
ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಟೆಸ್ಟ್ ಸರಣಿ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಜೂನ್ 20 ರಿಂದ ಪ್ರಾರಂಭವಾಗುವ 5 ಟೆಸ್ಟ್ ಪಂದ್ಯಗಳ ಸರಣಿಯೊಂದಿಗೆ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಕೂಡ ಶುರುವಾಗಿದೆ. ಆದರೆ ಈ ಸರಣಿಗೆ ಎರಡೂ ತಂಡಗಳನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಅದಕ್ಕೂ ಮೊದಲೇ ಭಾರತ ಮತ್ತು ಇಂಗ್ಲೆಂಡ್‌ನ ಎರಡು ತಂಡಗಳು ಮುಖಾಮುಖಿಯಾಗಲಿದ್ದು, ಇದಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದೆ. ವಾಸ್ತವವಾಗಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರತ-ಎ (India A) ಹಾಗೂ ಇಂಗ್ಲೆಂಡ್ ಲಯನ್ಸ್ ( England Lions) ನಡುವೆ 2 ಪಂದ್ಯಗಳು ನಡೆಯಲಿವೆ. ಇದೀಗ ಆ ಪಂದ್ಯಗಳಿಗೆ ಇಂಗ್ಲೆಂಡ್ ಲಯನ್ಸ್ ತಂಡವನ್ನು ಇಂಗ್ಲೆಂಡ್ ಮಂಡಳಿ ಪ್ರಕಟಿಸಿದೆ.
ಭಾರತ-ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಎರಡು ಪ್ರಥಮ ದರ್ಜೆ ಪಂದ್ಯಗಳ ಸರಣಿ ಮೇ 30 ರಿಂದ ಪ್ರಾರಂಭವಾಗಲಿದೆ. ಈ ನಾಲ್ಕು ದಿನಗಳ ಪಂದ್ಯಗಳು ಕ್ಯಾಂಟರ್ಬರಿ ಮತ್ತು ನಾರ್ಥಾಂಪ್ಟನ್‌ನಲ್ಲಿ ನಡೆಯಲಿವೆ. ಈ ಸರಣಿಗೆ ಬಿಸಿಸಿಐ ಈಗಾಗಲೇ ಭಾರತ-ಎ ತಂಡವನ್ನು ಪ್ರಕಟಿಸಿದೆ. ಈಗ ಇಂಗ್ಲೆಂಡ್ ಮಂಡಳಿಯೂ ತನ್ನ ತಂಡವನ್ನು ಘೋಷಿಸಿದ್ದು, ಅದರಲ್ಲಿ ಇಬ್ಬರು ಸಹೋದರರನ್ನು ಸಹ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಹಿರಿಯರ ತಂಡದ ಸ್ಟಾರ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಕೌಂಟಿ ಕ್ರಿಕೆಟ್‌ನಿಂದ ತನ್ನ ಅನೇಕ ಯುವ ಮತ್ತು ಅನುಭವಿ ಆಟಗಾರರನ್ನು ಆಯ್ಕೆ ಮಾಡಿದೆ. ಆದರೆ ಇದರಲ್ಲಿ ಅತ್ಯಂತ ವಿಶೇಷವಾದ ಹೆಸರು ರಾಕಿ ಫ್ಲಿಂಟಾಫ್ ಅವರದ್ದು, ಅವರು ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್‌ನ ದೇಶೀಯ ಸರ್ಕ್ಯೂಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ರಾಕಿ ಫ್ಲಿಂಟಾಫ್ ಬೇರ್ಯಾರು ಅಲ್ಲ, ಮಾಜಿ ನಾಯಕ ಸೌರವ್ ಗಂಗೂಲಿಯವರ ದೊಡ್ಡ ಶತ್ರು ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ. ಕಳೆದ ವರ್ಷ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಲಂಕಾಷೈರ್ ಪರ ಪಾದಾರ್ಪಣೆ ಮಾಡಿದ್ದ ಫ್ಲಿಂಟಾಫ್, ಅಂದಿನಿಂದ ಇಂಗ್ಲೆಂಡ್ ಲಯನ್ಸ್ ಪರ ಆಡುತ್ತಿದ್ದಾರೆ. ಫ್ಲಿಂಟಾಫ್ ಇದುವರೆಗೆ 5 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕೇವಲ 137 ರನ್ ಗಳಿಸಿದ್ದಾರೆ. ಆದರೆ, ಈ ವರ್ಷ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಪ್ರವಾಸ ಪಂದ್ಯದಲ್ಲಿ ಶತಕ ಬಾರಿಸಿದ್ದರು.
ENG vs IND: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ; ಕನ್ನಡಿಗ ಕರುಣ್ಗೆ ತಂಡದಲ್ಲಿ ಸ್ಥಾನ
ಫ್ಲಿಂಟಾಫ್ ಹೊರತುಪಡಿಸಿ, ಇನ್ನೂ ಎರಡು ವಿಶೇಷ ಹೆಸರುಗಳಿವೆ – ರೆಹಾನ್ ಅಹ್ಮದ್ ಮತ್ತು ಫರ್ಹಾನ್ ಅಹ್ಮದ್. ಕೇವಲ 18 ನೇ ವಯಸ್ಸಿನಲ್ಲಿ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಲೆಗ್ ಸ್ಪಿನ್ನರ್ ರೆಹಾನ್, ಇದುವರೆಗೆ 5 ಟೆಸ್ಟ್‌ಗಳಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಸ್ತುತ 20 ವರ್ಷ ವಯಸ್ಸಿನ ರೆಹಾನ್ ಅವರ ಕಿರಿಯ ಸಹೋದರ ಫರ್ಹಾನ್ (17 ವರ್ಷ) ಅವರನ್ನು ಮೊದಲ ಬಾರಿಗೆ ಇಂಗ್ಲೆಂಡ್ ಲಯನ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುವ ಆಫ್-ಸ್ಪಿನ್ನರ್ ಫರ್ಹಾನ್, ಇದುವರೆಗೆ 10 ಪ್ರಥಮ ದರ್ಜೆ ಪಂದ್ಯಗಳಲ್ಲಿ 35 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಇಂಗ್ಲೆಂಡ್ ಲಯನ್ಸ್ ತಂಡ: ಜೇಮ್ಸ್ ರ್ಯು (ನಾಯಕ), ಫರ್ಹಾನ್ ಅಹ್ಮದ್, ರೆಹಾನ್ ಅಹ್ಮದ್, ಸೋನಿ ಬೇಕರ್, ಜೋರ್ಡಾನ್ ಕಾಕ್ಸ್, ರಾಕಿ ಫ್ಲಿಂಟಾಫ್, ಎಮಿಲಿಯೊ ಗೇ, ಟಾಮ್ ಹೇನ್ಸ್, ಜಾರ್ಜ್ ಹಿಲ್, ಜೋಶ್ ಹಲ್, ಎಡ್ಡಿ ಜ್ಯಾಕ್, ಬೆನ್ ಮೆಕಿನ್ನಿ, ಡ್ಯಾನ್ ಮೋಸ್ಲೆ, ಅಜಿತ್ ಸಿಂಗ್ ಡೇಲ್, ಕ್ರಿಸ್ ವೋಕ್ಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 pm, Wed, 21 May 25