ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ನವೆಂಬರ್ 7 ರಿಂದ ಶುರುವಾಗಲಿದೆ. ಮೊದಲಿಗೆ ಅಭ್ಯಾಸ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಮೂರು ಮ್ಯಾಚ್ಗಳ ಏಕದಿನ ಸರಣಿ ಜರುಗಲಿದೆ. ಏಕದಿನ ಸರಣಿಯ ಬಳಿಕ ಉಭಯ ತಂಡಗಳ ನಡುವಣ ಐದು ಮ್ಯಾಚ್ಗಳ ಟಿ20 ಸರಣಿ ನಡೆಯಲಿದೆ.

ನವೆಂಬರ್ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಗೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರುಗಳ ಈ ತಂಡಗಳನ್ನು ಹ್ಯಾರಿ ಬ್ರೂಕ್ ಮುನ್ನಡೆಸಲಿದ್ದಾರೆ. ಇನ್ನು ಗಾಯದ ಕಾರಣ ಈ ಸರಣಿಯಿಂದ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಜೋಸ್ ಬಟ್ಲರ್ ಹೊರಗುಳಿದಿದ್ದಾರೆ.
ಸ್ಟಾರ್ ಆಟಗಾರರ ಕಂಬ್ಯಾಕ್:
ವಿಶ್ರಾಂತಿಯಲ್ಲಿದ್ದ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಮತ್ತು ಫಿಟ್ನೆಸ್ ಮರಳಿ ಪಡೆದಿರುವ ಜೇಕಬ್ ಬೆಥೆಲ್ ಹಾಗೂ ಫಿಲ್ ಸಾಲ್ಟ್ ಏಕದಿನ ತಂಡಕ್ಕೆ ಮರಳಿದ್ದಾರೆ.
ಯುವ ಆಟಗಾರರಿಗೆ ಮನ್ನಣೆ:
ಇಂಗ್ಲೆಂಡ್ ಟಿ20 ತಂಡದಲ್ಲಿ 18 ವರ್ಷದ ಥಾಮಸ್ ರೀವ್ ಮತ್ತು ಎಡ್ಡಿ ಜಾಕ್ ಅವರಿಗೆ ಚೊಚ್ಚಲ ಅವಕಾಶ ನೀಡಲಾಗಿದೆ. ಹೀಗಾಗಿ ಆಸೀಸ್ ವಿರುದ್ಧ ಇಬ್ಬರು ಯುವ ಆಟಗಾರರು ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
ಕಾರ್ಯಭಾರ ನಿರ್ವಹಣೆ:
ಮುಂಬರುವ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಬೇಕರ್ ಮತ್ತು ಟಂಗ್ ಅವರಿಗೆ ಏಕದಿನ ಪಂದ್ಯಗಳ ನಂತರ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಪ್ರಮುಖರ ಗೈರುಹಾಜರಿ:
ಗಾಯದ ಕಾರಣದಿಂದ ಜೋಸ್ ಬಟ್ಲರ್, ಸಾಕಿಬ್ ಮಹಮೂದ್ ಹೊರಗುಳಿದಿದ್ದರೆ, ರೆಹಾನ್ ಅಹ್ಮದ್ ಮತ್ತು ಬ್ರೈಡನ್ ಕಾರ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅದರಂತೆ ಆಸ್ಟ್ರೇಲಿಯಾ ವಿರುದ್ಧದ ವೈಟ್ ಬಾಲ್ ಸರಣಿಗೆ ಇಂಗ್ಲೆಂಡ್ ತಂಡ ಈ ಕೆಳಗಿನಂತಿದೆ…
ಇಂಗ್ಲೆಂಡ್ ಏಕದಿನ ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋ ರೂಟ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಹೆನ್ರಿ ಕ್ರೊಕೊಂಬೆ, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್ ಮತ್ತು ಜೋಶ್ ಟಂಗ್
ಇದನ್ನೂ ಓದಿ: ದಾಖಲೆಗಳ ಮೇಲೆ ದಾಖಲೆ… ಒಂದೇ ಪಂದ್ಯದಲ್ಲಿ 10 ದಾಖಲೆ ಬರೆದ ಶಾಯ್ ಹೋಪ್
ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್, ಜೋರ್ಡನ್ ಕಾಕ್ಸ್, ಹೆನ್ರಿ ಕ್ರೊಕೊಂಬೆ, ಸ್ಯಾಮ್ ಕರನ್, ಲಿಯಾಮ್ ಡಾಸನ್, ಅನ್ಯುರಿನ್ ಡೊನಾಲ್ಡ್, ಎಡ್ಡಿ ಜಾಕ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್, ಥಾಮಸ್ ರೀವ್, ಫಿಲ್ ಸಾಲ್ಟ್ ಮತ್ತು ಲ್ಯೂಕ್ ವುಡ್.
Published On - 2:12 pm, Thu, 15 October 26




