೈ 19 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಆಡಿದ ಬಳಿಕ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವುದಾಗಿ ಇಂಗ್ಲೆಂಡ್​ನ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಹೇಳಿಕೊಂಡಿದ್ದಾರೆ.

Breaking News: ಏಕದಿನ ಕ್ರಿಕೆಟ್​ಗೆ ಹಠಾತ್ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್..!
ಇಂಗ್ಲೆಂಡ್‌ನ ದಿಗ್ಗಜ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತರ ಅವರು ಈ ಸ್ವರೂಪದಿಂದ ನಿವೃತ್ತಿ ಹೊಂದಲಿದ್ದಾರೆ. 31 ವರ್ಷದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ 2019 ರ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ODI ಕ್ರಿಕೆಟ್‌ನಲ್ಲಿ, ಸ್ಟೋಕ್ಸ್ 39 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಸುಮಾರು 3000 ರನ್ ಗಳಿಸಿದ್ದಾರೆ. ಇತ್ತೀಚೆಗೆ, ಅವರನ್ನು ಇಂಗ್ಲೆಂಡ್‌ನಿಂದ ಟೆಸ್ಟ್ ನಾಯಕನನ್ನಾಗಿ ಮಾಡಲಾಯಿತು ಆದರೆ ಈಗ ಅವರು ODI ಸ್ವರೂಪದಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ.
Follow us on

ಇಂಗ್ಲೆಂಡ್‌ನ ಸೂಪರ್‌ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸ್ಟೋಕ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಮ್ಮ ನಿವೃತ್ತಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಜುಲೈ 19 ಮಂಗಳವಾರದಂದು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ (England vs South Africa) ಪಂದ್ಯ ತನ್ನ ವೃತ್ತಿಜೀವನದ ಕೊನೆಯ ಏಕದಿನ ಪಂದ್ಯವಾಗಿದೆ ಎಂದು ಸ್ಟೋಕ್ಸ್ ಬರೆದುಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮಂಗಳವಾರದಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಡರ್ಹಾಮ್‌ನಲ್ಲಿ ನಡೆಯಲಿದೆ. ಈ ಮೂಲಕ ಸ್ಟೋಕ್ಸ್ ತವರು ನೆಲದಲ್ಲಿ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ.

31 ನೇ ವಯಸ್ಸಿನಲ್ಲಿ ಬೆನ್ ಸ್ಟೋಕ್ಸ್ ನಿವೃತ್ತಿಗೆ ಮುಂದಾಗಿದ್ದು, ಅದರಲ್ಲೂ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಚಾಂಪಿಯನ್ ಆದ ಸ್ವರೂಪವನ್ನು ತೊರೆಯಲು ನಿರ್ಧರಿಸಿದ್ದಾರೆ. ಮೂರು ವರ್ಷಗಳ ಹಿಂದೆ, ಅಂದರೆ ಜುಲೈ ತಿಂಗಳಿನಲ್ಲಿಯೇ, ಲಾರ್ಡ್ಸ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸ್ಟೋಕ್ಸ್ 84 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದರು. ಅದರ ಆಧಾರದ ಮೇಲೆ ಪಂದ್ಯವು ಸೂಪರ್ ಓವರ್‌ಗೆ ತಲುಪಿತು. ಸೂಪರ್ ಓವರ್ ಕೂಡ ಟೈ ಆಗಿತ್ತು, ಆದರೆ ನಂತರ ಹೆಚ್ಚು ಬೌಂಡರಿಗಳನ್ನು ಹೊಡೆದ ಕಾರಣ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಸ್ಟೋಕ್ಸ್ ಅವರ ಅದ್ಭುತ ಇನ್ನಿಂಗ್ಸ್‌ಗಾಗಿ ಅವರಿಗೆ ಮ್ಯಾನ್​ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಸಿಕ್ಕಿತ್ತು.

ಇದನ್ನೂ ಓದಿ
IND vs WI: ಭಾರತ ವಿರುದ್ಧದ ಸರಣಿಗೂ ಮುನ್ನ ವಿಂಡೀಸ್​ಗೆ ಆಘಾತ; ತಂಡದ ಸ್ಟಾರ್ ಬ್ಯಾಟರ್​ ಕ್ರಿಕೆಟ್​ಗೆ ಗುಡ್​ ಬೈ..!
IND vs ENG: ಶತಕದ ಮಾತು ಹಾಗಿರಲಿ; ಕಳೆದ 6 ವರ್ಷಗಳಲ್ಲಿ ಕೊಹ್ಲಿ ವೈಯಕ್ತಿಕ ಪ್ರದರ್ಶನ ಹೇಗಿದೆ ಗೊತ್ತಾ?
IND vs ENG: ಪಂತ್​ಗೆ ಜೀವದಾನ ಕೊಟ್ಟು ಕೆಟ್ಟೆವು..! ತಪ್ಪೊಪ್ಪಿಕೊಂಡ ಆಂಗ್ಲ ನಾಯಕ ಬಟ್ಲರ್ ಹೇಳಿದ್ದಿದು

ಸ್ಟೋಕ್ಸ್ ಹೇಳಿಕೆಯಲ್ಲಿ ಏನಿದೆ?

ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಟೆಸ್ಟ್ ನಾಯಕರಾಗಿ ನೇಮಕಗೊಂಡಿರುವ ಸ್ಟೋಕ್ಸ್ ತಮ್ಮ ನಿರ್ಧಾರವನ್ನು ಸುದೀರ್ಘ ಹೇಳಿಕೆಯಲ್ಲಿ ವಿವರಿಸಿದ್ದು, ಅದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ. ಸ್ಟೋಕ್ಸ್, ನಾನು ಮಂಗಳವಾರ ಡರ್ಹಾಮ್‌ನಲ್ಲಿ ಇಂಗ್ಲೆಂಡ್‌ ಪರ ಏಕದಿನ ಕ್ರಿಕೆಟ್‌ನಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡಲಿದ್ದೇನೆ. ನಾನು ಈ ಸ್ವರೂಪದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ನನ್ನ ಸಹ ಆಟಗಾರರೊಂದಿಗೆ ಇಂಗ್ಲೆಂಡ್‌ ಪರ ಆಡುವ ಪ್ರತಿ ನಿಮಿಷವನ್ನು ನಾನು ಆನಂದಿಸಿದೆ. ನಮ್ಮ ಪ್ರಯಾಣವು ಬಹಳ ಸ್ಮರಣೀಯವಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಸ್ಟೋಕ್ಸ್ ತಮ್ಮ ಹೇಳಿಕೆಯಲ್ಲಿ ಮುಂದುವರೆದು, “ಈ ನಿರ್ಧಾರವನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾಗಿರಬಹುದು ಆದರೆ ಈ ಸ್ವರೂಪದಲ್ಲಿ ನಾನು ಇನ್ನು ಮುಂದೆ ನನ್ನ ಸಹ ಆಟಗಾರರು ಮತ್ತು ಇಂಗ್ಲೆಂಡ್‌ಗೆ 100 ಪ್ರತಿಶತವನ್ನು ನೀಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಎದುರಿಸುವುದಕ್ಕಿಂತ ಹೆಚ್ಚು ಕಷ್ಟಕರವಾಗಿರಲಿಲ್ಲ. ಮೂರು ಫಾರ್ಮ್ಯಾಟ್‌ಗಳಲ್ಲಿ ಆಡುವುದು ತುಂಬಾ ತ್ರಾಸದಾಯಕ. ವೇಳಾಪಟ್ಟಿ ಮತ್ತು ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳಿಗೆ ತಕ್ಕಂತೆ ನನ್ನ ದೇಹವು ನನಗೆ ಬೆಂಬಲ ನೀಡುತ್ತಿಲ್ಲ. ಹೀಗಾಗಿ ನನ್ನ ನಿವೃತ್ತಿಯಿಂದ ಜೋಸ್ ಬಟ್ಲರ್ ತಂಡದಲ್ಲಿ ಇತರ ಆಟಗಾರನಿಗೆ ಆಡುವ ಅವಕಾಶ ಸಿಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ನಿರ್ಧಾರದ ನಂತರ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ತನ್ನ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಎಂದು ಅನುಭವಿ ಆಲ್‌ರೌಂಡರ್ ಸ್ಪಷ್ಟಪಡಿಸಿದ್ದಾರೆ. ಸ್ಟೋಕ್ಸ್ ಅವರನ್ನು ಕಳೆದ ತಿಂಗಳಷ್ಟೇ ಇಂಗ್ಲೆಂಡ್‌ನ ಟೆಸ್ಟ್ ನಾಯಕರನ್ನಾಗಿ ಮಾಡಲಾಯಿತು. ನಾಯಕರಾದ ತಕ್ಷಣ, ಆಂಗ್ಲ ತಂಡವು ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿತು. ಅಂತಹ ಪರಿಸ್ಥಿತಿಯಲ್ಲಿ, ಸ್ಟೋಕ್ಸ್ ಇಂಗ್ಲೆಂಡ್‌ ಪರ ಈ ಸ್ವರೂಪದಲ್ಲಿ ವಿಜಯದ ಹಾದಿಯನ್ನು ಮುಂದುವರೆಸಲು ಪ್ರಯತ್ನಿಸಲಿದ್ದಾರೆ. ಇದರೊಂದಿಗೆ ಈ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಂಪೂರ್ಣ ಸಿದ್ಧರಾಗಲಿದ್ದಾರೆ.

Published On - 5:14 pm, Mon, 18 July 22