ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 4 ರಿಂದ ಶುರುವಾಗಲಿದೆ. ಆದರೆ ಅದಕ್ಕೂ ಮುನ್ನ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿದೆ. ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಗಾಯಗೊಂಡಿದ್ದು, ಮೊದಲ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ. ಅಭ್ಯಾಸದ ವೇಳೆ ಮೊಹಮ್ಮದ್ ಸಿರಾಜ್ ಎಸೆದ ಶಾರ್ಟ್ ಪಿಚ್ ಎಸೆತವನ್ನು ಗುರುತಿಸುವಲ್ಲಿ ಮಯಾಂಕ್ ಎಡವಿದ್ದರಿಂದ ಚೆಂಡು ನೇರವಾಗಿ ಹೆಲ್ಮೆಟ್ ಗೆ ಬಡಿದಿದೆ. ತಲೆಯ ಹಿಂಭಾಗಕ್ಕೆ ವೇಗವಾಗಿ ಬಡಿದ ಕಾರಣ ಕೂಡಲೇ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಕನ್ಕ್ಯುಶನ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿ ನೀಡಲು ಸೂಚಿಸಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ 30 ವರ್ಷದ ಮಯಾಂಕ್ ಕಣಕ್ಕಿಳಿಯುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ .
ಮೊದಲ ಟೆಸ್ಟ್ಗೆ ಮಯಾಂಕ್ ಅಲಭ್ಯತೆ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಜೊತೆ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಹಿಂದೆ ಆರಂಭಿಕರಾಗಿ ಕಣಕ್ಕಿಳಿದಿರುವ ಅನುಭವ ಹೊಂದಿರುವ ರಾಹುಲ್ ಪ್ರಸ್ತುತ ತಂಡದಲ್ಲಿರುವ ಏಕೈಕ ಆಯ್ಕೆ ಎನ್ನಬಹುದು. ಏಕೆಂದರೆ ಈಗಾಗಲೇ ಗಾಯಗೊಂಡು ತಂಡದಲ್ಲಿದ್ದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಇವರ ಸ್ಥಾನದಲ್ಲಿ ಪೃಥ್ವಿ ಶಾ ಆಯ್ಕೆಯಾಗಿದ್ದು, ಇದಾಗ್ಯೂ ಮೊದಲ ಟೆಸ್ಟ್ ವೇಳೆ ಶಾ ಇಂಗ್ಲೆಂಡ್ ತಲುಪಲಾಗುವುದಿಲ್ಲ. ಹೀಗಾಗಿ ಕೆಎಲ್ ರಾಹುಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿ ಮಧ್ಯಮ ಕ್ರಮಾಂಕದಲ್ಲಿ ಹನುಮಾ ವಿಹಾರಿ ಹಾಗೂ ಚೇತೇಶ್ವರ ಪೂಜಾರ ಅವರನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಆಟಗಾರರು ನಿರಂತರವಾಗಿ ಗಾಯಗೊಳ್ಳುತ್ತಿರುವು ಇದೀಗ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಮಯಾಂಕ್ ಮೊದಲು, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಇವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಇಬ್ಬರೂ ಬ್ಯಾಟ್ಸ್ಮನ್ಗಳು ಇನ್ನಷ್ಟೇ ಇಂಗ್ಲೆಂಡ್ ತಲುಪಬೇಕಿದ್ದು, ಆ ಬಳಿಕ ಕ್ವಾರಂಟೈನ್ ಮುಗಿಸಿ ಮೂರನೇ ಟೆಸ್ಟ್ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.
NEWS ?- Mayank Agarwal ruled out of first Test due to concussion.
The 30-year-old is stable and will remain under close medical observation.
More details here – https://t.co/6B5ESUusRO #ENGvIND pic.twitter.com/UgOeHt2VQQ
— BCCI (@BCCI) August 2, 2021
ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಪ್ರಾರಂಭವಾಗಲಿದೆ. 2ನೇ ಟೆಸ್ಟ್ ಪಂದ್ಯವು ಆಗಸ್ಟ್ 12 ರಿಂದ 16ರವರೆಗೆ ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯವು 25 ರಿಂದ ಪ್ರಾರಂಭವಾಗಲಿದ್ದು, 4ನೇ ಟೆಸ್ಟ್ ಸೆಪ್ಟೆಂಬರ್ 2 ಕ್ಕೆ ಶುರುವಾಗಿ ಸೆ.6 ರವರೆಗೆ ನಡೆಯಲಿದೆ. ಇನ್ನು ಅಂತಿಮ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 10 ರಿಂದ ಸೆ.14ರವರೆಗೆ ಜರುಗಲಿದೆ.
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್
ಹೆಚ್ಚುವರಿ ಆಟಗಾರರು: ಪ್ರಸಿದ್ಧ್ ಕೃಷ್ಣ, ಅರ್ಝಾನ್ ನಾಗ್ವಾಸ್ವಾಲಾ
ಇದನ್ನೂ ಓದಿ: PV Sindhu: ಪದಕ ಗೆದ್ದರೂ ಅಭಿನಂದಿಸಿಲ್ಲ, ಬಾಡ್ಮಿಂಟನ್ ತಾರೆಯರ ಒಳ ಮನಿಸು..!
ಇದನ್ನೂ ಓದಿ: BCCI: ಯುವ ಕ್ರಿಕೆಟಿಗರತ್ತ ಬಿಸಿಸಿಐ ಚಿತ್ತ: ಶೀಘ್ರದಲ್ಲೇ ಅಂಡರ್-25 ಟೂರ್ನಮೆಂಟ್
ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ
(England vs India: Mayank Agarwal Ruled Out Of First Test)