AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs IND: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ; ಕನ್ನಡಿಗ ಕರುಣ್​ಗೆ ತಂಡದಲ್ಲಿ ಸ್ಥಾನ

India A Squad Announced for England Tour: ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ, 18 ಸದಸ್ಯರ ಬಲಿಷ್ಠ ಭಾರತ ಎ ತಂಡವನ್ನು ಆಯ್ಕೆ ಮಾಡಿದೆ. ಅನುಭವಿ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ ತಂಡದ ನಾಯಕತ್ವ ವಹಿಸಲಿದ್ದಾರೆ. ಕನ್ನಡಿಗ ಕರುಣ್ ನಾಯರ್ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ರುತುರಾಜ್ ಗಾಯಕ್ವಾಡ್ ಕೂಡ ತಂಡದಲ್ಲಿದ್ದಾರೆ. ಈ ಪ್ರವಾಸ ಭಾರತದ ಯುವ ಆಟಗಾರರಿಗೆ ಅಮೂಲ್ಯ ಅನುಭವ ನೀಡಲಿದೆ.

ENG vs IND: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ; ಕನ್ನಡಿಗ ಕರುಣ್​ಗೆ ತಂಡದಲ್ಲಿ ಸ್ಥಾನ
India A Squad
ಪೃಥ್ವಿಶಂಕರ
|

Updated on:May 16, 2025 | 9:09 PM

Share

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ-ಎ ತಂಡ (India A Squad) ಪ್ರಕಟವಾಗಿದೆ. ಮೇ 16, ಶುಕ್ರವಾರದಂದು ಬಿಸಿಸಿಐ 18 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುವ 2 ಪ್ರಥಮ ದರ್ಜೆ ಪಂದ್ಯಕ್ಕೆ ಭಾರತ ಎ ತಂಡದ ನಾಯಕತ್ವವನ್ನು ಅನುಭವಿ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ ( Abhimanyu Easwaran) ಅವರಿಗೆ ವಹಿಸಲಾಗಿದ್ದು, ನಿರೀಕ್ಷೆಯಂತೆ ಕನ್ನಡಿಗ ಕರುಣ್ ನಾಯರ್​ಗೆ (Karun Nair) ಈ ತಂಡದಲ್ಲಿ ಅವಕಾಶ ನೀಡಲಾಗಿದೆ. ಇವರಲ್ಲದೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ತಂಡಕ್ಕೆ ಮರಳಿದ್ದಾರೆ. ಇದಕ್ಕೂ ಮೊದಲು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಎ ತಂಡವನ್ನು ಮುನ್ನಡೆಸಿದ್ದ ರುತುರಾಜ್ ಗಾಯಕ್ವಾಡ್ ಈ ಬಾರಿ ತಂಡವನ್ನು ಮುನ್ನಡೆಸುತ್ತಿಲ್ಲವಾದರೂ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕರುಣ್ ನಾಯರ್​ಗೆ ಸ್ಥಾನ

ಮೇ 30 ರಿಂದ ಪ್ರಾರಂಭವಾಗುವ ಈ ಸರಣಿಗೆ ಆಯ್ಕೆಯಾದ ತಂಡದ ವಿಶೇಷವೆಂದರೆ ಅನುಭವಿ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅವರಿಗೆ ಹಲವು ವರ್ಷಗಳ ನಂತರ ಭಾರತ ತಂಡಕ್ಕೆ ಮರಳುವ ಅವಕಾಶ ಸಿಕ್ಕಿದೆ. ಕಳೆದ ದೇಶೀಯ ಸೀಸನ್​ನಲ್ಲಿ ಪ್ರಥಮ ದರ್ಜೆ ಮತ್ತು ಲಿಸ್ಟ್-ಎ ಕ್ರಿಕೆಟ್‌ನಲ್ಲಿ 1600 ಕ್ಕೂ ಹೆಚ್ಚು ರನ್‌ ಮತ್ತು 9 ಶತಕಗಳನ್ನು ಬಾರಿಸಿದ್ದ ಕರುಣ್ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಬೇಕೆಂಬ ಬೇಡಿಕೆ ಇತ್ತು. ಅಂತಹ ಪರಿಸ್ಥಿತಿಯಲ್ಲಿ, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭವಾಗುವ ಮೊದಲು ಭಾರತ-ಎ ತಂಡದಲ್ಲಿ ಅವಕಾಶ ಪಡೆದಿರುವ ಕರುಣ್ ನಾಯರ್, ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಟೆಸ್ಟ್ ತಂಡಕ್ಕೂ ಆಯ್ಕೆಯಾಗುವ ಸಾಧ್ಯತೆಗಳಿವೆ.

ತಂಡದಲ್ಲಿ ಗಿಲ್-ಜೈಸ್ವಾಲ್

ಅವರಲ್ಲದೆ, ಇಶಾನ್ ಕಿಶನ್​ಗೂ ಆಯ್ಕೆ ಮಂಡಳಿ ಮತ್ತೊಂದು ಅವಕಾಶ ನೀಡಿದೆ. 2023 ರ ಡಿಸೆಂಬರ್‌ನಲ್ಲಿ ಭಾರತ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಇಶಾನ್ ಕಿಶನ್ ಹಠಾತ್ತನೆ ತಂಡ ತೊರೆದು ಭಾರತಕ್ಕೆ ಮರಳಿದ್ದರು. ಅಂದಿನಿಂದ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಆದರೀಗ ಬರೋಬ್ಬರಿ ಒಂದೂವರೆ ವರ್ಷಗಳ ನಂತರ ಆಯ್ಕೆದಾರರು ಕಿಶನ್​ಗೆ ಅವಕಾಶ ನೀಡಿದ್ದಾರೆ. ಇಷ್ಟೇ ಅಲ್ಲ, ಈ ಸರಣಿಗೆ ಟೀಂ ಇಂಡಿಯಾದ ಕೆಲವು ಖಾಯಂ ಆಟಗಾರರನ್ನು ಸಹ ಆಯ್ಕೆ ಮಾಡಲಾಗಿದೆ. ಇದರಲ್ಲಿ ಶುಭ್​ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಪ್ರಮುಖ ಹೆಸರುಗಳು. ಆದರೆ ಶುಭ್​ಮನ್​ ಗಿಲ್ ಮೊದಲ ಪಂದ್ಯವನ್ನು ಆಡುತ್ತಿಲ್ಲ. ಜೂನ್ 6 ರಿಂದ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.

Rohit Sharma: ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ; ವಿಡಿಯೋ ನೋಡಿ

ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಫೈನಲ್ ರೇಸ್​ನಲ್ಲಿರುವ ಕಾರಣ ಗಿಲ್​ರನ್ನು ಮೊದಲ ಪಂದ್ಯಕ್ಕೆ ಆಯ್ಕೆ ಮಾಡಲಾಗಿಲ್ಲ. ಗಿಲ್ ಮಾತ್ರವಲ್ಲದೆ ಗುಜರಾತ್ ತಂಡದ ಮತ್ತೊಬ್ಬ ಆಟಗಾರ ಸಾಯಿ ಸುದರ್ಶನ್ ಅವರನ್ನು ಸಹ ಎರಡನೇ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ಶಾರ್ದೂಲ್ ಠಾಕೂರ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದು, ಅವರು ಮೊದಲ ಪಂದ್ಯದಲ್ಲೇ ಕಣಕ್ಕಿಳಿಯಲಿದ್ದಾರೆ. ಇವರಲ್ಲದೇ ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಆಕಾಶ್ ದೀಪ್, ಧ್ರುವ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರಿಗೂ ಅವಕಾಶ ನೀಡಲಾಗಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ-ಎ ತಂಡ

ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೆಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ಶಮ್ಸ್ ಮುಲಾನಿ, ಮುಕೇಶ್ ಕುಮಾರ್, ಆಕಾಶ್ ದೀಪ್, ರುತುರಾಜ್ ಗಾಯಕ್ವಾಡ್, ಸರ್ಫರಾಜ್ ಖಾನ್, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಹರ್ಷ್ ದುಬೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Fri, 16 May 25