Virat Kohli: ‘ಗೆಲುವು ನಮ್ಮ ಸಂಸ್ಕೃತಿ; ದಾಖಲೆಗಳು ಉತ್ತಮ ಪಂದ್ಯವಾಡಿದ್ದರ ಫಲಿತಾಂಶಗಳು’- ನಾಯಕ ವಿರಾಟ್ ಕೊಹ್ಲಿ
Dinesh Karthik: ಇಂಗ್ಲೆಂಡ್ನಂತಹ ದೇಶದ ವಿರುದ್ಧ ಅವರದೇ ನೆಲದಲ್ಲಿ ಗೆಲ್ಲುವುದು ವಿಶ್ವದ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಆಡಿ ಗೆಲ್ಲುವುದಕ್ಕೆ ಸಮಾನವಾದದ್ದು ಎನ್ನುವುದು ಭಾರತ ಕ್ರಿಕೆಟ್ ತಂಡದ ಕಪ್ತಾನ ಕೊಹ್ಲಿ ಅನಿಸಿಕೆ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯಲ್ಲಿ ಅತ್ಯುತ್ತಮ ಗೆಲುವಿನ ಸರಾಸರಿಯನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ಅನ್ನು ರಕ್ಷಣಾತ್ಮಕ ಆಟವಾಗಿ ನೋಡುತ್ತಿದ್ದ ಕಾಲದಲ್ಲಿ, ಅದನ್ನು ಆಕ್ರಮಣಕಾರಿ ಮಾದರಿಯಲ್ಲಿ ಆಡಿ ಸೈ ಎನಿಸಿಕೊಂಡವರು ವಿರಾಟ್ ಕೊಹ್ಲಿ. ಮೈದಾನದಲ್ಲಿ ಕೊಹ್ಲಿಯವರ ಆಕ್ರಮಣಕಾರಿ ಮನೋವೃತ್ತಿಯನ್ನು ಹಲವರು ಟೀಕಿಸುತ್ತಾರೆ. ಆದರೆ ಅವರೂ ಸಹ ವಿರಾಟ್ ಅವರ ಆಟದ ಕಿಚ್ಚನ್ನು, ಪ್ರತೀ ಕ್ಷಣವೂ ಛಲದಿಂದ ಹೋರಾಡುವ ಮನೋವೃತ್ತಿಯನ್ನು ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ ಇಂಗ್ಲೆಂಡ್ ಕೂಡಾ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದು, ವಿಶ್ವದ ಬಲಾಡ್ಯ ಎರಡು ತಂಡಗಳು ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಸೀರೀಸ್ ಅನ್ನು ಆಡಲಿರುವುದು ಸಹಜವಾಗಿಯೇ ಕುತೂಹಲ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಮತ್ತೋರ್ವ ಆಟಗಾರ ಮತ್ತು ವೀಕ್ಷಕ ವಿವರಣೆಕಾರ ದಿನೇಶ್ ಕಾರ್ತಿಕ್ ಸ್ಕೈ ಸ್ಪೋರ್ಟ್ಸ್ಗಾಗಿ ವಿರಾಟ್ ಕೊಹ್ಲಿಯವರ ಸಂದರ್ಶನ ಮಾಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಕುರಿತ ಅವರ ನಿಲುವುಗಳನ್ನು ತೆರೆದಿಟ್ಟಿದ್ದಾರೆ.
ಪ್ರತೀ ಟೆಸ್ಟ್ ಪಂದ್ಯವನ್ನೂ ಗೆಲ್ಲಬೇಕು, ದಾಖಲೆಗಳು ಮುಖ್ಯವಲ್ಲ ಎನ್ನುವ ಕೊಹ್ಲಿ ಅದಕ್ಕೆ ತಮ್ಮದೇ ಆದ ಕಾರಣ ನೀಡುತ್ತಾರೆ. ‘ನನಗೆ ವೈಯಕ್ತಿಕವಾಗಿ ಗೆಲುವಷ್ಟೇ ಮುಖ್ಯ. ನಾವು ಮೈದಾನಕ್ಕಿಳಿಯುವುದೇ ಪ್ರತೀ ಪಂದ್ಯವನ್ನೂ ಗೆಲ್ಲಬೇಕು ಎಂಬ ಉದ್ದೇಶದಿಂದ. ಗೆಲುವು ನಮಗೆ ಸಂಸ್ಕೃತಿಯಿದ್ದ(Culture) ಹಾಗೆ. ದಾಖಲೆಗಳೇನಿದ್ದರೂ ಉತ್ತಮ ಪಂದ್ಯವಾಡಿದ್ದರ ಫಲಿತಾಂಶಗಳಷ್ಟೇ(result)..’ ಎನ್ನುತ್ತಾರೆ ವಿರಾಟ್ ಕೊಹ್ಲಿ.
ಇಂಗ್ಲೆಂಡ್ನಲ್ಲಿ ಟೆಸ್ಟ್ ಕ್ರಿಕೆಟ್ ಗೆಲ್ಲಲು ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿ ಭಾರತದ ಆಟಗಾರರು ಎಂತಹ ಮನೋಸ್ಥಿತಿಯನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಕೊಹ್ಲಿ ವಿವರಿಸಿದ್ದಾರೆ.‘ಪ್ರತೀ ಪಂದ್ಯದ ಪ್ರತೀ ದಿನವೂ ಮುಖ್ಯವಾದದ್ದು. ಅದನ್ನು ಸಮರ್ಥವಾಗಿ ಎದುರಿಸುವುದಕ್ಕೆ ಕಠಿಣ ಸಂದರ್ಭದಲ್ಲೂ ಧೈರ್ಯ ತೋರಿಸಬೇಕು. ಜೊತೆಗೆ ದಿನದಿಂದ ದಿನಕ್ಕೆ ನಮ್ಮ ಪ್ರದರ್ಶನ ಅತ್ಯುತ್ತಮವಾಗಿರುವಂತೆ ಪ್ರಯತ್ನಿಸಬೇಕು. ಇಂತಹ ದೀರ್ಘ ಸರಣಿಗಳಲ್ಲಿ ಟೂರ್ನಿಯುದ್ದಕ್ಕೂ ವರ್ಕ್ಲೋಡ್ ಅನ್ನು ನಿರ್ವಹಿಸುತ್ತಾ, ಮಾನಸಿಕ ಮತ್ತು ದೈಹಿಕವಾಗಿ ಸದೃಡವಾಗಿರುವುದು ಯಶಸ್ಸಿಗೆ ಕೀಲಿಕೈ’ ಎಂದಿದ್ದಾರೆ ಕೊಹ್ಲಿ.
ಇಂಗ್ಲೆಂಡ್ನಂತಹ ದೇಶದ ವಿರುದ್ಧ ಅವರದೇ ನೆಲದಲ್ಲಿ ಗೆಲ್ಲುವುದು ವಿಶ್ವದ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಆಡಿ ಗೆಲ್ಲುವುದಕ್ಕೆ ಸಮಾನವಾದದ್ದು ಎನ್ನುವುದು ಕೊಹ್ಲಿಯವರ ಅಭಿಪ್ರಾಯ. ಕಾರಣ, ಇಂಗ್ಲೆಂಡ್ ತಂಡವನ್ನು ಅವರದೇ ನೆಲದಲ್ಲಿ ಬಗ್ಗುಬಡಿಯುವುದು ಬಹಳ ಕಷ್ಟ. ಅಲ್ಲಿ ವಿಶ್ವದರ್ಜೆಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವಿದೆ. ಜೊತೆಗೆ ಭಾರತದಲ್ಲಿರುವುದಕ್ಕಿಂತ ತೀರಾ ಭಿನ್ನ ಬಗೆಯ, ಸ್ವಿಂಗ್ ಹಾಗೂ ವೇಗಕ್ಕೆ ನೆರವಾಗುವ ಪಿಚ್ಗಳಿವೆ. ಆದ್ದರಿಂದಲೇ ಇಂಗ್ಲೆಂಡ್ನಲ್ಲಿ ಟೆಸ್ಟ್ ಗೆಲುವು ಬಹಳ ಶ್ರೇಷ್ಠ ಎನ್ನುವುದು ಕೊಹ್ಲಿಯ ಅನಿಸಿಕೆ. ಈ ಮನಸ್ಥಿತಿಯಲ್ಲಿಯೇ ಇಂಗ್ಲೆಂಡ್ ವಿರುದ್ಧವೂ ಕಣಕ್ಕಿಳಿಯುತ್ತಿರುವ ಕೊಹ್ಲಿ ಪಡೆ, ಯಾವ ರೀತಿ ತನ್ನ ಸಾಮರ್ಥ್ಯವನ್ನು ಮೈದಾನದಲ್ಲಿ ತೋರ್ಪಡಿಸಲಿದೆ ಎಂಬುದನ್ನು ಕಾದು ನೋಡಬೇಕು.
ದಿನೇಶ್ ಕಾರ್ತಿಕ್ ಹಂಚಿಕೊಂಡಿರುವ ವಿರಾಟ್ ಕೊಹ್ಲಿಯವರನ್ನು ಸಂದರ್ಶಿಸುತ್ತಿರುವ ಚಿತ್ರ ಮತ್ತು ವಿಡಿಯೊ:
View this post on Instagram
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ನಾಳೆ (ಆಗಸ್ಟ್ 4)ರಿಂದ ಆರಂಭವಾಗಲಿದ್ದು, ಸೋನಿ ಲಿವ್ ಅಥವಾ ಜಿಯೊ ಟಿವಿಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಇದನ್ನೂ ಓದಿ:
(Virat Kohli opens up about his views on test matches in an interview made by Dinesh Karthik)
