IND vs ENG: ಟೀಮ್ ಇಂಡಿಯಾದಲ್ಲಿ 3 ಬದಲಾವಣೆ, 1 ಸ್ಥಾನ ಪಲ್ಲಟ ಸಾಧ್ಯತೆ..!
England vs India, 2nd Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳಿಂದ ಸೋಲನುಭವಿಸಿತ್ತು. ಇದೀಗ ದ್ವಿತೀಯ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗುತ್ತಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಮೂರು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಯುವ ದಾಂಡಿಗ ಸಾಯಿ ಸುದರ್ಶನ್ ಆಡುವ ಬಳಗದಿಂದ ಹೊರಬೀಳಲಿದ್ದಾರೆ. ಅವರ ಬದಲಿಗೆ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಹಾಗೆಯೇ ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ ಅವರು ಸಹ ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳಲಿದ್ದಾರೆ. ಬದಲಿಗೆ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ಕಣಕ್ಕಿಳಿಸಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಅಷ್ಟೇ ಅಲ್ಲದೆ ವಿಶ್ರಾಂತಿ ಕಾರಣ 2ನೇ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿಯಲಿದ್ದಾರೆ. ಬುಮ್ರಾ ಬದಲಿಗೆ ಆಕಾಶ್ ದೀಪ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ಈ ಮೂರು ಬದಲಾವಣೆಯೊಂದಿಗೆ ಎಡ್ಜ್ಬಾಸ್ಟನ್ನಲ್ಲಿ ಕಣಕ್ಕಿಳಿಯಲು ಟೀಮ್ ಇಂಡಿಯಾ ನಿರ್ಧರಿಸಿದ್ದು, ಈ ಮೂಲಕ ಗೆಲುವಿನ ಲಯಕ್ಕೆ ಮರಳಲು ಪ್ಲ್ಯಾನ್ ರೂಪಿಸಲಾಗಿದೆ.
ಒಂದು ಸ್ಥಾನ ಪಲ್ಲಟ:
ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಕಣಕ್ಕಿಳಿದಿದ್ದರು. ಆದರೆ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದಿಂದ ಅವರನ್ನು ಕೈ ಬಿಡುವ ಸಾಧ್ಯತೆಯಿದೆ. ಇತ್ತ ಸಾಯಿ ಸುದರ್ಶನ್ ಹೊರಬಿದ್ದರೆ ಅವರ ಕ್ರಮಾಂಕದಲ್ಲಿ ಕರುಣ್ ನಾಯರ್ ಕಣಕ್ಕಿಳಿಯಲಿದ್ದಾರೆ.
ಅಂದರೆ ಕಳೆದ ಮ್ಯಾಚ್ನಲ್ಲಿ 6ನೇ ಕ್ರಮಾಂಕದಲ್ಲಿ ಆಡಿದ ಕರುಣ್ ನಾಯರ್ ಅವರನ್ನು 2ನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಮುಖ ಬದಲಾವಣೆಯೊಂದಿಗೆ ಎಡ್ಜ್ಬಾಸ್ಟನ್ನಲ್ಲಿ ಟೀಮ್ ಇಂಡಿಯಾ ಬಲಿಷ್ಠ ಆಂಗ್ಲ ಪಡೆಯನ್ನು ಎದುರಿಸಲಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಶುಭ್ಮನ್ ಗಿಲ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: IPL 2026: ಚೆನ್ನೈ ಸೂಪರ್ ಕಿಂಗ್ಸ್ಗೆ ಸಂಜು ಸ್ಯಾಮ್ಸನ್?
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್, ಜೋಶ್ ಟಂಗ್, ಶೋಯೆಬ್ ಬಶೀರ್.
