ಜೂನ್ 4 ರಿಂದ ಟಿ20 ವಿಶ್ವಕಪ್ ಶುರುವಾಗಲಿದೆ. ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಈ ಟೂರ್ನಿಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಅದು ಕೂಡ ವಿಂಡೀಸ್ನ ಸ್ಟಾರ್ ಆಲ್ರೌಂಡರ್ ಕೀರನ್ ಪೊಲಾರ್ಡ್ಗೆ (Kieron Pollar) ಹೊಸ ಜವಾಬ್ದಾರಿವಹಿಸುವ ಮೂಲಕ ಎಂಬುದು ವಿಶೇಷ. ಹೌದು, ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿ ಕೀರನ್ ಪೊಲಾರ್ಡ್ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ವಿಶ್ವಕಪ್ ಟೂರ್ನಿಯುದ್ದಕ್ಕೂ ವಿಂಡೀಸ್ ತಂಡದ ಮಾಜಿ ಆಟಗಾರ ಇಂಗ್ಲೆಂಡ್ ತಂಡದೊಂದಿಗೆ ರಣತಂತ್ರ ಹೆಣೆಯಲಿದ್ದಾರೆ.
2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಸೀಸ್ ಮಾಜಿ ಆಟಗಾರ ಮೈಕಲ್ ಹಸ್ಸಿ ಅವರನ್ನು ತಂಡದ ವಿಶೇಷ ಸಲಹೆಗಾರನಾಗಿ ನೇಮಿಸಿತ್ತು. ಅಲ್ಲದೆ ಆ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟಕ್ಕೇರಿತ್ತು.
ಈ ಬಾರಿ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ನಲ್ಲಿ ನಡೆಯಲಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ತಂಡದ ಸಹಾಯಕ ಕೋಚ್ ಆಗಿ ಕೀರನ್ ಪೊಲಾರ್ಡ್ ಅವರನ್ನು ನೇಮಿಸಿದೆ.
ಇತ್ತ ಕೀರನ್ ಪೊಲಾರ್ಡ್ ಇನ್ನೂ ಕೂಡ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿಲ್ಲ. 36 ವರ್ಷದ ವಿಶ್ವದ ಹಲವು ಲೀಗ್ಗಳಲ್ಲಿ ಆಡುತ್ತಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ನಡುವೆ ಇದೀಗ ಇಂಗ್ಲೆಂಡ್ ತಂಡದ ಪರ ಹೊಸ ಇನಿಂಗ್ಸ್ ಆರಂಭಿಸುವ ಅವಕಾಶ ಕೀರನ್ ಪೊಲಾರ್ಡ್ಗೆ ಲಭಿಸಿದೆ.
ಅದರಂತೆ ಟಿ20 ವಿಶ್ವಕಪ್ನಲ್ಲಿ ಕೆರಿಬಿಯನ್ ದ್ವೀಪಗಳಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಲು ಇಂಗ್ಲೆಂಡ್ ತಂಡವು ಕೀರನ್ ಪೊಲಾರ್ಡ್ ಅವರ ಸಲಹೆಗಳನ್ನು ಪಡೆಯಲಿದೆ. ಈ ಸಲಹೆಗಳೊಂದಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಟಿ20 ವಿಶ್ವಕಪ್ ಅನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2024: ಬಲಿಷ್ಠ ಪಡೆ…RCB ತಂಡದ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ
ವೆಸ್ಟ್ ಇಂಡೀಸ್ ಕ್ರಿಕೆಟಿಗ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್ನ ಕಿಂಗ್ ಆಗಿ ಗುರುತಿಸಿಕೊಂಡಿದ್ದಾರೆ. ಹಲವು ಬಾರಿ ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್ ಮೂಲಕ ಪಂದ್ಯಗಳ ಫಲಿತಾಂಶವನ್ನೇ ಬದಲಿಸಿದ್ದರು. ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಒಟ್ಟು 637 ಟಿ20 ಪಂದ್ಯಗಳನ್ನಾಡಿರುವ ಪೊಲಾರ್ಡ್ 12390 ರನ್ ಕಲೆಹಾಕಿದ್ದಾರೆ. ಹೀಗಾಗಿಯೇ ಟಿ20 ವಿಶ್ವಕಪ್ನಲ್ಲಿ ವಿಂಡೀಸ್ ಕ್ರಿಕೆಟಿಗನ ನೆರವು ಪಡೆಯಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ.
Published On - 8:09 am, Sun, 24 December 23