
ಜುಲೈ 2 ರಂದು ನಡೆದ 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ (Women’s T20 World Cup 2026) ಎರಡನೇ ಸೆಮಿಫೈನಲ್‌ನಲ್ಲಿ, ಆತಿಥೇಯ ಇಂಗ್ಲೆಂಡ್, ದಕ್ಷಿಣ ಆಫ್ರಿಕಾವನ್ನು (England vs South Africa ) 40 ರನ್‌ಗಳಿಂದ ಸೋಲಿಸುವ ಮೂಲಕ ಫೈನಲ್‌ಗೆ ಟಿಕೆಟ್ ಪಡೆದುಕೊಂಡಿದೆ. ಲಂಡನ್‌ನ ದಿ ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 129 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಹೀಗಾಗಿ ಆಫ್ರಿಕಾ ತಂಡಕ್ಕೆ ಮತ್ತೊಂದು ಫೈನಲ್ ಆಡುವ ಅವಕಾಶವೂ ಕೈತಪ್ಪಿತು. ಇತ್ತ ಅಫ್ರಿಕಾ ತಂಡವನ್ನು ಏಕಪಕ್ಷಿಯವಾಗಿ ಮಣಿಸಿ ಫೈನಲ್ಗೇರಿರುವ ಇಂಗ್ಲೆಂಡ್ ತಂಡ ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಆರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ದಕ್ಷಿಣ ಆಫ್ರಿಕಾದ ವೇಗಿಗಳಾದ ಶಬ್ನಿಮ್ ಇಸ್ಮಾಯಿಲ್ ಮತ್ತು ಮರಿಜಾನ್ನೆ ಕಪ್ಪ್ ತಮ್ಮ ಮಾರಕ ಬೌಲಿಂಗ್ ಮೂಲಕ ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕವನ್ನು ಧ್ವಂಸಗೊಳಿಸಿದರು. ಆರಂಭಿಕ ಆಟಗಾರ್ತಿ ಆಮಿ ಜೋನ್ಸ್ 2 ರನ್‌ಗಳಿಗೆ ಔಟಾದರೆ, ಅದ್ಭುತ ಫಾರ್ಮ್‌ನಲ್ಲಿದ್ದ ಬ್ಯಾಟ್ಸ್‌ಮನ್ ಡ್ಯಾನಿ ವ್ಯಾಟ್-ಹಾಡ್ಜ್ ಕೂಡ ಕೇವಲ 12 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಇಂಗ್ಲೆಂಡ್ 3.2 ಓವರ್‌ಗಳಲ್ಲಿ 23 ರನ್‌ಗಳನ್ನು ಕಲೆಹಾಕಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು.
ಆದರೆ ಈ ಆರಂಭಿಕ ಆಘಾತದಿಂದ ತಂಡವನ್ನು ಹೊರತಂದ ನಾಯಕಿ ನ್ಯಾಟ್ ಸಿವರ್ ಬ್ರಂಟ್ ಮತ್ತು ಅನುಭವಿ ಹೀದರ್ ನೈಟ್ ನಿರ್ಣಾಯಕ ಸಮಯದಲ್ಲಿ ಉತ್ತಮ ಜೊತೆಯಾಟ ಕಟ್ಟಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 133 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದರು, ಇದು ಪಂದ್ಯಾವಳಿಯ ನಾಕೌಟ್ ಇತಿಹಾಸದಲ್ಲಿ ಅತ್ಯಧಿಕ ಜೊತೆಯಾಟವೆಂಬ ದಾಖಲೆಯನ್ನೂ ಬರೆಯಿತು. ನ್ಯಾಟ್ ಸಿವರ್ ಬ್ರಂಟ್ ಕೇವಲ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 75 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಹೀದರ್ ನೈಟ್ 47 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 1 ಸಿಕ್ಸರ್ ಸೇರಿದಂತೆ 58 ರನ್ ಬಾರಿಸಿದರು. ಇವರಿಬ್ಬರ ಇನ್ನಿಂಗ್ಸ್‌ನಿಂದಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ ಒಟ್ಟು 169 ರನ್ ಕಲೆಹಾಕಿತು.
ವಿಶ್ವಕಪ್ನಿಂದ ಹೊರಬಿದ್ದ ನ್ಯೂಜಿಲೆಂಡ್; ನಿವೃತ್ತಿ ಘೋಷಿಸಿದ ಮೂವರು ಲೆಜೆಂಡರಿ ಪ್ಲೇಯರ್ಸ್
170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯಿತು. ನಾಯಕಿ ಲಾರಾ ವೋಲ್ವಾರ್ಡ್ ಮತ್ತು ಟಾಜ್ಮಿನ್ ಬ್ರಿಟ್ಸ್ ಮೊದಲ ವಿಕೆಟ್‌ಗೆ 43 ರನ್‌ಗಳನ್ನು ಸೇರಿಸಿದರು. ಆದಾಗ್ಯೂ, ಸೋಫಿ ಎಕ್ಲೆಸ್ಟೋನ್, ವೋಲ್ವಾರ್ಡ್ ನೀಡಿದ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. ಇದರ ನಂತರ, ಇಂಗ್ಲೆಂಡ್‌ನ ಬೌಲರ್‌ಗಳು ಪಂದ್ಯವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡರು. ಆದಾಗ್ಯೂ ಆರಂಭಿಕ ಬ್ಯಾಟರ್ ಟಾಜ್ಮಿನ್ ಬ್ರಿಟ್ಸ್ 45 ಎಸೆತಗಳಲ್ಲಿ 51 ರನ್‌ಗಳ ಹೋರಾಟದ ಇನ್ನಿಂಗ್ಸ್ ಆಡಿದರು, ಆದರೆ ಇನ್ನೊಂದು ತುದಿಯಿಂದ ಅವರಿಗೆ ಬೆಂಬಲ ಸಿಗಲಿಲ್ಲ. ಪರಿಣಾಮವಾಗಿ, ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 129 ರನ್‌ಗಳನ್ನು ಮಾತ್ರ ಗಳಿಸಲಷ್ಟೇ ಶಕ್ತವಾಗಿ ಪಂದ್ಯವನ್ನು 40 ರನ್‌ಗಳಿಂದ ಸೋತಿತು.
Published On - 2:10 pm, Fri, 3 July 26