IPL 2025: RCB ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ CWI
IPL 2025 RCB vs KKR: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಇಂದಿನಿಂದ ಮತ್ತೆ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಣಕ್ಕಿಳಿಯಲಿವೆ.
Updated on:May 17, 2025 | 7:33 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಉಳಿದ ಪಂದ್ಯಗಳಿ ಇಂದಿನಿಂದ (ಮೇ 17) ಶುರುವಾಗಲಿದೆ. ಇಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನವೇ ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದು ಕೂಡ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಕಡೆಯಿಂದ ಎಂಬುದು ವಿಶೇಷ.

ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಆರ್ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು. ಮೇ 29 ರಿಂದ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಸರಣಿ ಶುರುವಾಗಲಿದ್ದು, ಇದಕ್ಕಾಗಿ ಅವರು ಅರ್ಧದಲ್ಲೇ ಐಪಿಎಲ್ ಟೂರ್ನಿ ತೊರೆಯಲಿದ್ದಾರೆ ಎಂದು ವರದಿಯಾಗಿತ್ತು.

ಆದರೀಗ ರೊಮಾರಿಯೊ ಶೆಫರ್ಡ್ಗೆ ಸಂಪೂರ್ಣ ಟೂರ್ನಿ ಮುಗಿಸಲು ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಅನುಮತಿ ನೀಡಿದೆ. ಅಲ್ಲದೆ ಅವರ ಬದಲಿಗೆ ಇಂಗ್ಲೆಂಡ್ ಸರಣಿಗೆ ಜೆಡಿಯಾ ಬ್ಲೇಡ್ಸ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಆರ್ಸಿಬಿ ತಂಡದ ಪ್ಲೇಆಫ್ ಪಂದ್ಯಗಳಲ್ಲೂ ರೊಮಾರಿಯೊ ಶೆಫರ್ಡ್ ಕಾಣಿಸಿಕೊಳ್ಳುವುದು ಖಚಿತ.

ಇತ್ತ ರೊಮಾರಿಯೊ ಶೆಫರ್ಡ್ ಲಭ್ಯತೆಯು ಆರ್ಸಿಬಿ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಬಹುದು. ಏಕೆಂದರೆ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ್ದ ಶೆಫರ್ಡ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಅಲ್ಲದೆ ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ಕೂಡ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಹೀಗಾಗಿ ಉಳಿದ ಪಂದ್ಯಗಳಿಗೆ ಶೆಫರ್ಡ್ ಲಭ್ಯತೆಯು ಮಧ್ಯಮ ಕ್ರಮಾಂಕದಲ್ಲಿ ಆರ್ಸಿಬಿ ತಂಡದ ಚಿಂತೆಯನ್ನು ದೂರ ಮಾಡಿದೆ ಎನ್ನಬಹುದು.

ಇನ್ನು ರೊಮಾರಿಯೊ ಶೆಫರ್ಡ್ ಅಲ್ಲದೆ ಗುಜರಾತ್ ಟೈಟಾನ್ಸ್ ತಂಡದ ಶೆರ್ಫೇನ್ ರುದರ್ಫೋರ್ಡ್ಗೂ ಪ್ಲೇಆಫ್ ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ರುದರ್ಫೋರ್ಡ್ ಬದಲಿಯಾಗಿ ವೆಸ್ಟ್ ಇಂಡೀಸ್ ತಂಡಕ್ಕೆ ಜಾನ್ ಕ್ಯಾಂಪ್‌ಬೆಲ್ ಆಯ್ಕೆಯಾಗಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಎಲ್ಲಾ ಪಂದ್ಯಗಳಲ್ಳೂ ಶೆರ್ಫೇನ್ ರುದರ್ಫೋರ್ಡ್ ಕೂಡ ಕಾಣಿಸಿಕೊಳ್ಳಲಿದ್ದಾರೆ.
Published On - 7:33 am, Sat, 17 May 25









