ದಾಖಲೆಗಳ ಮೇಲೆ ದಾಖಲೆ… ಒಂದೇ ಪಂದ್ಯದಲ್ಲಿ 10 ದಾಖಲೆ ಬರೆದ ಶಾಯ್ ಹೋಪ್
ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಅಜೇಯ 102 ರನ್ ಬಾರಿಸಿದ್ದರು. ಈ 102 ರನ್ಗಳೊಂದಿಗೆ ಹೋಪ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ..

Shai HopeImage Credit source: GettyImages
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಶಾಯ್ ಹೋಪ್ ಪ್ರಸ್ತುತ ಭಾರತ ಪ್ರವಾಸದಲ್ಲಿ ಅಕ್ಷರಶಃ ರನ್ ಮಳೆ ಹರಿಸುತ್ತಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಭಾರತದ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಅಜೇಯ 102 ರನ್ ಚಚ್ಚಿದ ಹೋಪ್, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹಲವು ಶ್ರೇಷ್ಠ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆ ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ…
- ಅತ್ಯಧಿಕ ಟಿ20 ಸೆಂಚುರಿ: ಭಾರತದ ವಿರುದ್ಧದ ಟಿ20 ಶತಕದೊಂದಿಗೆ ಶಾಯ್ ಹೋಪ್ ವಿಂಡೀಸ್ನ ದಿಗ್ಗಜರಾದ ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್ (ತಲಾ 2 ಶತಕ) ಅವರ ದಾಖಲೆಯನ್ನು ಮುರಿದು, ವೆಸ್ಟ್ ಇಂಡೀಸ್ ಪರ ಟಿ20ಯಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಎರಡು ಶತಕಗಳ ದಾಖಲೆ: ರಾಂಚಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲೂ ಹೋಪ್ 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ 4ನೇ ಪಂದ್ಯದಲ್ಲೂ ಸೆಂಚುರಿ ದಾಖಲಿಸುವ ಮೂಲಕ, ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ ಎರಡು ಶತಕ ಬಾರಿಸಿದ ವಿಶ್ವದ ಮೊದಲ ನಾಯಕ ಎಂಬ ಐತಿಹಾಸಿಕ ಕೀರ್ತಿಗೆ ಭಾಜನರಾಗಿದ್ದಾರೆ.
- ಮೂರು ‘ಫಿಫ್ಟಿ ಪ್ಲಸ್’: ಒಂದೇ ಟಿ20 ಸರಣಿಯಲ್ಲಿ ಮೂರು ಬಾರಿ 50 ಪ್ಲಸ್ ರನ್ ಗಳಿಸಿದ ವಿಶ್ವದ ಕೆಲವೇ ಕೆಲವು ನಾಯಕರ (ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಾಹಿಬ್ಝಾದ ಫರ್ಹಾನ್) ಪಟ್ಟಿಗೆ ಹೋಪ್ ಸೇರಿದ್ದಾರೆ. ಆದರೆ, ವಿದೇಶಿ ಸರಣಿಯೊಂದರಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ನಾಯಕ ಎಂಬ ದಾಖಲೆಯನ್ನು ಶಾಯ್ ಹೋಪ್ ತಮ್ಮದಾಗಿಸಿಕೊಂಡಿದ್ದಾರೆ.
- ಗೇಲ್ ದಾಖಲೆ ಸರಿಗಟ್ಟಿದ ಹೋಪ್: ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದು ಹೋಪ್ ಅವರ 16ನೇ ಫಿಫ್ಟಿ ಪ್ಲಸ್ ಸ್ಕೋರ್ ಆಗಿದ್ದು, ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು 50+ ರನ್ ಗಳಿಸಿದ್ದ ಕ್ರಿಸ್ ಗೇಲ್ (16) ಅವರ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದ್ದಾರೆ.
- 2,000 ರನ್ಗಳ ದಾಖಲೆ: ಈ ಪಂದ್ಯದ ಅವಧಿಯಲ್ಲಿ ಶಾಯ್ ಹೋಪ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 2,000 ರನ್ ಪೂರೈಸಿದರು. ಈ ಮೈಲಿಗಲ್ಲು ತಲುಪಿದ ವೆಸ್ಟ್ ಇಂಡೀಸ್ನ ಕೇವಲ 4ನೇ ಬ್ಯಾಟರ್ (ನಿಕೋಲಸ್ ಪೂರನ್, ಕ್ರಿಸ್ ಗೇಲ್, ಮಾರ್ಲನ್ ಸ್ಯಾಮ್ಯುಯೆಲ್ಸ್ ನಂತರ) ಎಂಬ ಹೆಗ್ಗಳಿಕೆ ಇವರದ್ದಾಗಿದೆ.
- ಗರಿಷ್ಠ ಸ್ಕೋರ್ ರೆಕಾರ್ಡ್: ಭಾರತದ ವಿರುದ್ಧದ ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ ಬ್ಯಾಟರ್ ಒಬ್ಬರು ಗಳಿಸಿದ ಗರಿಷ್ಠ ರನ್ಗಳ ದಾಖಲೆಯನ್ನು ಹೋಪ್ ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ (229 ರನ್) ಅವರ ದಾಖಲೆಯನ್ನು ದಾಟಿ ಶಾಯ್ ಹೋಪ್ (261 ರನ್) ಮುರಿದಿದ್ದಾರೆ.
- ನಾಲ್ಕು ಸೆಂಚುರಿಗಳ ಸಾಧನೆ: ಕ್ರಿಕೆಟ್ ಇತಿಹಾಸದಲ್ಲೇ ಭಾರತ ಪ್ರವಾಸಕ್ಕೆ ಬಂದು, ಒಂದೇ ಪ್ರವಾಸದಲ್ಲಿ ಭಾರತದ ವಿರುದ್ಧ 4 ಶತಕಗಳನ್ನು (2 ಏಕದಿನ, 2 ಟಿ20) ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ಶಾಯ್ ಹೋಪ್ ತಮ್ಮದಾಗಿಸಿಕೊಂಡಿದ್ದಾರೆ.
- ಐದನೇ ಬ್ಯಾಟರ್: ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ ಎರಡು ಶತಕಗಳನ್ನು ಸಿಡಿಸಿದ ವಿಶ್ವದ ಕೇವಲ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಶಾಯ್ ಹೋಪ್ ಪಾತ್ರರಾಗಿದ್ದಾರೆ. ಆದರೆ, ನಾಯಕನಾಗಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಹೋಪ್ ಪಾಲಾಗಿದೆ.
- ಗರಿಷ್ಠ ವೈಯಕ್ತಿಕ ಸ್ಕೋರ್: ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ದಾಖಲಾದ ಅತ್ಯುನ್ನತ ವೈಯಕ್ತಿಕ ಸ್ಕೋರ್ ಎಂಬ ದಾಖಲೆಯನ್ನು ಶಾಯ್ ಹೋಪ್ (102*) ತಮ್ಮದಾಗಿಸಿಕೊಂಡಿದ್ದಾರೆ.
- ಅಪರೂಪದ ಶತಕಗಳ ದಾಖಲೆ: ಕ್ರಿಕೆಟ್ ಲೋಕ ಕಾಣದ ಅತ್ಯಂತ ವಿಶಿಷ್ಟ ದಾಖಲೆಯೊಂದು ಶಾಯ್ ಹೋಪ್ ಹೆಸರಿನಲ್ಲಿದೆ. ಶಾಯ್ ಹೋಪ್ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಬಾರಿಸಿರುವ ಮೂರೂ ಶತಕಗಳ ಅಂತಿಮ ಸ್ಕೋರ್ ಬರೋಬ್ಬರಿ 102 ರನ್ (ನಾಟ್ ಔಟ್) ಆಗಿದೆ! (2024ರಲ್ಲಿ ಆಸ್ಟ್ರೇಲಿಯಾ ವಿರುದ್ಧ 102*, ಈ ಸರಣಿಯಲ್ಲಿ ಭಾರತದ ವಿರುದ್ಧ 2 ಬಾರಿ 102*). ಟಿ20ಯಲ್ಲಿ ಹೊಡೆದ ಎಲ್ಲಾ ಶತಕಗಳಲ್ಲೂ ಒಂದೇ ಸ್ಕೋರ್ ಗಳಿಸಿ ಅಜೇಯರಾಗಿ ಉಳಿದ ಏಕೈಕ ಬ್ಯಾಟರ್ ಎಂಬ ದಾಖಲೆಯೊಂದು ಕೂಡ ಹೋಪ್ ಹೆಸರಿಗೆ ಸೇರ್ಪಡೆಯಾಗಿದೆ.
Follow Us




