ಬರೋಬ್ಬರಿ 239 ರನ್… ಮೂರನೇ ಬಾರಿ ಪಂದ್ಯ ಗೆಲ್ಲಿಸಿದ ಶಿಮ್ರಾನ್ ಹೆಟ್ಮೆಯರ್
Shimron Hetmyer: ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯಲ್ಲಿ ಶಿಮ್ರಾನ್ ಹೆಟ್ಮೆಯರ್ ಸಿಡಿಲಬ್ಬರ ಮುಂದುವರೆದಿದೆ. ಕಳೆದ ಎರಡು ಪಂದ್ಯಗಳಲ್ಲಿ ವಿಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದ ಹೆಟ್ಮೆಯರ್ ಇದೀಗ ಮತ್ತೊಂದು ಅಜೇಯ ಹಾಫ್ ಸೆಂಚುರಿಯೊಂದಿಗೆ ಸಿಯಾಟಲ್ ಓರ್ಕಾಸ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ.

5 ಮ್ಯಾಚ್ 5 ಸೋಲು… ಮೂರು ಪಂದ್ಯ ಮೂರು ಗೆಲುವು… ಈ ಗೆಲುವುಗಳ ರೂವಾರಿ ಶಿಮ್ರಾನ್ ಹೆಟ್ಮೆಯರ್. ಈ ಬಾರಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸಿಯಾಟಲ್ ಓರ್ಕಾಸ್ ಆಡಿದ ಮೊದಲ 5 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಆದರೆ ಕೊನೆಯ ಮೂರು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸುವಲ್ಲಿ ಸಿಯಾಟಲ್ ಪಡೆ ಯಶಸ್ವಿಯಾಗಿದೆ. ಅದು ಕೂಡ ಶಿಮ್ರಾನ್ ಹೆಟ್ಮೆಯರ್ ಅವರ ವಿಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಎಂಬುದು ವಿಶೇಷ.
ಎಂಐ ನ್ಯೂಯಾರ್ಕ್ ವಿರುದ್ಧದ ಪಂದ್ಯದಲ್ಲಿ 238 ರನ್ಗಳನ್ನು ಚೇಸ್ ಮಾಡುವ ಮೂಲಕ ಸಿಯಾಟಲ್ ಓರ್ಕಾಸ್ ತಂಡವು ದಾಖಲೆಯ ಜಯ ಸಾಧಿಸಿತ್ತು. ಈ ಗೆಲುವಿನ ರೂವಾರಿ ಎಡಗೈ ದಾಂಡಿಗ ಶಿಮ್ರಾನ್ ಹೆಟ್ಮೆಯರ್. ಈ ಪಂದ್ಯದಲ್ಲಿ 40 ಎಸೆತಗಳನ್ನು ಎದುರಿಸಿದ ಹೆಟ್ಮೆಯರ್ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 97 ರನ್ ಬಾರಿಸಿದ್ದರು. ಈ ಮೂಲಕ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಸಿಯಾಟಲ್ ಓರ್ಕಾಸ್ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟಿದ್ದರು.
ಇದಾದ ಬಳಿಕ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ ತಂಡವು 203 ರನ್ಗಳ ಗುರಿ ಬೆನ್ನತ್ತಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ವಿಶೇಷ ಎಂದರೆ ಈ ಪಂದ್ಯದಲ್ಲೂ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು ಶಿಮ್ರಾನ್ ಹೆಟ್ಮೆಯರ್. ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹೆಟ್ಮೆಯರ್ 26 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 64 ರನ್ ಬಾರಿಸಿ ಕೊನೆಯ ಓವರ್ನಲ್ಲಿ ಸಿಯಾಟಲ್ ಪಡೆಗೆ ಗೆಲುವು ತಂದುಕೊಟ್ಟಿದ್ದರು.
ಇದೀಗ ಬಲಿಷ್ಠ ಪಡೆ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಪಂದ್ಯದಲ್ಲೂ ಸಿಯಾಟಲ್ ಓರ್ಕಾಸ್ ತಂಡ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಶಿಮ್ರಾನ್ ಹೆಟ್ಮೆಯರ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಸಿಯಾಟಲ್ ಓರ್ಕಾಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಮ್ರಾನ್ ಹೆಟ್ಮೆಯರ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದರು. ಕೇವಲ 37 ಎಸೆತಗಳನ್ನು ಎದುರಿಸಿದ ಹೆಟ್ಮೆಯರ್ 7 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 78 ರನ್ ಬಾರಿಸಿದರು. ಈ ಮೂಲಕ 19.3 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸುವ ಮೂಲಕ ಶಿಮ್ರಾನ್ ಹೆಟ್ಮೆಯರ್ ಸಿಯಾಟಲ್ ಓರ್ಕಾಸ್ ತಂಡಕ್ಕೆ ಮೂರನೇ ಗೆಲುವು ತಂದುಕೊಟ್ಟರು.
ಇದನ್ನೂ ಓದಿ: IPL 2026: CSK ತಂಡಕ್ಕೆ ಸಂಜು ಸ್ಯಾಮ್ಸನ್ ಎಂಟ್ರಿ ಬಹುತೇಕ ಖಚಿತ
ವಿಶೇಷ ಎಂದರೆ ಈ ಬಾರಿ ಸಿಯಾಟಲ್ ಓರ್ಕಾಸ್ ಗೆದ್ದಿರುವ ಮೂರು ಪಂದ್ಯಗಳಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದು ಶಿಮ್ರಾನ್ ಹೆಟ್ಮೆಯರ್ ಅವರಿಗೆ. ಅದರಲ್ಲೂ ಕಳೆದ ಮೂರು ಮ್ಯಾಚ್ಗಳಲ್ಲಿ 103 ಎಸೆತಗಳನ್ನು ಎದುರಿಸಿರುವ ಹೆಟ್ಮೆಯರ್ 22 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ ಒಟ್ಟು 239 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
